ರಾಯಚೂರು: ಕೊರೊನಾ ಬಂದ್ಮೇಲೆ ಶಾಸಕರು, ಸಂಸದರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದ ಯುವಕನನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಕೊರೊನಾ ವೈರಸ್ ಸಂಕಷ್ಟ ಬಂದಾಗಿನಿಂದ ಶಾಸಕರು, ಸಂಸದರು ಕಾಣೆಯಾಗಿದ್ದಾರೆ. ನಿಮಗೆ ಎಲ್ಲಾದರೂ ಕಾಣಿಸಿದರೆ ದಯವಿಟ್ಟು ಕ್ಷೇತ್ರಕ್ಕೆ ಕಳುಹಿಸಿ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿವೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಫೋಟೋ ಹಾಕಿ ಹರಿಬಿಟ್ಟ ಪೋಸ್ಟ್ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರ ಕೈಗೆ ಓರ್ವ ಯುವಕ ಸಿಕ್ಕಿಬಿದ್ದಿದ್ದಾನೆ.
ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದ ತಿಮ್ಮಪ್ಪ ಬಂಧಿತ ಆರೋಪಿ. ಯುವಕನನ್ನ ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಿಜೆಪಿ ಸಂಸದರ ಫೋಟೋಗಳ ಪೋಸ್ಟ್ ಅನ್ನು ಎಡಿಟ್ ಮಾಡಿ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ ಫೋಟೋ ಹಾಕಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟ ಯುವಕನನ್ನ ಬಂಧಿಸಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಗ್ಗೆಯಿಂದ ಯುವಕನನ್ನ ಠಾಣೆಯಲ್ಲಿ ಕೂಡಿ ಹಾಕಿದ್ದು, ಪ್ರಕರಣವನ್ನೂ ದಾಖಲಿಸುತ್ತಿಲ್ಲ, ಹೊರಗಡೆಯೂ ಬಿಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.