ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿಯ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದು ಯೋಗ ಮಾಡುತ್ತಿರುವ ಬಾಲೆಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರು ವರ್ಷದ ಇಫ್ರಾ ಮುಲ್ಲಾ ತನ್ನ ಮನೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಳು. ಟಿವಿ ನೋಡುತ್ತಾ ಯೋಗ ಕಲಿಯುತ್ತಿದ್ದಳು. ಇದನ್ನು ಇಫ್ರಾ ತಾಯಿ ವಿಡಿಯೋ ಚಿತ್ರೀಕರಿಸಿದ್ದರು. ನಂತರ ಇಫ್ರಾ ತಂದೆ ಇಮ್ತಿಯಾಜ್ ಅಹ್ಮದ್ ಮುಲ್ಲಾಗೆ ಈ ವಿಡಿಯೋ ಕಳಿಸಿದ್ದರು. ರೈಲ್ವೇ ಉದ್ಯೋಗಿಯಾಗಿರುವ ಇಮ್ತಿಯಾಜ್‌ಅಹ್ಮದ್ ಮುಲ್ಲಾ ಮಗಳ ಯೋಗಾಭ್ಯಾಸದ ವಿಡಿಯೋ ಟ್ವೀಟರ್‌ಗೆ ಅಪ್ಲೋಡ್ ಮಾಡಿದ್ದರು. ನಂತರ ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿದ್ದರು.
ಲಾಕ್‌ಡೌನ್ ಅವಧಿಯಲ್ಲಿ ನನ್ನ ಮಗಳು ಯೋಗ ಮಾಡುತ್ತಿದ್ದಾಳೆ. ಎಲ್ಲರೂ ಮನೆಯಲ್ಲಿರಿ, ಸುರಕ್ಷಿತವಾಗಿರಿ ಎಂದು ಇಮ್ತಿಯಾಜ್ ಅಹ್ಮದ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದರು. ಬಾಲಕಿಯ ವಿಡಿಯೋ ನೋಡಿದ ಪ್ರಧಾನಿಗಳು ರೀಟ್ವೀಟ್ ಮಾಡಿದ್ದಾರೆ. ಗ್ರೇಟ್, ಮನೆಯಲ್ಲಿರಿ, ಆರೋಗ್ಯವಾಗಿರಿ ಮತ್ತು ಸದೃಢವಾಗಿರಿ ಎಂದು ಕರೆ ನೀಡಿದ್ದಾರೆ.
ಪ್ರಧಾನಿಗಳ ಮೆಚ್ಚುಗೆಗೆ ಬಾಲಕಿ ಇಫ್ರಾ ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ. ಪ್ರಧಾನಿಗಳ ಈ ಟ್ವೀಟ್‌ನ್ನು ಸಾವಿರಾರು ಜನರು ರಿಟ್ವೀಟ್ ಮಾಡಿದ್ದಾರೆ. ಲಕ್ಷಾಂತರ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಇಫ್ರಾ ಪಾಲಕರು ಮತ್ತು ಸಂಬಂಧಿಕರ ಸಂತಸ ಇಮ್ಮಡಿಸುವಂತೆ ಮಾಡಿದೆ.
ಇಫ್ರಾ ಮುಲ್ಲಾಗೆ ಬಾಲ್ಯದಿಂದಲೂ ದೈಹಿಕ ವ್ಯಾಯಾಮ ಇಷ್ಟ. ಅದರಲ್ಲೂ ಯೋಗವೆಂದರೆ ಬಹಳ ಪ್ರೀತಿ. ಯೋಗಾಭ್ಯಾಸದ ಕುರಿತು ಸಾಂಪ್ರದಾಯಿಕ ತರಬೇತಿ ಪಡೆದಿಲ್ಲ. ಆದರೂ ಟಿವಿಯಲ್ಲಿ ಬರುವ ಯೋಗಾಭ್ಯಾಸದ ಶೋಗಳನ್ನು ನೋಡುತ್ತಾಳೆ. ಅದರಂತೆ ಯೋಗ ಮಾಡಲು ಪ್ರಯತ್ನಿಸುತ್ತಾಳೆ. ಈಗ ಪ್ರಧಾನಿಗಳ ಮೆಚ್ಚುಗೆಯಿಂದ ಜನಪ್ರಿಯತೆ ಗಳಿಸಿದ್ದಾಳೆ. ಮಗಳ ಆಸಕ್ತಿಗೆ ನೀರೆರೆದು ಪೋಷಿಸುತ್ತೇವೆ ಎನ್ನುತ್ತಾರೆ ಪಾಲಕರು