Breaking News
Home / ಜಿಲ್ಲೆ / ಕಲೆಗಳ ತೌರೂರು ಉತ್ತರ ಕರ್ನಾಟಕದಲ್ಲಿ ಭಜನೆ,ಬಯಲಾಟ,ನಾಟಕ,ಸಣ್ಣಾಟ ಬಯಲಾಟ ಮರೆಯಾಗದಿರಲಿಪರಂಪರೆ..!

ಕಲೆಗಳ ತೌರೂರು ಉತ್ತರ ಕರ್ನಾಟಕದಲ್ಲಿ ಭಜನೆ,ಬಯಲಾಟ,ನಾಟಕ,ಸಣ್ಣಾಟ ಬಯಲಾಟ ಮರೆಯಾಗದಿರಲಿಪರಂಪರೆ..!

Spread the love

 

ಮರೆಯಾಗದಿರಲಿ ಬಯಲಾಟ ಪರಂಪರೆ..!

ಕಲೆಗಳ ತೌರೂರು ಉತ್ತರ ಕರ್ನಾಟಕದಲ್ಲಿ ಭಜನೆ,ಬಯಲಾಟ,ನಾಟಕ,ಸಣ್ಣಾಟ ಹೀಗೆ ವಿಭಿನ್ನ ಬಗೆಯ ಕಲೆಗಳು ನಮ್ಮಲ್ಲಿನ್ನೂ ಜೀವಂತವಾಗಿ.ಇಂತಹ ಕಲೆಯನ್ನು ನೋಡುವುದೆ ವಿಶೇಷ.ಏರು ದ್ವನಿ,ತಾಳದ ಗತ್ತು ,ಹಾರ್ಮೋನಿಯಂ ಸ್ವರ,ಕುಣಿತ,ಬಟ್ಟೆ ,ಮುಖದ‌ ಮೇಲಿನ‌ ಬಣ್ಣ ಗಮನಸೆಳೆಯುವವು.ಪೂರ್ವ ಸಿದ್ದತೆ ಬಯಲುಪ್ರದೇಶದಲ್ಲಿ ರಂಗಸಜ್ಜಿಕೆ ಹಾಕುವ ಮೂಲಕ ಲೈಟದೀಪಗಳ ಅಲಂಕಾರಿಕೆಗಳೆ ಮತ್ತೊಂದು ಆಕರ್ಷಕ. ಹಿಂದಿನ ಕಾಲದಲ್ಲಿ ಯಾವುದೆ ತರದ ಆಧುನಿಕ ತಂತ್ರಜ್ಞಾನ ಬಳಸದೆ ತಮ್ಮದೆ ಏರುಧ್ವನಿ ಮತ್ತು ಬೆಂಕಿಯ ಪಂಜಿನ‌ಬೆಳಕಿನಲ್ಲಿ ಆಟ ಪ್ರಾರಂಭವಾಗುತಿತ್ತು.ರಾತ್ರಿ ೯ ರಿಂದ ೧೦ ಗಂಟೆಗೆ ಪ್ರಾರಂಭ ಮಾಡಿ ರಾತ್ರಿಯಿಡೀ ಮನರಂಜೆಯ‌ ಜೊತೆಗೆ ಪುರಾಣ ತತ್ವ ಸಾರುವ ಕಲೆ ಇದಾಗಿದೆ.ಬಯಲಾಟ ಪ್ರಾರಂಭವಾಗುವ ಮುನ್ನವೆ ಜಾಗವನ್ನು ಭದ್ರಪಡಿಸುವ ಪರಿ ಅಂತೂ ನೆನಪಿನ ಬುತ್ತಿ ತೆರೆದಿಡುತ್ತದೆ.ಮಹಿಳೆಯರು ಮಕ್ಕಳು ಹಿರಿಯರು ಕಿರಿಯರು ಇದ್ಯಾವ ಬೇಧವಿಲ್ಲದೆ ಸೌಹಾರ್ದತೆಗೆ ಸಾಕ್ಷಿಯಾಗುತ್ತದೆ ಬಯಲಾಟ. ನೆಲದ ಮೇಲೆಯೆ ಕುಳಿತು ನೋಡುವ ಕಲೆಯಾಗಿದೆ.ಹಲವಾರು ಬಯಲಾಟದಲ್ಲಿ ಗಂಡುಮಕ್ಕಳೆ ಸ್ತ್ರೀ ಪಾತ್ರ ಮಾಡುವುದು ವಿಶೇಷ. ಸನ್ನಿವೇಶಕ್ಕೆ ತಕ್ಕಂತೆ ಬಟ್ಟೆ ಹಾಕೊಳ್ಳುದು.ಪದ ಕುಣಿತವೇ ಕರುನಾಡ ಸಂಸ್ಕ್ರತಿಯನ್ನು ತೆರೆದಿಡುವ ಇತಿಹಾಸವಾಗಿದೆ.

ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ ‘ಬಯಲಾಟ’ಗಳ ಸುಗ್ಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಕೆಲಸದ ಬಿಡುವು. ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಬಯಲಾಟ ಕಲಿಸುವವನಿಗೆ ‘ಭಾಗವತ’ ಎಂದು ಕರೆಯುತ್ತಾರೆ. ಈ ಭಾಗವತನಿಗೆ ಕಲಾವಿದರೆಲ್ಲರೂ ಸೇರಿ ಇಂತಿಷ್ಟು ದವಸ ಧಾನ್ಯಗಳೆಂದು ಸಂಭಾವನೆಯ ರೂಪದಲ್ಲಿ ಕೊಡುತ್ತಾರೆ. ಸಾಮಾನ್ಯವಾಗಿ ಬಯಲಾಟ ನಡೆಯುವುದು ಹಬ್ಬ, ಜಾತ್ರೆ ಮತ್ತಿತರ ಸಂತೋಷದ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನೆಂಟರಿಷ್ಟರು, ಅಕ್ಕಪಕ್ಕದ ಊರಿನವರ ಎದುರಿಗೆ ತಮ್ಮ ಕಲೆ ಪ್ರದರ್ಶಿಸಬೇಕೆಂಬುದು ಕಲಾವಿದರ ಆಸೆ. ಬಯಲಾಟದಲ್ಲಿ ಆಸಕ್ತಿಯುಳ್ಳವರು ಭಾಗವಹಿಸಬಹುದು. ಆದರೆ ಭಾಗವತರು ಅವರವರ ವಯೋಗುಣ, ಮೈಕಟ್ಟು, ಕಂಠಗಳಿಗೆ ಅನುಗುಣವಾಗಿ ಪಾತ್ರ ಹಂಚುತ್ತಾರೆ. ರಾಜಾ ಪಾತ್ರ ಮತ್ತು ಸ್ತ್ರೀ ಪಾತ್ರ ಬಹುಮುಖ್ಯ.. ಬಯಲಾಟ ಎಂಬ ನಾಟಕವು ಇದನ್ನು ಊರಿನ ಬಯಲು ಪ್ರದೇಶದಲ್ಲಿ (ದೇವಸ್ಥಾನ, ಕಟ್ಟೆ, ರಂಗಭವನ) ಆಡುವ ಕಲೆ. ಇದನ್ನು ದೊಡ್ಡಾಟ ಎಂತಲೂ ಕರೆಯುವರು. ಈ ನಾಟಕವು ಉತ್ತರ ಕರ್ನಾಟಕ (ರಾಯಚೂರು, ಕೊಪ್ಪಳ,ಬಳ್ಳಾರಿ,ವಿಜಾಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ) ಭಾಗದ ಪ್ರಸಿದ್ದಿ ಕಲೆ. ಬಯಲಾಟ ನಾಟಕ ರೂಪದ ಕಥಾ ರೂಪ, ಇದರ ಮುಖ್ಯವಾದ ಕಥಾವಸ್ತು ಎಂದರೆ ಪೌರಾಣಿಕ ಹಿನ್ನಲೆಯುಳ್ಳ ಪಾತ್ರಗಳಿಂದ ಕೂಡಿರುತ್ತದೆ. ಬಯಲಾಟದಲ್ಲಿ ಪೌರುಷದ ಕುಣಿತಗಳು, ಭರ್ಜರಿಯಾದ ವೇಷಭೂಷಣಗಳು, ಭವ್ಯವಾದ ರಂಗಮಂಟಪ, ಉದ್ದವಾದ ಮಾತುಗಾರಿಕೆ, ಹಾಸ್ಯ, ರೋಷ, ಸಂಗೀತ ಇದು ಬಯಲಾಟದ ವೈಶಿಷ್ಠತೆಗಳು.

