ಮಂಗಳೂರು: ಲಾಕ್‍ಡೌನ್ ಹಿನ್ನೆಲೆ ಜನದಟ್ಟಣೆ ಕಡಿಮೆಯಾಗಿರುವುದರಿಂದ ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ನಂತರ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಘಟನೆ ನಡೆದಿದ್ದು, ಮಜಿ ಮೋನಪ್ಪ ಅವರ ಜಮೀನಿನಲ್ಲಿರುವ ಸುಮಾರು 6 ಅಡಿ ಆಳದ ಬಾವಿಗೆ ಚಿರತೆ ಬಿದ್ದು ಆತಂಕ ಸೃಷ್ಟಿಸಿತ್ತು. ಬಾವಿಯಿಂದ ಮೇಲಕ್ಕೆ ಬರಲು ಸಾಧ್ಯವಾಗದೆ ಹೊರಳಾಡುತ್ತಿತ್ತು. ರಾತ್ರಿ ವೇಳೆ ಕಾಣದೆ ಚಿರತೆ ಬಾವಿಯಲ್ಲಿ ಬಿದ್ದಿದ್ದು, ಬೆಳಗ್ಗೆ ಹೊಲದ ಮಾಲೀಕರ ಗಮನಕ್ಕೆ ಬಂದಿದೆ.
ಬಳಿಕ ಮನೆಯವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ, ಅಗ್ನಿ ಶಾಮಕದಳ ಸಿಬ್ಬಂದಿ ಹಾಗೂ ಪೋಲೀಸರು ಜಂಟಿ ಕಾರ್ಯಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಿದ್ದಾರೆ. ಸುಮಾರು ಎರಡು ವರ್ಷ ಪ್ರಾಯದ ಮರಿ ಚಿರತೆ ಇದಾಗಿದ್ದು, ಚಿರತೆಯನ್ನು ರಕ್ಷಿಸಿದ ಬಳಿಕ ಸುರಕ್ಷಿತವಾಗಿ ಪಶ್ಚಿಮಘಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
