ಶಿರಡಿ/ನಾಸಿಕ್, ಜ.19- ಸದ್ಗುರು ಸಾಯಿಬಾಬಾ ಜನ್ಮ ಸ್ಥಳ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಡೆಸುತ್ತಿರುವ ಶಿರಡಿ ಬಂದ್ ಹೊರತಾಗಿಯೂ ಬಾಬಾ ಮಂದಿರ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಿರುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಶಿರಡಿ ಅನಿರ್ದಿಷ್ಟಾವಧಿ ಬಂದ್ ಕರೆಯಿಂದಾಗಿ ಆತಂಕಗೊಂಡಿದ್ದ ಸಹಸ್ರಾರು ಸಾಯಿಬಾಬಾ ಭಕ್ತರಿಗೆ ಇದರಿಂದ ನಿರಾಳ ದೊರೆತಂತಾಗಿದೆ.
ಉದ್ಧವ್ ಠಾಕ್ರೆ ಪರ್ಬಾನಿಯ ಪತ್ರಿ ಗ್ರಾಮ ಸಾಯಿ ಬಾಬಾ ಜನ್ಮಸ್ಥಳ ಎಂದಿದ್ದಲ್ಲದೆ, ಇದರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು. ಪತ್ರಿ ಬಾಬಾ ಅವರ ಜನ್ಮಭೂಮಿ. ಶಿರಡಿ ಅವರ ಕರ್ಮಭೂಮಿ ಎಂದು ಹೇಳಿಕೆ ನೀಡಿ ಅನುದಾನ ಘೋಷಿಸಿರುವುದು ಶಿರಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಾಯಿಬಾಬಾ ಸಮಾಯ ಆಡಳಿತ ಮಂಡಳಿ ಅರ್ನಿಷ್ಟಾವಧಿಗೆ ಶಿರಡಿ ದೇವಸ್ಥಾನವನ್ನು ಮುಚ್ಚಲು ನಿರ್ಧರಿಸಿತ್ತು.
ಈ ಕುರಿತಂತೆ ಮಾತನಾಡಿರುವ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‍ನ ಬಿ.ವಾಕ್ಚೌರೆ ಅವರು, ಜ.19ರಿಂದ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವು ಶಿರಡಿ ಮುಚ್ಚುವ ನಿರ್ಧಾರವನ್ನು ಘೋಷಿಸಿದ್ದೇವೆ. ಭಕ್ತರು ಶಿರಡಿಗೆ ಬಂದರೆ ಅವರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳ ಎಂದಿರುವ ಠಾಕ್ರೆ ಹೇಳಿಕೆ ಬಗ್ಗೆ ಸ್ಥಳೀಯರು ಅಸಮಾಧಾನಗೊಂಡಿರುವುದಾಗಿ ತಿಳಿಸಿದ್ದಾರೆ.
ಸಾಯಿಬಾಬಾ ಅವರ ಜನ್ಮಸ್ಥಳದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಶಿರಡಿಯಲ್ಲಿ ಇದ್ದಷ್ಟು ದಿನ ಸಾಯಿ ಬಾಬಾ ತಮ್ಮ ಜನ್ಮಸ್ಥಳ ಅಥವಾ ತಮ್ಮ ಧರ್ಮದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಅದಾಗ್ಯೂ ಉದ್ಧವ್ ಠಾಕ್ರೆ ಅವರ ಹೇಳಿಕೆ ಅಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ಬಂದ್ ಘೋಷಣೆ ಮಾಡಿದ್ದು, ಸಾಯಿ ಪ್ರಸಾದಾಲಯ, ಸಾಯಿ ಆಸ್ಪತ್ರೆ, ಸಾಯಿ ಭಕ್ತ ನಿವಾಸ ಮತ್ತು ಸ್ಥಳೀಯ ಮೆಡಿಕಲ್ ಶಾಪ್‍ಗಳನ್ನು ಬಂದ್‍ನಿಂದ ಹೊರಗಿಡಲಾಗಿದೆ. ಬಸ್ ಸಂಚಾರ ಮತ್ತು ಹೊಟೇಲ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
ಸಾಯಿಬಾಬಾ ಜನ್ಮ ಸ್ಥಳ ಕುರಿತ ಠಾಕ್ರೆ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟು ಭಾರೀ ಚರ್ಚೆಗೆ ಗ್ರಾಸವಾಗಿದ್ದರೂ ಭಕ್ತರಿಗೆ ದೇಗುಲ ಪ್ರವೇಶ ಮತ್ತು ಬಾಬಾ ದರ್ಶನಕ್ಕೆ ಮುಕ್ತ ಅವಕಾಶ ಲಭಿಸಿರುವುದು ಅವರ ಅನುಯಾಯಿಗಳಲ್ಲಿ ಸಂತಸ ಮೂಡಿಸಿದೆ.