Breaking News
Home / ಜಿಲ್ಲೆ / ಮೈಸೂರು ವಿದ್ಯಾರ್ಥಿನಿ ಮೇಲಿನ ಗ್ಯಾಂಗ್​ರೇಪ್ ಪ್ರಕರಣ

ಮೈಸೂರು ವಿದ್ಯಾರ್ಥಿನಿ ಮೇಲಿನ ಗ್ಯಾಂಗ್​ರೇಪ್ ಪ್ರಕರಣ

Spread the love

ಮೈಸೂರು: ದೆಹಲಿ ನಿರ್ಭಯಾ ಪ್ರಕರಣ ನೆನಪಿಸಿದ್ದ ಮೈಸೂರು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಬಸ್ ಟಿಕೆಟೊಂದರ ಸುಳಿವು ಪಡೆದು ಪ್ರಕರಣ ನಡೆದ 87 ಗಂಟೆಯಲ್ಲಿ ತಮಿಳನಾಡಿನ ಐವರು ಆರೋಪಿಗಳನ್ನು ಬಂಧಿಸಿರುವುದು ವಿಶೇಷ.

ಬಂಧಿತರಲ್ಲಿ ಓರ್ವ ಅಪ್ರಾಪ್ತನಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಘಟನೆ ಸಾರ್ವಜನಿಕ ಆಕ್ರೋಶದ ಜತೆಗೆ ರಾಜಕೀಯ ಒತ್ತಡ, ಸಂಘಟನೆಗಳ ಪ್ರತಿಭಟನೆಯಿಂದಲೂ ಪೊಲೀಸರಿಗೆ ತಲೆನೋವು ತಂದಿಟ್ಟಿತ್ತು. ಹೀಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ಪೊಲೀಸರು ಕೊನೆಗೂ ಕಾಮುಕರ ಹೆಡೆಮುರಿ ಕಟ್ಟಿದ್ದಾರೆ.

 

ಅಪರಾಧದ ಹಿನ್ನೆಲೆ ಇತ್ತು: ಬಂಧಿತರೆಲ್ಲರೂ ತಮಿಳುನಾಡಿನ ತಿರುಪ್ಪೂರ್ ಹಾಗೂ ಸೂಸೈಪುರಂ ಗ್ರಾಮದವರಾಗಿದ್ದು, ಕೂಲಿ ಕೆಲಸಕ್ಕಾಗಿ ನಗರಕ್ಕೆ ಬರುತ್ತಿದ್ದರು. ಇವರಲ್ಲಿ ಮೂವರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಆ.24ರಂದು ಸಂಜೆ 7ರಿಂದ 8 ಗಂಟೆ ನಡುವೆ ಘಟನೆ ನಡೆದಿದ್ದು, ದರೋಡೆ ಉದ್ದೇಶದಿಂದ ಆರೋಪಿಗಳು ಯುವಕ ಹಾಗೂ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಮಯದಲ್ಲಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಹಣ ನೀಡಲು ನಿರಾಕರಿಸಿದ್ದರಿಂದ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.’ಆರೋಪಿಗಳ ಪತ್ತೆಗೆ ದಕ್ಷಿಣ ವಲಯ ಐಜಿಪಿ ಮತ್ತು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 7 ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿತ್ತು. ಈ ತಂಡಗಳನ್ನು ಬೇರೆ ಬೇರೆ ಕಡೆಗಳಿಗೆ ನಿಯೋಜಿಸಿ ತನಿಖೆ ಆರಂಭಿಸಿದ್ದೆವು. ಆರೋಪಿಗಳು ತಮಿಳುನಾಡಿನ ತಿರುಪ್ಪೂರ್​ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಲ್ಲಿ ದಾಳಿ ನಡೆಸಿ ಐವರನ್ನು ಬಂಧಿಸಿದ್ದೇವೆ’ ಎಂದು ಡಿಜಿಪಿ ಸೂದ್ ಹೇಳಿದರು.

