ಮೈಸೂರು: ಅನಧಿಕೃತ ವೈದ್ಯಕೀಯ ಪಾಸ್ ಬಳಸಿ ತಮಿಳುನಾಡಿಗೆ ಪ್ರಯಾಣಿಸಲು ಯತ್ನಿಸಿ ಚಾಲಕನೊಬ್ಬ ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ನಿರ್ಮಲ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಚಾಲಕ. ನಿರ್ಮಲ್ ಕುಮಾರ್ ಅನಧಿಕೃತ ಪಾಸ್ ಅಂಟಿಸಿಕೊಂಡು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ನಗರದ ಎನ್.ಆರ್ ಠಾಣೆಯ ಪೊಲೀಸರು ಆತನನ್ನು ತಡೆದು ವಿಚಾರಣೆ ಮಾಡಿದ್ದಾರೆ. ನನ್ನ ಸ್ನೇಹಿತ ನನಗೆ ವ್ಯಾಟ್ಸಪ್‍ನಲ್ಲಿ ಕಳುಹಿಸಿದ್ದ ಪಾಸ್ ಅಂಟಿಸಿಕೊಂಡಿದ್ದೇನೆ ಎಂದು ಚಾಲಕ ಹೇಳಿದ್ದ.
ಪಾಸ್ ಪರಿಶೀಲನೆ ಮಾಡಿದಾಗ ಅನಧಿಕೃತ ಪಾಸ್ ಎಂಬುದು ಬೆಳಕಿಗೆ ಬಂದಿದೆ. ಪಾಸ್ ಅಂಟಿಸಿದ್ದ ಟೊಯೋಟಾ ಇಟಿಯೋಸ್ ಕಾರು ಹಾಗೂ ಪಾಸ್ ಡೌನ್‍ಲೋಡ್ ಮಾಡಿದ್ದ ವಿವೋ ಮೊಬೈಲ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.