ಕರಾವಳಿ ಪ್ರದೇಶ ಬಿಟ್ಟು ಉಳಿದಡೆ ಪ್ರಚಲಿತವಿದ್ದ ಯಕ್ಷಗಾನ ಆಟಕ್ಕೆ ಮೂಡಲಪಾಯ ಸಂಪ್ರದಾಯದಲ್ಲಿಯೇ ಉತ್ತರ ಕರ್ನಾಟಕದ ಆಟಗಳಿಗೂ ದಕ್ಷಿಣ ಕರ್ನಾಟಕದ ಆಟಗಳಿಗೂ ಸ್ವಲ್ಪ ಭಿನ್ನತೆ ಕಂಡುಬರುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಆಟವೆಂದೇ ಕರೆಯಲಾಗುವ ಈ ಪ್ರಕಾರವನ್ನು ವಿದ್ವಾಂಸರು, “ಬಯಲಾಟ” ,”ಮೂಡಲಪಾಯ ಆಟ” ದೊಡ್ಡಾಟ ಎಂದು ಕರೆಯುವರು.

ಬಯಲಾಟವು ಬಯಲು ಪ್ರದೇಶದಲ್ಲಿ ಪ್ರದರ್ಶಿಸುವ ಕಲೆಯಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿ ಪ್ರಸಿದ್ದಿಯಾಗಿದ್ದು ೧೫೦ ವರ್ಷ ಕಾಲದ ಇತಿಹಾಸ ಹೊಂದಿದೆ. ಇದು ಯಕ್ಷಗಾನ ಮೂಲ ಹೂಂದಿದ್ದು ಹಾಡು ಮತ್ತು ಕುಣಿತ ಹೆಚ್ಚಾಗಿರುತ್ತದೆ. ಬಯಲಾಟದ ಇತಿಹಾಸದಲ್ಲಿ “ಕುಮಾರರಾಮ” ಅಂತ್ಯಂತ ಪ್ರಾಚೀನವಾದ ಕೃತಿ. ಸುಮಾರು ೧೯೦೦ರಲ್ಲಿ ಬಳ್ಳಾರಿಯಲ್ಲಿ ಪ್ರಕಟಗೊಂಡ ಕೃತಿಗಳು ಅಲ್ಲಲ್ಲೇ ಕಾಣಸಿಗುತ್ತವೆ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಜನಪ್ರಿಯವಾಗಿದ್ದವು ಎಂಬುವುದಕ್ಕೆ ಈ ಕೃತಿಗಳು ಇಂಬು ಕೊಡುತ್ತವೆ.

ಬಯಲಾಟದ ನಾಟಕವನ್ನು ಊರಿನಲ್ಲಿ ಪ್ರದರ್ಶನವಾಗುವ ಎರಡು ದಿನದ ಮುಂಚಯೇ ಸುತ್ತಳ್ಳಿಗಳಿಗೆ ಡಂಗುರ ಸಾರಿ, ಕರಪತ್ರ ಹಂಚುತ್ತಾರೆ. ನಾಟಕ ಪ್ರದರ್ಶನ ದಿನದ ಮುನ್ನ “‘ಗೆಜ್ಜೆಪೂಜೆ” ಮಾಡಿಸುತ್ತಾರೆ. ಗೆಜ್ಜೆಪೂಜೆ ಎಂದರೆ ಪಾತ್ರಾಧಾರಿಗಳು ಬಣ್ಣ ಹಚ್ಚಿ, ವೇಷಭೂಷಣ ತೂಟ್ಟು ತಾಲೀಮ್ ಮಾಡುವುದಾಗಿದೆ. ನಾಟಕದ ಪ್ರದರ್ಶನ ದಿನ ಪಾತ್ರ ವರ್ಗಕ್ಕೆ ಬಣ್ಣದ ಚೌಕಿಯಲ್ಲಿ ದೇವರ ಸ್ತುತಿ ಮಾಡಿ, ವಾದ್ಯಗಳ ಪೂಜೆ ಮಾಡುತ್ತಾರೆ. ಗುಡಿಯಲ್ಲಿಯೇ ಪೂಜೆ ಸಲ್ಲಿಸಿ ಅಲ್ಲೇ ಬಣ್ಣ ಹಚ್ಚಿಕೊಂಡು, ವೇಷ ಭೂಷಣಗಳನ್ನು ಧರಿಸಿ, ರಂಗಮಂಟಪಕ್ಕೆ ಬರುವ ಪದ್ದತಿ ಇದೆ. ಮೊದಲಿಗೆ ಗಣಪತಿ ಪೊಜೆಯನ್ನು ಮಾಡಿ, ರಂಗಮಂಟಪಕ್ಕೆ ಬಾಲಗಣಪತಿ ವೇಷದ ಪಾತ್ರಧಾರಿ ಆಗಮಿಸಿ, ಜೊತೆಗೆ ನಾಟಕದ ಸೂತ್ರಧಾರಿ ಸಾರಥಿಯು ಜೊತೆಗೆ ಸಂಭಾಷಣೆ ಮಾಡಿ, ನಾಟಕವನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನೆರವೇರಿಸಲು ಸಾರಥಿ ಬಾಲಗಣಪತಿ ಹತ್ತಿರ ಬೇಡಿಕೊಳ್ಳುತ್ತಾನೆ. ನಂತರ ನಾಟಕ ಪ್ರದರ್ಶನ ಆರಂಭವಾಗುತ್ತದೆ. ಊರಿನ ಗ್ರಾಮ ದೇವ-ದೇವತೆಗಳ ಸ್ತುತಿ ಮಾಡುತ್ತಾರೆ.

