ಮಂಡ್ಯ: ಇಂದು ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸುತ್ತಿದ್ದ ವೇಳೆ ಅಡ್ಡಿಪಡೆಸಿ, ಗಲಾಟೆ ಮಾಡಿದ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಹಾಗೂ ಅವರ ಪುತ್ರನ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ. ಈ ರೀತಿ ಗೂಂಡಾಗಿರಿ ಮಾಡಿ, ಗಲಾಟೆ ಮಾಡೋರಿಗೆ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಎಸ್‍ಪಿ, ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿದ್ದ ಪತ್ರಕರ್ತರ ಕೋವಿಡ್-19 ಪರೀಕ್ಷೆಗೆ ಅಡ್ಡಿಪಡೆಸಿ, ರೌಡಿಗಿರಿ ಮೆರೆದಿದ್ದು ಖಂಡನೀಯ. ಶ್ರೀಕಂಠೇಗೌಡರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ, ಅದನ್ನು ಅವರು ಎದುರಿಸಲೇಬೇಕು. ಅವರು ನಿಯಮಗಳನ್ನು ಉಲ್ಲಂಘಿಸಿ ಕಾನೂನಿನ ವಿರುದ್ಧ ಹೋಗಿದ್ದಾರೆ. ಸರ್ಕಾರದ ಅನುಮತಿ ಪಡೆದು ಮಂಡ್ಯದಲ್ಲಿ ಪತ್ರಕರ್ತರ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಫೀಲ್ಡ್ ಅಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಸೋಂಕು ತಗುಲಿದರೆ ಅದು ಬೇರೆ ಅವರಿಗೆ ಹರಡುವ ಸಾಧ್ಯತೆ ಹೆಚ್ಚು, ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಪರೀಕ್ಷೆ ಕೈಗೊಳ್ಳಲಾಗಿದೆ ಅದನ್ನು ಶ್ರೀಕಂಠೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.
ಇಲ್ಲಿ ಪರೀಕ್ಷೆ ಮಾಡಬೇಡಿ, ನಮ್ಮ ಮನೆ ಇದೆ ಎಂದರೆ ಬೇರೆ ಕಡೆ ಪರೀಕ್ಷೆ ಮಾಡಿದರೂ ಮನೆಗಳು ಇರುತ್ತೆ ಅಲ್ವಾ? ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಹೀಗೆ ಗಲಾಟೆ ಮಾಡಿದರೆ ಈ ಘಟನೆಗೂ ಪಾದರಾಯನಪುರದಲ್ಲಿ ನಡೆದ ಘಟನೆಗೂ ಏನು ವ್ಯತ್ಯಾಸ? ಇಲ್ಲಿ ಕೋವಿಡ್-19 ಪರೀಕ್ಷೆ ನಡೆಸಿದರೆ ನಿಮಗೂ ಕೊರೊನಾ ಬರುತ್ತೆ, ಇದನ್ನು ವಿರೋಧಿಸಿ ಎಂದು ಶ್ರೀಕಂಠೆಗೌಡರು ಸ್ಥಳೀಯರಿಗೆ ಹೇಳಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ. ಇದು ಬಹಳ ಶೋಷನೀಯ. ಒಬ್ಬರು ಎಂಎಲ್‍ಸಿ ಆಗಿ ಈ ರೀತಿ ಹೇಳಿಕೆ ಕೊಡುತ್ತಾರೆ ಎಂದರೆ ಅವರ ಶಿಕ್ಷಣ ಹಾಗೂ ಮಾಹಿತಿ ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನೋದನ್ನ ನಾವು ಪ್ರಶ್ನಿಸಬೇಕಾಗಿದೆ ಎಂದರು.
ಕೊರೊನಾ ಪರೀಕ್ಷೆ ಮಾಡಿದರೆ ಸೋಂಕು ಹರಡುತ್ತೆ ಎಂದು ಎಲ್ಲೂ ಹೇಳಿಲ್ಲ. ಬದಲಾಗಿ ಅತೀ ಹೆಚ್ಚು ಪರೀಕ್ಷೆ ಮಾಡಿ ಎಂದಿದ್ದಾರೆ. ಕೊರೊನಾ ಇರುವ ಅದೆಷ್ಟೋ ಮಂದಿಗೆ ಸೋಂಕಿನ ಲಕ್ಷಣಗಳು ಇರುವುದಿಲ್ಲ. ಹೀಗಾಗಿ ಪರೀಕ್ಷೆ ಮಾಡುವುದು ಅಗತ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಬೇರೆ ಸಮಯದಲ್ಲಿ ಮಾಡುವಂತೆ ಗೂಂಡಾಗಿರಿ, ಗಲಾಟೆ, ರಾಜಕಾರಣ ಮಾಡುವುದು ಸರಿಯಲ್ಲ. ಹೀಗೆ ಮಾಡಿ ಜನಪ್ರತಿನಿಧಿಯಾಗುವ ಅರ್ಹತೆಯನ್ನೇ ಇವರು ಕಳೆದುಕೊಂಡಿದ್ದಾರೆ ಎನ್ನಬಹುದು ಎಂದು ಕಿಡಿಕಾರಿದ್ದಾರೆ.