Breaking News
Home / ಜಿಲ್ಲೆ / ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಸರ್ಕಾರ ಪತನವಾಗಲಿದೆ!.. ಎಸ್.ಆರ್.ಪಾಟೀಲ್

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಸರ್ಕಾರ ಪತನವಾಗಲಿದೆ!.. ಎಸ್.ಆರ್.ಪಾಟೀಲ್

Spread the love

ಬಾಗಲಕೋಟೆ,ಜ.19- ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪತನವಾದ ಬಳಿಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಬಿಜೆಪಿಯವರು ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. 24 ಗಂಟೆಯಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಹೇಳಿದ್ದರು. ಆದರೆ, ಉಪಚುನಾವಣೆಯಾಗಿ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆಯಾಗದೆ ಗ್ರಹಣ ಹಿಡಿದಿದೆ ಎಂದು ಟೀಕಿಸಿದರು.

ಎಲ್ಲ ಖಾತೆಗಳನ್ನು ಮುಖ್ಯಮಂತ್ರಿಯೊಬ್ಬರೇ ನಿಭಾಯಿಸೋಕೆ ಸಾಧ್ಯವೇ. ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಒಂದು ವೇಳೆ ಸಂಪುಟ ವಿಸ್ತರಣೆ ಮಾಡಿದ್ದೇ ಆದರೆ ಬಿಜೆಪಿ ಸರ್ಕಾರ ಉಳಿಯುವುದಿಲ್ಲ. ನಂತರ ಚುನಾವಣೆಯ ನಡೆದರೆ ನಾವೇ ಅಧಿಕಾರಕ್ಕೆ ಬರುವುದು ಎಂದು ಹೇಳಿದರು. ಇನ್ನಷ್ಟು ವಿರೋಧ ಪಕ್ಷಗಳ ಮುಖಂಡರು ಬಿಜೆಪಿಗೆ ಬರುತ್ತಾರೆ ಎಂಬ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಆಪರೇಷನ್ ಕಮಲದಲ್ಲಿ ನಿಸ್ಸೀಮರು.

ಯಡಿಯೂರಪ್ಪ ಈಗಾಗಲೇ ರಾಜೀನಾಮೆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಅವರ ಪಕ್ಷದವರ ಒತ್ತಡದಿಂದ ಅಂತಹ ಪರಿಸ್ಥಿತಿ ಉಂಟಾಗಿದೆ. ಆರಂಭದಲ್ಲೇ ಮುಖ್ಯಮಂತ್ರಿ ಪರಿಸ್ಥಿತಿ ಹೀಗಾದರೆ ಸಂಪುಟ ವಿಸ್ತರಣೆ ನಂತರ ಬಿಜೆಪಿಯ ನಿಜ ಬಣ್ಣ ಬಯಲಾಗಲಿದೆ ಎಂದು ಹೇಳಿದರು. ಬಜೆಟ್ ಅಧಿವೇಶನ, ಜಂಟಿ ಅಧಿವೇಶನ ಮುಂದೆ ಹಾಕಿರುವುದರಿಂದ ಅಧಿವೇಶನದ ಮಹತ್ವವೇ ಮಂಕಾದಂತಾಗಿದೆ. ವಿರೋಧ ಪಕ್ಷ ಎದುರಿಸುವ ನೈತಿಕ ಸ್ಥೈರ್ಯ ಬಿಜೆಪಿಯವರಿಗಿಲ್ಲ ಎಂದು ಹರಿಹಾಯ್ದ ಪಾಟೀಲ್, ವಿದೇಶ ಪ್ರವಾಸದ ನೆಪವೊಡ್ಡಿ ಅಧಿವೇಶನ ಮುಂದೂಡಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರ ಮೇಲಿನ ಇಡಿ ಅಧಿಕಾರಿಗಳ ವಿಚಾರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ನಾವು ಕಾಂಗ್ರೆಸ್‍ನವರು, ಬ್ರಿಟೀಷರ ಗುಂಡುಗಳಿಗೇ ಹೆದರಲಿಲ್ಲ. ಬ್ರಿಟೀಷರ ಗುಂಡಿಗೆ ಎದೆಯೊಡ್ಡಿದವರು. ಇನ್ನು ಇಡಿ ಮುಂದಿಟ್ಟುಕೊಂಡು ಆಟ ಆಡುವ ಬಿಜೆಪಿಗೆ ಹೆದರುತ್ತೇವೆಯೇ? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನಾವು ಎಂದು ಸಮರ್ಥಿಸಿಕೊಂಡರು.

