Breaking News
Home / Uncategorized / ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಬಿಜೆಪಿಯಲ್ಲೇ ವಿರೋಧ

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಬಿಜೆಪಿಯಲ್ಲೇ ವಿರೋಧ

Spread the love

ಸಾಗರ: ರಾಜ್ಯದ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಮಲೆನಾಡಿನ ಆರ್ಥಿಕ ಚಟುವಟಿಕೆಯ ಜೀವನಾಡಿಯಾಗಿರುವ ಅಡಿಕೆ ವಹಿವಾಟಿಗೆ ತಿದ್ದುಪಡಿ ತೀವ್ರ ಪೆಟ್ಟು ನೀಡಲಿದೆ ಎಂಬ ಕಾರಣಕ್ಕೆ ಬಿಜೆಪಿಯಲ್ಲಿ ಸಕ್ರಿಯವಾಗಿರುವ ಸಹಕಾರ ಮುಖಂಡರು ತಿದ್ದುಪಡಿ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದಾರೆ.

ಕಾಯ್ದೆ ತಿದ್ದುಪಡಿ ಪ್ರಕಾರ ಎಪಿಎಂಸಿ ಪ್ರಾಂಗಣದ ಹೊರಗೆ ವಹಿವಾಟಿಗೆ ತೆರಿಗೆ ಕಟ್ಟಬೇಕಿಲ್ಲ. ಪ್ರಾಂಗಣ
ದೊಳಗೆ ಶೇ 1.5ರಷ್ಟು ತೆರಿಗೆ ಕಟ್ಟಬೇಕು. ಈ ನಿಯಮ ಇಲ್ಲಿನ ಅಡಿಕೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭಿಸಿದೆ.

ಈಗಾಗಲೇ ಈ ತಾರತಮ್ಯದ ತೆರಿಗೆ ನೀತಿಯನ್ನು ವಿರೋಧಿಸಿ ಅಡಿಕೆ ವರ್ತಕರು ವಹಿವಾಟು
ನಿಲ್ಲಿಸಿದ್ದಾರೆ.

ಶೇ 1.5ರಷ್ಟು ತೆರಿಗೆ ಕಟ್ಟಬೇಕು ಎಂದರೆ ಒಂದು ಅಡಿಕೆ ಲೋಡ್‌ಗೆ ಲಕ್ಷ ರೂಪಾಯಿ ತೆರಿಗೆ ಸಂದಾಯ ಮಾಡಬೇಕು ಎಂಬುದು ವರ್ತಕರ, ದಲಾಲರ ಅಳಲು. ಇಷ್ಟೊಂದು ತೆರಿಗೆ ಪಾವತಿಸಿದರೆ ಬೆಳೆಗಾರರಿಗೆ ಸ್ಪರ್ಧಾತ್ಮಕ ದರ ನೀಡುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ.

‘ಒಂದು ದೇಶ, ಒಂದು ತೆರಿಗೆ’ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿರುವಾಗ ನಾವು ಎರಡು ಬಗೆಯ ತೆರಿಗೆ ಪಾವತಿಸುವುದು ನ್ಯಾಯವೇ? ಈ ಕಾನೂನು ಬಂದಿದೆ ಎಂದು ತಿಳಿಯುತ್ತಿದ್ದಂತೆ ಪ್ರಾಂಗಣದೊಳಗೆ ಅಡಿಕೆ ವ್ಯಾಪಾರ ನಿಂತುಹೋಗಿದೆ. ಎಲ್ಲಾ ವಹಿವಾಟು ಸಹಕಾರ ಸಂಘಗಳ ಮೂಲಕ ನಡೆಯುವುದರಿಂದ ಕಾಯ್ದೆ ತಿದ್ದುಪಡಿಯಾಗಿರುವುದು ಸಂಘಗಳ ವಹಿವಾಟಿಗೂ ಧಕ್ಕೆ ತರುವಂತಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಬಿಜೆಪಿಯ ಚೇತನ್ ರಾಜ್ ಕಣ್ಣೂರು ಪ್ರತಿಕ್ರಿಯಿಸಿದರು.

‘ಮಲೆನಾಡಿನಲ್ಲಿ ಬಹುತೇಕ ಅಡಿಕೆ ಬೆಳೆಗಾರರು ಸಹಕಾರ ಸಂಘಗಳ ಮೂಲಕವೇ ವ್ಯವಹರಿಸುತ್ತಿದ್ದಾರೆ. ಮುಂಗಡ ಸಾಲ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸೇರಿ ಹಲವು ಸೌಲಭ್ಯಗಳನ್ನು ಸಹಕಾರ ಸಂಘಗಳು ಬೆಳೆಗಾರರಿಗೆ ಒದಗಿಸುತ್ತಿವೆ. ಈಗ ತೆರಿಗೆ ಉಳಿಸುವ ಕಾರಣಕ್ಕೆ ಎಪಿಎಂಸಿ ಹೊರಗೆ ಸಹಕಾರ ಸಂಘಗಳ ನೆರವಿಲ್ಲದೆ ವಹಿವಾಟು ನಡೆಯಲು ಕಾಯ್ದೆ ತಿದ್ದುಪಡಿ ಪ್ರೇರಣೆ ನೀಡಿದೆ’ ಎಂದು ತೋಟಗಾರ್ಸ್ ಸಂಸ್ಥೆ ಅಧ್ಯಕ್ಷ ಕೆ.ಸಿ.ದೇವಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಕಾಯ್ದೆ ತಿದ್ದುಪಡಿಯಿಂದ ಮುಂದಿನ ದಿನಗಳಲ್ಲಿ ಬೆಳೆಗಾರರು ಸಹಕಾರ ಸಂಸ್ಥೆಗಳು ಅಸ್ತಿತ್ವಕ್ಕೆ ಬರುವ ಮುನ್ನ ಖಾಸಗಿ ಮಂಡಿ ಮಾಲೀಕರ ಎದುರು ಸಣ್ಣ ಸಹಾಯಕ್ಕೂ ಕೈಕಟ್ಟಿ ನಿಲ್ಲಬೇಕಾದ ದಯನೀಯ ಸ್ಥಿತಿ ಮರುಕಳಿಸಲಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಅಡಿಕೆ ವಹಿವಾಟನ್ನೇ ಪ್ರಮುಖವಾಗಿ ನಡೆಸುತ್ತಿರುವ ಸಹಕಾರ ಸಂಸ್ಥೆಗಳ ಅಧಿಕಾರ ಹಿಡಿದಿರುವ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಂಸ್ಥೆಗೆ ಕಾಯ್ದೆ ತಿದ್ದುಪಡಿ ನುಂಗಲಾರದ ಬಿಸಿ ತುಪ್ಪವಾಗಿದೆ. ಬೆಳೆಗಾರರ, ವರ್ತಕರ, ದಲಾಲರ ವಿರೋಧವನ್ನು ಗ್ರಹಿಸಿರುವ ಬಿಜೆಪಿ, ಸಂಘ ಪರಿವಾರದ ಮುಖಂಡರು ತಿದ್ದುಪಡಿ ಪುನರ್ ಪರಿಶೀಲನೆಗೆ ಸರ್ಕಾರದ ಒತ್ತಡ ಹೇರಲು ಆರಂಭಿಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ: ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ಶ್ರೀನಯಾ ಸೇರ್ಪಡೆ

Spread the love ಹುಬ್ಬಳ್ಳಿ: ಇಲ್ಲಿನ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದೆ. 4 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