ಸ್ತುತಿ

ಶ್ರೀ ಗೌರಿವರಪುತ್ರಾ ಸತತಾ ಶುಭ ಚರಿತ್ರಾ

ಯೋಗಿ ಸಜ್ಜನ ಸ್ತೋತ್ರಾ| ಗಜನಿಭಾಗಾತ್ರಾಃ||೧||

ನಿಟಿಲ ನೇತ್ರನ ಸುತನೆ| ನಿಗಮಾಗಮ ವಂದಿತನೆ

ಸುಚಿತಾ ಸನ್ನಿತರ್ಣಾ| ಕುಂಟಲಾಭರಣಾ||೨||”

ಪಾತ್ರವರ್ಗ

ವೇಷಭೂಷಣಗಳು ಸಂಪಾದಿಸಿ
ಬಯಲಾಟದಲ್ಲಿ ವೇಷಭೂಷಣಗಳು ಆಕರ್ಷಿಣೀಯವಾಗಿರುತ್ತದೆ. ಬಯಲಾಟದ ಶ್ರೀಮಂತಿಕೆಯನ್ನು ವೇಷಭೂಷಣದಲ್ಲಿ ಕಾಣಬಹುದು. ವೇಷಭೂಷಣಗಳನ್ನು ಗುರುತಿಸಿಯೇ ಇದೇ ಪಾತ್ರ ಎಂದು ಹೇಳುವಷ್ಟು ಬಣ್ಣ ಮತ್ತು ವೇಷಭೂಷಣಗಳ ನಿರ್ಧಿಷ್ಟತೆ ಕಂಡು ಬರುತ್ತದೆ. ಪಾತ್ರಧಾರಿಗಳ ಕೀರಿಟವನ್ನು ಹಗುರವಾದ ಕಟ್ಟಿಗೆಯಿಂದ ಮಾಡಿದ್ದು, ಸೋನರಿಗಳನ್ನು ಬಣ್ಣದ ಹಾಳೆ ಹಾಗೂ ಕನ್ನಡಿಗಳಿಂದ ತಯಾರಿಸುತ್ತಾರೆ. ಬಯಲಾಟದಲ್ಲಿ ಮುಖ್ಯವಾಗಿ ಪಾತ್ರಧಾರಿಗಳಿಗೆ “ಭುಜಕೀರ್ತಿ” ಹಾಗೂ “ಎದೆಹಾರ” ದೊಡ್ಡ ಮೆರಗು. ಕೊರಳಲ್ಲಿ ಬಣ್ಣದ ಸರಗಳು, ಕೈಕಟ್ಟು, ಕೈಯಲ್ಲಿ ಖಡ್ಗ, ಬಿಲ್ಲು, ಬಾಣ, ಗದೆ ಇವು ಪಾತ್ರಧಾರಿಗಳ ಸಲಕರಣೆಗಳು. ರಾಕ್ಷಸ, ರೌದ್ರ, ಪಾತ್ರಗಳಿಗೆ “ಕುರಿಯ ಉಣ್ಣೆ’ಯಿಂದ ಮೀಸೆ ಮಾಡಿರುತ್ತಾರೆ.

