ಬೆಂಗಳೂರು: ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವ ಮೂಲಕ ವ್ಯಸನಿಗಳು ಸಾವನ್ನಪುವುದನ್ನು ತಪ್ಪಿಸಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಾರದಲ್ಲಿ ಎರಡು ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ವ್ಯಸನಿಗಳು ಸಾವನ್ನಪ್ಪುವುದನ್ನು ತಪ್ಪಿಸಬಹುದು. ಅಲ್ಲದೆ ಕಾಳ ಸಂತೆಯಲ್ಲಿ ಮದ್ಯ ಮಾರಾಟ ಆಗುವುದನ್ನು ತಪ್ಪಿಸಬೇಕು. ವಾರದಲ್ಲಿ ಎರಡು ದಿನ ಎಲ್ಲ ವೈನ್ ಶಾಪ್, ಎಂಎಸ್‍ಐಎಲ್ ಮಳಿಗೆಗಳಲ್ಲಿ ನಿಗದಿತ ಅವಧಿಯಲ್ಲಿ ಮದ್ಯ ಮಾರಾಟವಾಗಬೇಕು. ಈಗ ಬಾರ್ ಮಾಲೀಕರೇ ತಮ್ಮ ಬಾರ್ ಗಳಲ್ಲಿ ಕಳ್ಳತನ ಮಾಡಿಸುವ ಸ್ಥಿತಿ ಬಂದಿದೆ. ಈ ಸ್ಥಿತಿ ತಪ್ಪಿಸಿ ಎಂದು ಹೇಳಿದ್ದಾರೆ.
ಮದ್ಯ ವ್ಯಸನಿಗಳ ಆತ್ಮಹತ್ಯೆ ತಪ್ಪಿಸಲು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು. ಎಲ್ಲ ಎಂಎಸ್‍ಐಎಲ್ ಹಾಗೂ ವೈನ್ ಸ್ಟೋರ್ ತೆರೆಯಬೇಕು. ವಾರದಲ್ಲಿ 2 ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ. ನಿಯಮ ಪಾಲಿಸದಿದ್ದರೆ ಲೈಸನ್ಸ್ ರದ್ದು ಮಾಡಿ. ಬಾರ್ ಮತ್ತು ರೆಸ್ಟೋರೆಂಟ್ ಓಪನ್ ಆದರೆ ಗಲಾಟೆ ಆಗುತ್ತದೆ. ಆದರೆ ಎಂಎಸ್‍ಐಎಲ್ ಹಾಗೂ ಬಾರ್‍ಗಳ ಮೂಲಕ ಪಾರ್ಸಲ್ ಕೊಟ್ಟರೆ ಸಮಸ್ಯೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಬಾರ್‍ನವರು ಜಾಸ್ತಿ ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ವ್ಯಸನ ಅನ್ನೋದು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಅವರ ಜೀವ ಉಳಿಸುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಸಿಎಂ ಯಡಿಯೂರಪ್ಪ ಗಮನಕ್ಕೆ ತರುತ್ತೇನೆ. ಎಲ್ಲರಿಗೂ ಮದ್ಯ ಮಾರಾಟ ಮಾಡಬೇಕು ಎಂಬ ಅಭಿಪ್ರಾಯವಿದೆ. ಆದರೆ ಹೇಳಲು ಯಾರಿಗೂ ಧೈರ್ಯವಿಲ್ಲ, ನಾನು ಹೇಳುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
