Breaking News
Home / new delhi / ಇಸ್ರೇಲ್‍ನಲ್ಲಿ 1000 ವರ್ಷಗಳಷ್ಟು ಹಳೆಯದಾದ ಚಿನ್ನದ ನಾಣ್ಯಗಳು ಪತ್ತೆ..!

ಇಸ್ರೇಲ್‍ನಲ್ಲಿ 1000 ವರ್ಷಗಳಷ್ಟು ಹಳೆಯದಾದ ಚಿನ್ನದ ನಾಣ್ಯಗಳು ಪತ್ತೆ..!

Spread the love

ಟೆಲ್ ಅವಿವ್ ,ಸೆ.20-ಇಸ್ರೇಲ್‍ನಲ್ಲಿ ಸುಮಾರು 1,000 ವರ್ಷಗಳಷ್ಟು ಹಳೆಯದಾದ ನೂರಾರು ಬಂಗಾರದ ನಾಣ್ಯಗಳು ಪತ್ತೆಯಾಗಿವೆ. ಈ ಕುರಿತು ಇಲ್ಲೊಂದು ವರದಿ. ಸಹಸ್ರಮಾನಕ್ಕೂ ಹೆಚ್ಚು ಕಾಲ ಮಣ್ಣಿನ ಪಾತ್ರೆಗಳಲ್ಲಿ ಬಚ್ಚಿಡಲಾಗಿದ್ದ ನೂರಾರು ಚಿನ್ನದ ನಾಣ್ಯಗಳ ಗುಪ್ತ ನಿಧಿಯೊಂದನ್ನು ಇಸ್ರೇಲಿ ಯುವಕರು ಪತ್ತೆ ಮಾಡಿದ್ದಾರೆ.

 

ಈ ನಿಕ್ಷೇಪ ನಿಧಿಯನ್ನು ಇತ್ತೀಚೆಗೆ ಪತ್ತೆ ಮಾಡಲಾಗಿದೆ ಎಂದು ಇಸ್ರೇಲ್ ಆಂಟಿಕ್ವಿಟೀಸ್ ಅಥಾರಿಟಿ ತಿಳಿಸಿದೆ. ಹೊಸ ವಸತಿ ಪ್ರದೇಶವೊಂದರ ನಿರ್ಮಾಣ ಯೋಜನೆ ಕಾರ್ಯರೂಪಕ್ಕೆ ಬರಲಿರುವ ಮಧ್ಯ ಇಸ್ರೇಲ್‍ನಲ್ಲಿ ಉತ್ಖನನದ ವೇಳೆ ಯುವಕರ ಗುಂಪೊಂದು ನೂರಾರು ಚಿನ್ನದ ನಾಣ್ಯಗಳನ್ನು ಪತ್ತೆ ಮಾಡಿದೆ. ಈ ಬಂಗಾರದ ನಾಣ್ಯಗಳು 1,000 ವರ್ಷಗಳಿಗೂ ಹೆಚ್ಚು ಕಾಲದಷ್ಟು ಹಳೆಯದ್ದಾಗಿವೆ.

ಈ ನಿಧಿ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಹಸ್ರಮಾನದ ಹಿಂದೆ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ವಹಿವಾಟುಗಳ ಬಗ್ಗೆ ಇದು ಮಾಹಿತಿ ಒದಗಿಸುತ್ತದೆ. ಯುರೋಪ ಖಂಡದಲ್ಲಿ ಆಗ ಚಿನ್ನದ ವಾಣಿಜ್ಯ ವಹಿವಾಟುಗಳಿಗೆ ವಿರೋಧ ಇತ್ತು. ಆಗ ಜನರು ಮಣ್ಣಿನ ಪಾತ್ರೆಗಳಲ್ಲಿ ಬಂಗಾರದ ನಾಣ್ಯಗಳನ್ನು ಬಚ್ಚಿಟ್ಟು ಭೂಮಿಯಲ್ಲಿ ಹುದುಗಿಸಿ ಇಡುತ್ತಿದ್ದರು ಎಂದು ಇಸ್ರೇಲ್ ಆಂಟಿಕ್ವಿಟೀಸ್ ಆಥಾರಿಟಿಯ ಗಲಿತ್ ತಾಲ್ ಹೇಳುತ್ತಾರೆ.

