ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಹುತೇಕರು ಸಹಾಯ ಹಸ್ತ ಚಾಚುತ್ತಿದ್ದು, ಬಡವರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಮಕ್ಕಳು ಸಹ ಸಹಾಯ ಮಾಡುತ್ತಿದ್ದು, ಆಂಧ್ರ ಪ್ರದೇಶದ 4 ವರ್ಷದ ಬಾಲಕ ತಾನು ಕೂಡಿಟ್ಟ ಹಣವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಆಂಧ್ರ ಪ್ರದೇಶದ ವಿಜಯವಾಡದ ನಾಲ್ಕು ವರ್ಷದ ಬಾಲಕ ಸೈಕಲ್ ಖರೀದಿಸಲು ತಾನು ಕೂಡಿಟ್ಟಿದ್ದ 971 ರೂ.ಗಳನ್ನು ದಾನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಏ.7ರಂದು ಆಂಧ್ರ ಪ್ರದೇಶದ 4 ವರ್ಷದ ಬಾಲಕ ಹೇಮಂತ್ ತಾನು ಕೂಡಿಟ್ಟ 971 ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ.
ತಾಡೆಪಲ್ಲಿಯ ವೈಎಸ್‍ಆರ್ ಕಾಂಗ್ರೆಸ್ ಕಚೇರಿಯಲ್ಲಿ ಆಂಧ್ರ ಪ್ರದೇಶದ ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ಅವರನ್ನು ಭೇಟಿ ಮಾಡಿ ಈ ಹಣ ನೀಡಿದ್ದಾನೆ. ಬಾಲಕನ ಸಹಾಯದ ಗುಣವನ್ನು ಕಂಡು ವೆಂಕಟರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶೀಘ್ರವೇ ಸೈಕಲ್ ಗಿಫ್ಟ್ ನೀಡುವುದಾಗಿ ಬಾಲಕನಿಗೆ ಸಚಿವರು ಭರವಸೆ ನೀಡಿದ್ದಾರೆ.
ಹೇಮಂತ್ ಮಾತ್ರವಲ್ಲ ಇತ್ತೀಚೆಗೆ ಮೇಘಾಲಯದ 5 ವರ್ಷದ ಬಾಲಕ ಸಹ ಮಾಸ್ಕ್ ಧರಿಸಿ ಸಚಿವರ ಕಚೇರಿಗೆ ತೆರಳಿ ತಾನು ಸಂಗ್ರಹಿಸಿಟ್ಟಿದ್ದ ಸುಮಾರು 1,501 ರೂಗಳನ್ನು ಅವರ ಕೈಗೆ ತಲುಪಿಸಿದ್ದನು. ಮೇಘಾಲಯದ ಎಲ್ ಮಯಾನ್ ನೊಂಗ್‍ಬ್ರಿ ತಾನು ಹುಂಡಿಯಲ್ಲಿ ಕೂಡಿಟ್ಟ ನಾಣ್ಯಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಿದ್ದ. ಹೀಗೆ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಮಕ್ಕಳು ಸಹ ನೆರವಿಗೆ ಧಾವಿಸುತ್ತಿದ್ದಾರೆ.