ಬೇಗ ಕ್ರಮ ಕೈಗೊಳ್ಳಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಖಚಿತ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಬಗ್ಗೆ ನಮ್ಮ ಹೈಕಮಾಂಡ್ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕೆಂದು ಬಯಸುತ್ತೇನೆ. ಅಧ್ಯಕ್ಷರಾಗಲು ಒತ್ತಾಯ ಮಾಡೋದು ಸಾಮಾನ್ಯ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರಲು ಯಾರು ಸಮರ್ಥರು ಅವರನ್ನು ಆಯ್ಕೆ ಮಾಡುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೂರು ಸಾರಿ ರಾಜ್ಯಕ್ಕೆ ಬರಲಿ. ನಾವು ಭಯ ಪಡುವ ಪ್ರಶ್ನೆಯೇ ಇಲ್ಲ. ಮೋದಿ ಎರಡು ಬಾರಿ ರಾಜ್ಯಕ್ಕೆ ಬಂದರು. ಶತಮಾನದ ಭೀಕರ ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿದ್ದರೂ ಅವರು ಪ್ರವಾಹ ಸ್ಥಿತಿಗತಿ ಕೇಳಲಿಲ್ಲ. 38 ಸಾವಿರ ಕೋಟಿಯಷ್ಟು ಹಾನಿ ಸಂಭವಿಸಿದ್ದರೂ 1869 ಕೋಟಿ ಪ್ರವಾಹ ಪರಿಹಾರ ಮಾತ್ರ ಕೊಟ್ಟಿದ್ದಾರೆ. ಹಿಂದೆ ಪ್ರವಾಹ ಬಂದಾಗ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ರಾಜ್ಯಕ್ಕೆ ಬಂದು ಸೂಕ್ತ ಪರಿಹಾರ ಘೋಷಣೆ ಮಾಡಿದ್ದರು ಎಂದರು.

Advertisement

ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಪರವಾಗಿ ವಚನಾನಂದ ಶ್ರೀಗಳು ಆಡಿರುವ ಮಾತುಗಳನ್ನು ನಾನು ಹೊಸದಾಗಿ ನೋಡುತ್ತಿದ್ದೇನೆ. ಭಾರತ ಸಾಧು-ಸಂತರು ನೆಲೆಸಿದ ನೆಲ. ಸ್ವಾಮೀಜಿಗಳು ಧರ್ಮಪ್ರಸಾರ, ಜನತೆಯ ಕಲ್ಯಾಣ ಮಾಡುವುದರಲ್ಲಿ ಮುತುವರ್ಜಿ ವಹಿಸಬೇಕು. ಸಾರ್ವಜನಿಕವಾಗಿ ಇಂಥವರನ್ನೇ ಮಂತ್ರಿ ಮಾಡಿ ಎಂದು ಹೇಳಿದ್ದನ್ನು ಎಂದೂ ಕೇಳಿಲ್ಲ ಎಂದರು.


Spread the love

About Laxminews 24x7

Check Also

ಬೆಳಗಾವಿಯಲ್ಲೂ ಗುಳೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲಸ ಹುಡುಕಿಕೊಂಡು ನಿತ್ಯ ಸಾವಿರಾರು ಜನರು ಗೋವಾ, ಉಡುಪಿ, ಮಂಗಳೂರು ಕಡೆಗೆ ವಲಸೆ

Spread the loveಬೆಳಗಾವಿಯಲ್ಲೂ ಇದೇ ಸ್ಥಿತಿ: ಜಿಲ್ಲೆಯ 506 ಗ್ರಾಪಂ ವ್ಯಾಪ್ರಿಯ 640ಕ್ಕೂ ಅಧಿಕ ಹಳ್ಳಿಗಳಲ್ಲಿ ರೈತರು, ಕೂಲಿಕಾರರಿಗೆ ನರೇಗಾ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