ವಾದ್ಯ ಮತ್ತು ಹಿಮ್ಮೇಳ

ಪ್ರಮುಖ ಕತೆಗಾರನಾದ ಭಾಗವತನು ಕ್ಯೆಯಲ್ಲಿ ತಾಳ ಹಿಡಿದಿರುತ್ತಾನೆ. ಈತನಿಗೆ ದನಿಗೂಡಿಸಲು, ಅಲಾಪನೆ ಗೈಯಲು ಸಹಾಯಕರಾಗಿ ಒಬ್ಬಿಬ್ಬರು ಮೇಳದವರಿರುತ್ತಾರೆ. ಮೃದಂಗ, ಹಾರ್ಮೋನಿಯಂ ವಾದ್ಯಗಾರರು ಜೊತೆಗಿರುತ್ತಾರೆ. ಬಯಲಾಟದಲ್ಲಿ ವಾದ್ಯ ವಿಶೇಷವೆಂದರೆ ಮುಖ (ವೀಣೆ) ವೇಣಿ ಈ ವಾದ್ಯವು ವೀರ ಕರುಣ, ಶೃಂಗಾರಾದಿ ರಸಗಳ ಅಭಿವ್ಯಕ್ತಿಗೆ ವಿಶಿಷ್ಟವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಕಥಾ ಸನ್ನಿವೇಶಗಳನ್ನು ಹಾಡುವ ಭಾಗವತರಿಂದ ಪ್ರತಿಯೊಂದು ಪಾತ್ರ ಬಂದಾಗಲೂ ಅದರ ವರ್ಣನೆ ನಡೆಯುತ್ತದೆ. ವೇದಿಕೆಯ ಮಧ್ಯ ಭಾಗಕ್ಕೆ ಬರುವ ಪಾತ್ರಧಾರಿಗಳು ಭಾಗವತರ ಹಾಡಿಗೆ ತಕ್ಕಂತೆ ಕುಣಿಯುತ್ತಾರೆ. ಮಧ್ಯೆ ಮಧ್ಯೆ ಕಲಾವಿದರೇ ಹಲಹಲ, ಬಾಪ್ಪರೇ ಶಹಬಾಸ್, ಹುರ್ ಭಲಾ ಶಭಾಸ್ ಎಂದು ಹೇಳುತ್ತಿರುತ್ತಾರೆ.

ಕುಣಿತ

ಬಯಲಾಟದಲ್ಲಿ ಕುಣಿತವು ಪುರುಷ ಪಾತ್ರಧಾರಿಗಳು ರೌದ್ರತಾರದಿಂದ, ಸ್ತ್ರೀ ಪಾತ್ರ ಲಾಸ್ಯದಿಂದ ತುಂಬಿರುತ್ತದೆ. ಆದರೆ ಸಾರಥಿಯು ಮಾತ್ರ ಲಘವಾದ ಕುಣಿತ, ಬರೀ ಹೆಜ್ಜೆಗಳ್ಳನ್ನು ಮಾತ್ರ ಹಾಕುತ್ತಾನೆ.

ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳೇ ಹೆಚ್ಚು. ಕುರುಕ್ಷೇತ್ರ, ಕೃಷ್ಣಸಂಧಾನ, ಸುಗಂಧ ಪುಷ್ಪಹರಣ, ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ, ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗ, ವಾಲಿ-ಸುಗ್ರೀವ ಕಾಳಗ, ದ್ರೌಪದೀ ವಸ್ತ್ರಾಪಹರಣ, ರತಿಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ- ಮಹಿರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನರ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರನ ಕಾಳಗ, ಭೀಷ್ಮಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯ, ಸತ್ಯ ಹರಿಶ್ಚಂದ್ರ, ಇಂದ್ರಜಿತ್ ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ, ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ, ಪಾಂಡುವಿಜಯ, ಕರಿಭಂಟನ ಕಾಳಗ, ಚಂದ್ರಹಾಸ, ವಿಕ್ರಮಾರ್ಜುನ ಕಥೆ, ಕನಕಾಂಗಿ ಕಲ್ಯಾಣ, ಕುಂಭನೀ ಯಾಗ, ಬಾಣಾಸುರನ ಕಾಳಗ, ಸೀತಾಪಹರಣ, ಮದನಸುಂದರಿ, ಬಾಣಾಸುರನ ಕಾಳಗ, ಲಂಕಾದಹನ, ಅಲ್ಲಮಪ್ರಭು, ಪ್ರಮೇಳ, ಕರಿಭಂಟನ ಕಾಳಗ ಇತ್ಯಾದಿ ಆಟಗಳನ್ನು ಆಡುತ್ತಾರೆ.

ಇಂದಿಗೂ ಕೊಪ್ಪಳ ಭಾಗದಲ್ಲಿ ಈ ಕಲೆಯನ್ನು ದೇವರಂತೆ ಆರಾಧಿಸಿ ಜಾತ್ರೆಯಂತ ಪುಣ್ಯದಿನಗಳಲ್ಲಿ ಯುವ ಪೀಳಿಗೆಯ ಅರಿವಿಗಾಗಿ,ಊರಿನ ಒಳಿತಿಗಾಗಿ ಅಭಿನಯಿಸುವವರೆಂಬ ಐತಿಹ್ಯವಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