 

ಆರೋಪಿಗಳೆಲ್ಲರೂ ಕೂಲಿ ಕೆಲಸ ಮಾಡುವವರಾಗಿದ್ದು, ಚಾಲಕ, ಪೇಂಟರ್, ಎಲೆಕ್ಟ್ರಿಷಿಯನ್, ಕೂಲಿ ಕೆಲಸ, ತರಕಾರಿ ತರುವ ಕೆಲಸ ಮಾಡುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಒಬ್ಬ 17 ವರ್ಷದವನಾಗಿದ್ದು, ಆತನ ವಯಸ್ಸಿನ ಬಗ್ಗೆ ದೃಢೀಕರಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮೊದಲು 18 ವರ್ಷಕ್ಕಿಂತ ಕಡಿಮೆ ಇದ್ದರೆ ಅಪ್ರಾಪ್ತ ಎನ್ನಲಾಗುತ್ತಿತ್ತು. ಆದರೆ ನಿರ್ಭಯಾ ಕೇಸ್ ನಡೆದ ಬಳಿಕ 16 ವರ್ಷಕ್ಕೆ ಇಳಿಸಲಾಗಿದೆ. ಮತ್ತೊಮ್ಮೆ ಅಪ್ರಾಪ್ತನ ವಯಸ್ಸನ್ನು ಖಚಿತಪಡಿಸಿಕೊಂಡು ಆತನನ್ನು ಯಾವ ಕೋರ್ಟ್​ಗೆ ಹಾಜರುಪಡಿಸಬೇಕು ಎನ್ನುವುದನ್ನು ತೀರ್ವನಿಸುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದರು.

 

5 ಲಕ್ಷ ರೂ. ಬಹುಮಾನ

 

‘ಸಂತ್ರಸ್ತೆಯಿಂದ ನಮಗೆ ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಆಕೆಯ ಸ್ನೇಹಿತ ನೀಡಿದ ಅಲ್ಪಸ್ವಲ್ಪ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಸೂಕ್ತ ಮಾಹಿತಿ ಸಿಕ್ಕಿರಲಿಲ್ಲ. ತಾಂತ್ರಿಕತೆ ಬಳಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ಭೇದಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೊಷಿಸಲಾಗಿದೆ’ ಎಂದು ಡಿಜಿಪಿ ಹೇಳಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ, ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್.ದಂಡಿನ ಇದ್ದರು.

 

ಮೈಸೂರು to ತಾಳವಾಡಿ

 

