Home / ಜಿಲ್ಲೆ / ಸ್ವಿಡ್ಜರ್‌ಲ್ಯಾಂಡ್‌ನಿಂದ ಬಂದು ಎರಡೇ ದಿನದಲ್ಲಿ ಸಂಪುಟ ವಿಸ್ತರಣೆ ಮಾಡ್ತೀನಿ’ ವಿದೇಶಕ್ಕೆ ಹಾರಿದ ಸಿಎಂ

ಸ್ವಿಡ್ಜರ್‌ಲ್ಯಾಂಡ್‌ನಿಂದ ಬಂದು ಎರಡೇ ದಿನದಲ್ಲಿ ಸಂಪುಟ ವಿಸ್ತರಣೆ ಮಾಡ್ತೀನಿ’ ವಿದೇಶಕ್ಕೆ ಹಾರಿದ ಸಿಎಂ

Spread the love

ಬೆಂಗಳೂರು, ಜ.19-ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‍ನಿಂದ ಹಿಂದಿರುಗಿದ ಎರಡೇ ದಿನಗಳಲ್ಲಿ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದಾವೋಸ್‍ನಿಂದ ಹಿಂದುರುಗಿದ ಎರಡೇ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ.

ಈ ಸಂಬಂಧ ನಿನ್ನೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಊಹಾಪೋಹದಿಂದ ಕೂಡಿದೆ ಎಂದರು. ಅಮಿತ್ ಶಾ ಅವರೊಂದಿಗೆ ಅರ್ಧಗಂಟೆಗಳ ಕಾಲ ಸಂಪುಟ ವಿಸ್ತರಣೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಶೀಘ್ರದಲ್ಲೇ ಈ ಎಲ್ಲಾ ಗೊಂದಲಗಳು ಇತ್ಯರ್ಥವಾಗಲಿದೆ ಎಂದು ತಿಳಿಸಿದರು.

ನಾನು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದ ಮೇಲೆ ಗೊಂದಲಗಳ ಪ್ರಶ್ನೆ ಎಲ್ಲಿಂದ ಬರುತ್ತದೆ. ಸುಮ್ಮನೆ ಏನೇನೋ ಊಹಾಪೋಹಗಳನ್ನು ಸೃಷ್ಟಿಸಬೇಡಿ ಎಂದು ಮಾಧ್ಯಮದವರಿಗೆ ಸಿಎಂ ಮನವಿ ಮಾಡಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದಾಗ ಮಾತುಕತೆ ನಡೆಸುವುದು ಸ್ವಾಭಾವಿಕ. ನಾನು ಶಾಸಕರ ಜತೆಯೂ ಮಾತುಕತೆ ನಡೆಸಿದ್ದೇನೆ. ಯಾರೊಬ್ಬರಲ್ಲೂ ಅಸಮಾಧಾನವಿಲ್ಲ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದಾರೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿಗಳಿಂದಲೇ ಈ ಹೇಳಿಕೆ ಬಂದಿರುವುದರಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನಿನ್ನೆ ಅಮಿತ್ ಶಾ ಅವರ ಜತೆ ಬೆಂಗಳೂರಿನಿಂದ ಹುಬ್ಬಳಿಗೆ ವಿಮಾನದಲ್ಲಿ ತೆರಳುವ ವೇಳೆ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಯಡಿಯೂರಪ್ಪ ಚರ್ಚೆ ನಡೆಸಿದ್ದರು.

ಆದರೆ, ಹುಬ್ಬಳ್ಳಿಯಲ್ಲಿ ವಾಸ್ತವ ಹೂಡಿದ್ದ ಹೋಟೆಲ್‍ನಲ್ಲಿ ಮಾತುಕತೆ ನಡೆಸದೆ ಬೆಂಗಳೂರಿಗೆ ಹಿಂದಿರುಗಿದ್ದರಿಂದ ಮತ್ತೆ ಸಂಪುಟ ವಿಸ್ತರಣೆ ನೆನೆಗುದಿಗೆ ಬೀಳಲಿದೆ ಎಂಬ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿಗಳು, ದಾವೋಸ್‍ನಿಂದ ಹಿಂದುರಿಗಿದ ಎರಡೇ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿರುವುದು ಸಚಿವ ಆಕಾಂಕ್ಷಿಗಳಲ್ಲಿ ಆಸೆ ಚಿಗುರಿದೆ.

ಮೂಲಗಳ ಪ್ರಕಾರ ಯಡಿಯೂರಪ್ಪ ನಿನ್ನೆ ಸಂಪುಟಕ್ಕೆ ಯಾರ್ಯಾರನ್ನು ತೆಗೆದುಕೊಳ್ಳಲಾಗುವುದು ಎಂಬುದರ ಬಗ್ಗೆ ಅಮಿತ್ ಶಾ ಅವರಿಗೆ ಪಟ್ಟಿಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬಂದು ಉಪ ಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಶಾಸಕರ ಪೈಕಿ 9 ಮಂದಿಗೆ ಸಚಿವರಾಗುವ ಸೌಭಾಗ್ಯ ಸಿಗಲಿದೆ.

ರಮೇಶ್ ಜಾರಕಿಹೊಳಿ(ಗೋಕಾಕ್), ಬಿ.ಸಿ.ಪಾಟೀಲ್ (ಹಿರೇಕೆರೂರು), ಆನಂದ್‍ಸಿಂಗ್ (ವಿಜಯನಗರ), ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ), ಭೈರತಿ ಬಸವರಾಜ್ (ಕೆ.ಆರ್.ಪುರಂ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿಲೇಔಟ್), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಶಿವರಾಂ ಹೆಬ್ಬಾರ್ ( ಯಲ್ಲಾಪುರ) ಅವರುಗಳು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಳವಾಗಿದೆ.

ಮಹೇಶ್ ಕುಮಟಳ್ಳಿ (ಅಥಣಿ) ಹಾಗೂ ಶ್ರೀಮಂತ ಪಾಟೀಲ್ (ಕಾಗವಾಡ) ಅವರುಗಳಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಭರವಸೆ ಕೊಡಲಾಗಿದೆ. ಉಪ ಚುನಾವಣೆಯಲ್ಲಿ ಪರಾಭವಗೊಂಡಿರುವ ಎಂ.ಟಿ.ಬಿ.ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಅವರಿಗೆ ಮೇಲ್ಮನೆಗೆ ಆಯ್ಕೆ ಮಾಡುವ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರೆದಿದೆ.ರಾಣೆಬೆನ್ನೂರಿನಲ್ಲಿ ಸ್ಪರ್ಧಿಸದೆ ಕಣದಿಂದ ಹಿಂದೆ ಸರಿದ ಆರ್.ಶಂಕರ್ ಪರಿಸ್ಥಿತಿಯೂ ಭಿನ್ನವಾಗಿಲ್ಲ.

Advertisement


Spread the love

About Laxminews 24x7

Check Also

ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ:ಮೋದಿ

Spread the love ಜೈಪುರ (ಏ.22): ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಿದೆ’ ಎಂಬ ಆ ಪಕ್ಷದ ಭರವಸೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