ಸುಮಾರು 1,100 ವರ್ಷಗಳ ಹಿಂದೆ ಈ ನಿಧಿಯನ್ನು ಬಚ್ಚಿಟ್ಟಿದ್ದ ವ್ಯಕ್ತಿಯು ನಂತರ ಇದನ್ನು ಮಣ್ಣಿನ ಆಳದಿಂದ ತೆಗೆಯಲು ಉದ್ದೇಶಿಸಿದ್ದ. ಇದೇ ಕಾರಣಕ್ಕಾಗಿ ಮಣ್ಣಿನ ಪಾತ್ರೆಯಲ್ಲಿ ಚಿನ್ನದ ನಾಣ್ಯಗಳನ್ನು ಇರಿಸಿ ಅದನ್ನು ಭದ್ರವಾಗಿ ಮುಚ್ಚಿ ಭೂಮಿಯಲ್ಲಿ ಹೂತ್ತಿಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ನೂರಾರು ಚಿನ್ನದ ನಾಣ್ಯಗಳು ದೊರೆತ ಸ್ಥಳವು ಮನೆಗಳೊಂದಿಗೆ ಕಾರ್ಯಾಗಾರಗಳು ಇರುವ ವಸತಿ ಪ್ರದೇಶವಾಗಿತ್ತು. ಸಹಸ್ರಮಾನದ ಹಿಂದೆ ಯಾರು ಈ ಗುಪ್ತನಿಧಿಯನ್ನು ಅಡಗಿಸಿಟ್ಟದ್ದರು ಎಂಬುದು ಈಗಲೂ ರಹಸ್ಯವಾಗಿಯೇ ಉಳಿದಿದೆ ಎಂದು ಇಸ್ರೇಲ್ ಪ್ರಾಚೀನ ವಸ್ತುಗಳ ಪ್ರಾಧಿಕಾರ ತಿಳಿಸಿದೆ.

ನಾವು ಮಣ್ಣನ್ನು ಅಗೆಯುತ್ತಿದ್ದಾಗ ಭೂಮಿಯ ಒಳಗೆ ಪಿಕಾಸಿಗೆ ಏನೋ ತಗುಲಿದಂತಾಯಿತು. ನಾವು ಯಾವುದೋ ಕಲ್ಲು ಇರಬೇಕೆಂದು ಕೆದಕಿ ನೋಡಿದಾಗ ಮಣ್ಣಿನ ಪಾತ್ರೆ ಪತ್ತೆಯಾಯಿತು. ಅದರಲ್ಲಿ ಬಂಗಾರದ ನಾಣ್ಯಗಳು ಇದ್ದವು. ಆ ಸ್ಥಳದಲ್ಲಿ ಮತ್ತೆ ಮಣ್ಣು ಅಗೆಯುವುದನ್ನು ಮುಂದುವರಿಸಿದಾಗ ಮತ್ತಷ್ಟು ನಾಣ್ಯಗಳು ಪತ್ತೆಯಾದವು ಎಂದು ಈ ನಿಕ್ಷೇಪ ನಿಧಿಯನ್ನು ಪತ್ತೆ ಮಾಡಿದ ಸ್ವಯಂಸೇವಕರಲ್ಲಿ ಒಬ್ಬನಾದ 18 ವರ್ಷದ ಓಜ್ ಕೊಹೆನ್ ತಿಳಿಸಿದ.

ಈ ನಾಣ್ಯಗಳು 9ನೇ ಶತಮಾನದಲ್ಲಿ ಅಬ್ಬಾಸಿದ್ ಕ್ಯಾಲಿಫೇಟ್ ಕಾಲದ್ದು. ಇಲ್ಲಿ ಈಗ ಪತ್ತೆಯಾದ 425 ಬಂಗಾರದ ನಾಣ್ಯಗಳು 24 ಕ್ಯಾರೆಟ್‍ಗಳ ಪರಿಶುದ್ಧ ಚಿನ್ನದ್ದಾಗಿದೆ. ಇದು ಆ ಕಾಲದಲ್ಲಿ ಭಾರೀ ಮೌಲ್ಯದ್ದಾಗಿತ್ತು.

ಸುಮಾರು 1,100 ವರ್ಷಗಳ ಹಿಂದೆ ಪಕ್ಕದ ಈಜಿಪ್ಟ್‍ನ ಸಂಪದ್ಭರಿತ ರಾಜಧಾನಿ ಪುಸ್‍ಟಾಟ್‍ನಲ್ಲಿ ಭವ್ಯ ಬಂಗಲೆಯನ್ನು ಈ ನಾಣ್ಯಗಳಿಂದ ಖರೀದಿಸಬಹುದಾಗಿತ್ತು ಎನ್ನುತ್ತಾರೆ ಇಸ್ರೇಲ್ ಆಂಟಿಕ್ವಿಟೀಸ್ ಆಥಾರಿಟಿಯ ನಾಣ್ಯಗಳ ತಜ್ಞ ಡಾ ರಾಬರ್ಟ್ ಕೂಲ್.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