ಬೆಂಗಳೂರು,- ಆಡಳಿತ ಪಕ್ಷದ ಶಾಸಕರಿಗೆ ಸದನ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಗದ್ದಲ ಮಾಡಿ ಚರ್ಚೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ಕಾಂಗ್ರೆಸ್ ಶಾಸಕರು ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದ ಪ್ರಸಂಗ ನಡೆಯಿತು. ವಿಧಾನಸಭೆ ಪ್ರಶ್ನೋತ್ತರ ಅವಧಿಯ ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಕ್ಕುಚ್ಯುತಿಯಿಂದ ಸಲ್ಲಿಕೆಯಾಗಿರುವ ಎರಡು ಸೂಚನೆಗಳ ಚರ್ಚೆಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದಂತೆ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಆಹ್ವಾನಿಸಿದ್ದರು.
ಈ ವೇಳೆ ಬಿಜೆಪಿಯ ಕೆ.ಜಿ.ಬೋಪಯ್ಯ ಮಾತನಾಡಿ, ಯಾವುದು ಗಂಭೀರ ವಿಷಯವಿದೆಯೋ ಅದರ ಚರ್ಚೆಗೆ ಮೊದಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು. ಜಗದೀಶ್ ಶೆಟ್ಟರ್ ಮಾತನಾಡಿ, ಸುಧಾಕರ್ ಅವರ ವಿರುದ್ಧ ರಮೇಶ್‍ಕುಮಾರ್ ಬಳಸಿದ ಪದ ಆಕ್ಷೇಪಾರ್ಹವಾಗಿದೆ. ಅದರ ಚರ್ಚೆಗೆ ಅವಕಾಶ ಕೊಡಬೇಕು. ರಮೇಶ್‍ಕುಮಾರ್ ಅವರ ವಿರುದ್ಧ ಕ್ರಮಕ್ಕೆ ಸ್ಪೀಕರ್ ಅವರಿಗೆ ಅಧಿಕಾರವಿದೆ.
ಅದನ್ನು ಪ್ರಯೋಗ ಮಾಡಬೇಕು ಎಂದು ಒತ್ತಡ ಹೇರಿದರು. ಆಡಳಿತ ಪಕ್ಷದಿಂದ ಸಚಿವ ಬೈರತಿ ಬಸವರಾಜ, ಸುಧಾಕರ್, ಬಿ.ಸಿ.ಪಾಟೀಲ್ ಮತ್ತಿತರರು ಎದ್ದುನಿಂತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಡ ಹಾಕಿದಾಗ ಪ್ರತಿಪಕ್ಷದ ಶಾಸಕರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸಚಿವರು, ಶಾಸಕರು ಚರ್ಚೆಗೆ ಅಡ್ಡಿಪಡಿಸುತ್ತಿದ್ದಾರೆ. ಸದನದಲ್ಲಿ ಚರ್ಚೆ ನಡೆಸಲು ಆಸಕ್ತಿ ಇಲ್ಲ. ಹಾಗಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದಾಗ ಅದಕ್ಕೆ ಶಾಸಕರಾದ ಜಮೀರ್ ಅಹಮ್ಮದ್ ಖಾನ್, ನರೇಂದ್ರ, ಅಜಯ್‍ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯ ಅವರು ಮಾತನಾಡಲು ಅವಕಾಶ ಕೊಟ್ಟರೂ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಕ್ಕುಚ್ಯುತಿ ಚರ್ಚೆಯಿಂದ ರಾಜ್ಯದ ಐದೂವರೆ ಕೋಟಿ ಜನರಿಗೆ ಸತ್ಯಾಂಶ ತಿಳಿಯಬೇಕು. ಸ್ಪೀಕರ್ ಅವಕಾಶ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಮಾತನಾಡಲಿ. ನಂತರ ಎಲ್ಲರೂ ಮಾತನಾಡಿ ಸಮಗ್ರ ಚರ್ಚೆ ಮಾಡಿ ಎಂದು ಸಲಹೆ ಮಾಡಿ ವಿವಾದಕ್ಕೆ ತೆರೆ ಎಳೆದರು.