ಅತ್ಯಾಚಾರ ನಡೆದ ಸ್ಥಳದಲ್ಲಿ ಸಿಕ್ಕ ಬಸ್ ಟಿಕೆಟ್ ಇಡೀ ಪ್ರಕರಣವನ್ನು ಭೇದಿಸಲು ಸಹಕಾರಿಯಾಗಿದೆ. ಸ್ಥಳ ಪರಿಶೀಲಿಸುತ್ತಿದ್ದ ಪೊಲೀಸರಿಗೆ ಪಾರ್ಟಿ ಮಾಡಿದ ಮದ್ಯದ ಬಾಟಲಿ ಇನ್ನಿತರ ವಸ್ತುಗಳ ಜತೆಗೆ ತಾಳವಾಡಿಯಿಂದ ಚಾಮರಾಜನಗರಕ್ಕೆ ಪ್ರಯಾಣ ಮಾಡಿರುವ ಬಸ್ ಟಿಕೆಟ್ ದೊರೆತಿತ್ತು. ಈ ಟಿಕೆಟ್ ಆಧಾರದ ಮೇಲೆ ಘಟನೆ ಸ್ಥಳದಲ್ಲಿದ್ದ ಮೊಬೈಲ್ ಟವರ್ ಲೊಕೇಷನ್ ಹಾಗೂ ಬಸ್ ಟಿಕೆಟ್​ನಲ್ಲಿದ್ದ ಸಮಯದಲ್ಲಿ ಚಾಮರಾಜನಗರದಲ್ಲಿನ ಟವರ್ ಲೊಕೇಷನ್ ತಾಳೆ ಮಾಡಿ ನೋಡಿದಾಗ ಅದು ಒಂದೇ ಸಂಖ್ಯೆಯಾಗಿತ್ತು. ಅಲ್ಲದೆ ಸ್ಥಳದ ಸುತ್ತಮುತ್ತಲ ಮೊಬೈಲ್ ಟವರ್ ಲೊಕೇಷನ್ ಪರಿಶೀಲಿಸಿದಾಗ ಈ ಐವರು ಆರೋಪಿಗಳ ಮೊಬೈಲ್ ನಂಬರ್ ಮ್ಯಾಚ್ ಆಯಿತು. ಈ ಆಧಾರದ ಮೇಲೆ ಬಸ್​ನಲ್ಲಿ ಪ್ರಯಾಣ ಮಾಡಿರುವ ವ್ಯಕ್ತಿಯೇ ಇಲ್ಲಿ ಬಂದು ಕೃತ್ಯ ನಡೆಸಿರುವುದು ಸಾಬೀತಾಗಿದ್ದರಿಂದ ಆ ಮೊಬೈಲ್ ಜಾಡು ಹಿಡಿದು ತನಿಖೆ ಕೈಗೊಂಡಾಗ ಆರೋಪಿಗಳು ತಮಿಳುನಾಡಿನ ತಿರುಪ್ಪೂರ್​ನಲ್ಲಿ ಇರುವುದು ಖಚಿತಗೊಂಡಿದೆ. ಅಲ್ಲದೇ ತಮಿಳುನಾಡಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಿಶೀಲಿಸಿದಾಗ ಅವರ ವಿರುದ್ಧ ಆರೋಪಪಟ್ಟಿ ಇರುವುದು ಗೊತ್ತಾಗಿದೆ. ಹೀಗಾಗಿ ಆರೋಪಿಗಳನ್ನು ಸುಲಭವಾಗಿ ಗುರುತಿಸಿ ಪತ್ತೆಹಚ್ಚಲು ನೆರವಾಗಿದೆ.

 

ಟೆಂಪೋದಲ್ಲಿ ಪರಾರಿ: ಮೈಸೂರಿಗೆ ಬರುವುದಕ್ಕೆ ಮೊದಲೇ ಪ್ಲಾಯನ್ ಮಾಡಿದ್ದ ತಂಡದಲ್ಲಿ ನಾಲ್ವರು ಟೆಂಪೋದಲ್ಲಿ ಬಂದರೆ ಮತ್ತೊಬ್ಬ ತಾಳವಾಡಿಯಿಂದ ಚಾಮರಾಜನಗರಕ್ಕೆ ಬಸ್​ನಲ್ಲಿ ಬಂದು ತಂಡವನ್ನು ಕೂಡಿಕೊಂಡಿದ್ದನೆನ್ನಲಾಗಿದೆ. ಕೃತ್ಯ ನಡೆದ ಬಳಿಕ ಆ.24ರಂದು ರಾತ್ರಿಯೇ ಟೆಂಪೋದಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದರು.

 

ಮೈಸೂರು ವಿದ್ಯಾರ್ಥಿನಿ ಮೇಲಿನ ಗ್ಯಾಂಗ್​ರೇಪ್ ಪ್ರಕರಣ


Spread the love

About Laxminews 24x7

Check Also

ಈಶ್ವರಪ್ಪ ಅವರು ಬದ್ಧತೆ ಇರುವ ವ್ಯಕ್ತಿ: ಪ್ರಹ್ಲಾದ ಜೋಶಿ

Spread the loveಧಾರವಾಡ: ಕೆ.ಎಸ್. ಈಶ್ವರಪ್ಪ ಅವರು ಹಿರಿಯ ನಾಯಕ, ಅವರೊಬ್ಬ ಬದ್ಧತೆ ಇರುವ ವ್ಯಕ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