ರಾಯಚೂರು, – ಜಿಲ್ಲೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ, ಸಿಎಚ್ ಪೌಡರ್ ಮಿಶ್ರಿತ ಸೆಂಧಿ ಮಾರಾಟ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಹಾಗೂ ನೂತನವಾಗಿ ನೇಮಕಗೊಂಡಿರುವ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಏ.13ರ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ, ಅದೇ ರೀತಿ ಜಿಲ್ಲೆಯಲ್ಲೂ ಲಾಕ್ ಡೌನ್ ಆಗಿದ್ದು, ಮದ್ಯ ಮಾರಾಟವನ್ನು ತಡೆಹಿಡಿಯಲಾಗಿದೆ, ಇಂತಹ ಸನ್ನಿವೇಶದಲ್ಲಿ ಕಳ್ಳಭಟ್ಟಿ, ಸಿಎಚ್ ಪೌಡರ್ ಮಿಶ್ರಿತ ಸೇಂದಿ ದಂಧೆ ಜಿಲ್ಲೆಯಲ್ಲಿ ಕಂಡುಬಂದಿದೆ, ಅಬಕಾರಿ ಇಲಾಖೆ ಅಧಿಕಾರಿಗಳ ಸಹಕಾರದಿಂದಲೇ ಅಕ್ರಮ ದಂಧೆ ಆರೋಪಗಳು ಸಹ ಕೇಳಿಬರುತ್ತಿದೆ.
ಕೂಡಲೇ ಸೇಂದಿ, ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಕಬೇಕು, ಇದು ಜಿಲ್ಲೆಯಲ್ಲಿ ಮುಂದುವರೆದರೆ, ಅಬಕಾರಿ ಇಲಾಖೆಯ ಉಪ ಆಯುಕ್ತರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಿಂದ ಭತ್ತ ಖರೀದಿ ನಿಲ್ಲಬೇಕು, ರಾಯಚೂರು ಜಿಲ್ಲೆಯಲ್ಲಿ ಈಗ ಕೊರೊನಾ ಸೋಂಕಿತರಿಲ್ಲ.
ಆದರೂ ಭತ್ತ ಮಾರಾಟದ ಸಂದರ್ಭದಲ್ಲಿ ಹರಡುವ ಸಾಧ್ಯತೆ ಇದೆ. ಲಾಕ್ ಡೌನ್ ಮುಗಿಯುವವರೆಗೂ ಭತ್ತ ಖರೀದಿ ನಿಲ್ಲಬೇಕು, ಗಡಿಭಾಗದಲ್ಲಿ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು, ಅವಶ್ಯವಿದ್ದರೆ ಹೆಚ್ವಿನ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರಿಗೆ ಉಪ ಮುಖ್ಯಮಂತ್ರಿಗಳು ಸೂಚಿಸಿದರು.
ಇದೇ ಏ.8ರಂದು ಜಿಲ್ಲೆಯ ಹಲವೆಡೆ ಸುರಿದ ಆಲಿಕಲ್ಲು ಮಳೆಯಿಂದಾದ ಬೆಳೆ ಹಾನಿಯ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಬೆಳೆ ಹಾನಿಯಾಗಿರುವ ಬಗ್ಗೆ ವರದಿಯನ್ನು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಬೇಕು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೈದರಾಬಾದ್ ಮೂಲದ ಎನ್.ಐ.ಸಿ ಅಧಿಕಾರಿ ಬಾಲರಾಜಶೇಖರ ಇಂಗ್ಲಿಷ್‍ನಲ್ಲಿಯೇ ಸಭೆಗೆ ಮಾಹಿತಿ ನೀಡಲು ಆರಂಭಿಸಿದರು, ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಕನ್ನಡದಲ್ಲಿಯೇ ಮಾಹಿತಿ ನೀಡುವಂತೆ ಸೂಚಿಸಿದರು, ಕನ್ನಡ ಭಾಷೆ ಬರುವುದಿಲ್ಲ ಎಂದು ಅಧಿಕಾರಿ ತಿಳಿಸಿದಾಗ, ಕರ್ನಾಟಕದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮೊದಲು ಕನ್ನಡ ಕಲಿಯಬೇಕು, ಮುಂದಿನ ಸಭೆಗೆ ಕನ್ನಡದಲ್ಲಿಯೇ ಮಾಹಿತಿ ನೀಡುವಂತೆ ತಿಳಿಸಿದರು.
ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆ ಉಸ್ತುವಾರಿ ವಹಿಸಿಕೊಂಡು ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿ, ಕೋವಿಡ್-19 ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ವಸ್ತುಸ್ಥಿತಿಯನ್ನು ಅವಲೋಕಿಸಲಾಗಿದೆ, ಏ.14ಕ್ಕೆ ಮೊದಲ ಹಂತದ ಲಾಕ್ ಡೌನ್ ಮುಗಿಯುತ್ತೆ, ಈ ಲಾಕ್ ಡೌನ್ ಮುಗಿಯುತ್ತೋ ಇಲ್ವೋ ಅನ್ನೋ ಚರ್ಚೆ ನಡೆಯುತ್ತಿದೆ. ಪ್ರಧಾನಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾಡಿದ್ದಾರೆ.
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದಿವರೆಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಅಥವಾ ನಾಳೆ ಪ್ರಧಾನಿಗಳು ಅದರ ತೀರ್ಮಾನ ಕೈಗೊಳ್ಳುತ್ತಾರೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ, ಚೀನಾದಲ್ಲಿ ಹತೋಟಿಗೆ ಬಂದಿದ್ದ ಕರೋನಾ ಮತ್ತೇ ಪ್ರಾರಂಭವಾಗಿದೆ. ಇದು ಆತಂಕಕಾರಿ ಸಂಗತಿ. ಸುದೈವ ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ ಪಾಸಿಟಿವ್ ಕೇಸ್ ಇಲ್ಲ. ಅದೇ ನಮಗೆ ಸಂತೋಷದ ಸಂಗತಿ ಎಂದವರು ಹೇಳಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಪ್ರಸ್ತಾವಿಕ ಮಾತನಾಡಿ, ವಿದೇಶದಿಂದ ರಾಯಚೂರಿಗೆ 174 ಮಂದಿ ಆಗಮಿಸಿದ್ದಾರೆ, ಅವರ ಸಂಪರ್ಕದಲ್ಲಿದ್ದ 774 ಜನರನ್ನು ಮನೆಯಲ್ಲಿಯೇ ಇರಿಸಿ ನಿಗಾ ವಹಿಸಲಾಗಿತ್ತು, ಶಂಕಿತ 65 ಜನರ ಸ್ಯಾಂಪಲ್‍ಅನ್ನು ವೈದ್ಯಕೀಯ ವರದಿಗಾಗಿ ಕಳುಹಿಸಲಾಗಿ 64 ನೆಗೆಟಿವ್ ವರದಿಗಳು ಬಂದಿವೆ, ಒಂದು ಫಲಿತಾಂಶ ಬರಬೇಕಿದೆ, ಇದೂವರೆಗೆ ಸರ್ಕಾರಿ ಕ್ವಾರಂಟೈನ್‍ನಲ್ಲಿ 100 ಜನರಿದ್ದಾರೆ.
ಖಾಸಗಿ ಆಸ್ಪತ್ರೆಗಳ ವೈದ್ಯರು ಸರ್ಕಾರಕ್ಕೆ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. ನಿರ್ಗತಿಕರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ತೀವ್ರ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆ ಎಂದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆದಿಮನಿ ವೀರಲಕ್ಷ್ಮಿ, ಶಾಸಕರಾದ ಡಾ.ಶಿವರಾಜ್ ಪಾಟೀಲ್, ರಾಜಾ ವೆಂಕಟಪ್ಪ ನಾಯಕ, ಕೆ. ಶಿವನಗೌಡ ನಾಯಕ, ವೆಂಕಟರಾವ್ ನಾಡಗೌಡ, ಬಸನಗೌಡ ದದ್ದಲ್, ಡಿ.ಎಸ್. ಹೂಲಿಗೇರಿ, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು, ಬಸವರಾಜ್ ಪಾಟೀಲ್ ಇಟಗಿ, ಕಾಡಾ ಅಧ್ಯಕ್ಷ ಬಸನಗೌಡ ತುರುವಿಹಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ವೇದಿಕೆಯಲ್ಲಿದ್ದರು.
ಅಪರ ಜಿಲ್ಲಾಧಿಕಾರಿ ದುರಗೇಶ ಸ್ವಾಗತಿಸಿದರು.
ರಾಯಚೂರು ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ, ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಯಚೂರು ತಹಶೀಲ್ದಾರ ಡಾ.ಹಂಪಣ್ಣ ಉಪಸ್ಥಿತರಿದ್ದರು.
#ಕೋರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ವೆಂಟಲೀಟರ್‍ಗಳ ಕೊರತೆಯಿಲ್ಲ-ಸಚಿವ ಸವದಿ :
ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬೇಕಾಗಿರುವ ಅಗತ್ಯ ವೆಂಟಲೀಟರ್‍ಗಳನ್ನು ರಾಜ್ಯ ಸರ್ಕಾರ ಈಗಾಗಲೇ ಖರೀದಿಸಿದ್ದು, ತುರ್ತು ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಪೂರೈಸಲಾಗುತ್ತಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದರು.
ಅವರು ಏ.13ರ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಸಭೆಯ ನಂತರ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕೊರೋನಾ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲು ವೆಂಟಲೀಟರ್‍ಗಳ ಕೊರತೆಯಿಲ್ಲ. ಮಾಸ್ಕ್, ಸ್ಯಾನಿಟೇಷನ್ ಹಾಗೂ ಗ್ಲೌಸ್ ಸೇರಿದಂತೆ ಎಲ್ಲಾ ಔಷಧಿಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೋರೊನಾ ಲಾಕ್‍ಡೌನ್‍ನಿಂದ ರೈತರ ಸರಕು ಸಾಗಾಣಿಕೆಗೆ ತೀವ್ರ ತೊಂದರೆಯಾಗಿದೆ.
ಕೋರೊನಾ ಲಾಕ್‍ಡೌನ್ ವಿಸ್ತರಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೀಘ್ರದಲ್ಲಿ ಘೋಷಣೆ ಮಾಡಲಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ರೈತರ ಬೆಳೆ ಫಸಲು, ಹಣ್ಣು ಹಾಗೂ ಆರೋಗ್ಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯಿಂದ ರಾಜ್ಯ ಮಟ್ಟದಲ್ಲಿ ಕಂಟ್ರೋಲ್ ರೂಮ್ ಪ್ರಾರಂಭಿಸಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಸಿಹೆಚ್ ಪೌಂಡರ್ ಮಿಶ್ರೀತ ಕೈ ಹೆಂಡ ಮತ್ತು ಕಳ್ಳಭಟ್ಟಿ ಮಾರಾಟ ಮಾಡುವುದನ್ನು ತಡೆಯದಿದ್ದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಕೆ. ಶಿವನಗೌಡ ನಾಯಕ್, ಜಿಲ್ಲಾಧಿಕಾರಿ ಆರ್ .ವೆಂಕಟೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಉಪಸ್ಥಿತರಿದ್ದರು.
# ಕೇಂದ್ರದ ಮಾಜಿ ಸಚಿವ ರಾಜಶೇಖರನ್ ನಿಧನ- ಸಚಿವರ ಸಂತಾಪ
ರಾಯಚೂರು,ಏ.13.(ಕ.ವಾ)- ಕೇಂದ್ರದ ಮಾಜಿ ಸಚಿವ ರಾಜಶೇಖರನ್ ನಿಧನಕ್ಕೆ ಸಾರಿಗೆ ಇಲಾಖೆ ಸಚಿವರು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಂತ್ರಿಗಳಾದ ಲಕ್ಷ್ಮಣ ಸವದಿ ಅವರು ಸಂತಾಪ ಸೂಚಿಸಿದ್ದಾರೆ. ಹಿರಿಯ ಮುತ್ಸದ್ಧಿಯಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯ ರಾಜಕಾರಣದಲ್ಲಿಯೂ ಅತ್ಯಂತ ಸಕ್ರಿಯರಾಗಿ ನಾಡಿಗೆ ಬಹುಶ್ರುತವಾಗಿ ಸೇವೆಸಲ್ಲಿಸಿದ ಹಿರಿಯರಾದ ಎಂ.ವಿ. ರಾಜಶೇಖರನ್ ಅವರು ಇಂದು ನಿಧನರಾಗಿರುವುದು ತುಂಬಾ ದುಃಖದ ಸಂಗತಿಯಾಗಿದೆ ಎಂದು ಹೇಳಿದರು.
ಕಟ್ಟಾ ಗಾಂಧಿವಾದಿಯಾಗಿ ಸರಳ ಮತ್ತು ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಶ್ರೀ ರಾಜಶೇಖರ್ ಅವರು ನಮ್ಮ ರಾಜ್ಯದ ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ಮತ್ತು ಅವರ ಅಪಾರ ಅಭಿಮಾನಿಗಳಿಗೆ ನನ್ನ ಸಾಂತ್ವನಗಳು ಮತ್ತು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.