Breaking News
Home / ಕೊರೊನಾವೈರಸ್ / ದುಂದುವೆಚ್ಚ ಬಿಡಿ; ಆರೋಗ್ಯ ಸೌಕರ್ಯಕ್ಕೆ ಒತ್ತು ಕೊಡಿ: ಪಾಲಿಕೆ ಸದಸ್ಯ ಸಲಹೆ

ದುಂದುವೆಚ್ಚ ಬಿಡಿ; ಆರೋಗ್ಯ ಸೌಕರ್ಯಕ್ಕೆ ಒತ್ತು ಕೊಡಿ: ಪಾಲಿಕೆ ಸದಸ್ಯ ಸಲಹೆ

Spread the love

ಬೆಂಗಳೂರು: ಕೊರೊನಾ ಸೋಂಕು ಹಬ್ಬುತ್ತಿರುವ ಈ ಸಂದರ್ಭದಲ್ಲಿ ಬಿಬಿಎಂಪಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಆರೋಗ್ಯ ಸೌಕರ್ಯ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ಪಾಲಿಕೆ ಸದಸ್ಯ ಎಂ.ಶಿವರಾಜು ಸಲಹೆ ನೀಡಿದರು.

ಶಂಕರಮಠ ವಾರ್ಡ್‌ನಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾತನಾಡಿದರು.

* ವಾರ್ಡ್‌ನಲ್ಲಿ ಕೊರೊನಾ ಸೊಂಕು ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ?
ಎಲ್ಲ ಬಡಾವಣೆಗಳ ಪ್ರಮುಖ ರಸ್ತೆ ಗಳಿಗೆ ಸೊಂಕು ನಿವಾರಕ ಸಿಂಪಡಿಸಿದ್ದೇವೆ. ಕೋವಿಡ್ ಪ್ರಕರಣ ಪತ್ತೆಯಾದವರ ಮನೆಗೆ, ಆ ಕಟ್ಟಡಕ್ಕೆ ಮತ್ತು ಅಕ್ಕ ಪಕ್ಕದ ರಸ್ತೆಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತೇವೆ. ಸೋಡಿಯಂ ಹೈಪೋ ಕ್ಲೋರೈಟ್‌ ದ್ರಾವಣವನ್ನು ಬಿಬಿಎಂಪಿಯೇ ಒದಗಿಸುತ್ತದೆ. ಅದನ್ನು ಸಿಂಪಡಿಸುವ ಜವಾಬ್ದಾರಿಯನ್ನು ನಾವೇ ನಿರ್ವಹಿಸುತ್ತಿದ್ದೇವೆ.

ಬಡಾವಣೆ ನಿವಾಸಿಗಳ ಪ್ರಮುಖರನ್ನು ಒಳಗೊಂಡ ವಾಟ್ಸ್ ಆಯಪ್‌ ಗುಂಪು ರಚಿಸಿಕೊಂಡಿದ್ದೇವೆ. ಅಗತ್ಯ ಇರುವ ಹಿರಿಯ ನಾಗರಿಕರಿಗೆ ಔಷಧ ಪೂರೈಸಲು, ಕೋವಿಡ್‌ ಪ್ರಕರಣ ಪತ್ತೆಯಾದಾಗ ತುರ್ತು ಸ್ಪಂದನೆ ಒದಗಿಸಲು ಇದರಿಂದ ನೆರವಾಗಿದೆ. ಸಮಸ್ಯೆಯಾದರೆ ನೇರವಾಗಿ ಕರೆ ಮಾಡುತ್ತಾರೆ. ಅವರಿಗೆ ನೆರವಾಗಲು ತಂಡವು ಸಜ್ಜಾಗಿದೆ. ತುರ್ತು ಸಂದರ್ಭದಲ್ಲಿ ಸಭೆ ನಡೆಸಿ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದೇವೆ.

* ಹಾಸಿಗೆ ಇಲ್ಲ, ಆಂಬುಲೆನ್ಸ್‌ ಸಿಗುತ್ತಿಲ್ಲ ಎಂಬ ದೂರುಗಳು ಬಾರದಂತೆ ಏನು ಕ್ರಮ ವಹಿಸಿದ್ದೀರಿ?
ವಾರ್ಡ್‌ನಲ್ಲಿ ಇದುವರೆಗೆ ಕೋವಿಡ್‌ನ 85 ಪ್ರಕರಣಗಳು ಪತ್ತೆಯಾಗಿವೆ. ಐವರು ಈ ಸೋಂಕಿನಿಂದ ಸತ್ತಿದ್ದಾರೆ. 22 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಯಾವುದೇ ಹೊಸ ಪ್ರಕರಣ ಪತ್ತೆಯಾದರೂ ಅವರನ್ನು ರಾಜಾಜಿನಗರದ ಇಎಸ್‌ಐ ಆಸ್ಪತ್ರೆ, ವಿಕ್ಟೋರಿಯಾ, ಜಿಕೆವಿಕೆ, ಆಕಾಶ್‌ ವೈದ್ಯಕೀಯ ಕಾಲೇಜು, ಮೆಜೆಸ್ಟಿಕ್‌ನ ಆಯುರ್ವೇದ ವೈದ್ಯಕೀಯ ಕಾಲೇಜು ಮುಂತಾದ ಕಡೆಗೆ ದಾಖಲಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬೆಂಗಳೂರಲ್ಲಿ ಲಾಕ್‌ಡೌನ್ ಆದಾಗಿನಿಂದಲೂ ಜನರನ್ನು ನೇರ ಭೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಹಿರಿಯ ನಾಗರಿಕರಿಗೆ ಜನರೂ ಸಹಕಾರ ಕೊಡುತ್ತಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಗೆ ಸಮಸ್ಯೆ ಆಗುತ್ತಿದೆ ಎಂಬ ದೂರುಗಳಿವೆಯಲ್ಲಾ?
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ನೆರವಿಗೆ ಯಾರೂ ಮುಂದೆ ಬರುತ್ತಿಲ್ಲ. ಇದು ತಪ್ಪು. ನಾವು ಯಾವತ್ತೂ ಮಾನವೀಯತೆ ಮರೆಯಬಾರದು. ಕೋವಿಡ್‌ ಭಯ ನಿವಾರಿಸಿ ಜನರಲ್ಲಿ ಸ್ಥೈರ್ಯ ತುಂಬಲು ನಾನೇ ಖುದ್ದಾಗಿ ಇಂತಹವರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದೇನೆ.

ಜಯದೇವದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಒಬ್ಬ ವ್ಯಕ್ತಿ ಕೋವಿಡ್‌ನಿಂದಾಗಿ ತೀರಿ ಹೋದಾಗ ಅವರ 16ವರ್ಷದ ಮಗಳೇ ಅಂತ್ಯಕ್ರಿಯೆಗೆ ನಡೆಸಿದಳು. ಆ ಹುಡುಗಿಯ ತಾಯಿ- ಮತ್ತು ಇತರ ಕುಟುಂಬಸ್ಥರೂ ಹೋಂ ಕ್ವಾರಂಟೈನ್‌ನಲ್ಲಿದ್ದರು. ನಾನು ಅವರಿಗೆ ಅಗತ್ಯ ನೆರವು ಒದಗಿಸಿದೆ. ಪಿಪಿಇ ಕಿಟ್‌ ಧರಿಸಿ ನಾನೂ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿ, ಸ್ಥೈರ್ಯ ತುಂಬಿದೆ. ಜೆ.ಸಿ.ನಗರದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾದರು. ಅವರ ಅಂತ್ಯಕ್ರಿಯೆಗೂ ವ್ಯವಸ್ಥೆ ಮಾಡಿ, ನಾನೇ ಖುದ್ದಾಗಿ ಭಾಗವಹಿಸಿದೆ.

* ಕೋವಿಡ್‌ ಭಯದಿಂದ ಚಿಕಿತ್ಸೆ ಅಗತ್ಯ ಇರುವವರ ನೆರವಿಗೆ ಧಾವಿಸುವುದಕ್ಕೂ ಜನ ಹಿಂದೇಟು ಹಾಕುತ್ತಿದ್ದಾರಲ್ಲಾ?
ನಮ್ಮ ವಾರ್ಡ್‌ನಲ್ಲೂ ಇಂಥ ಘಟನೆ ನಡೆಯಿತು. ಮೂರ್ಛೆರೋಗ ಹೊಂದಿದ್ದ ವ್ಯಕ್ತಿಯೊಬ್ಬರು ರಸ್ತೆ ಬದಿ ಸುಮಾರು ಒಂದು ತಾಸು ಬಿದ್ದುಕೊಂಡಿದ್ದರು. ಜನ ಅವರನ್ನು ಮುಟ್ಟಲೂ ಹಿಂದೇಟು ಹಾಕುತ್ತಿದ್ದರು. ಬಳಿಕ ನಾನೇ ಆಟೊರಿಕ್ಷಾ ತರಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ.

ಗರ್ಭಿಣಿಯೊಬ್ಬರಿಗೆ ಹೆರಿಗೆ ದಿನಾಂಕ ನಿಗದಿಯಾಗಿತ್ತು. ಅದರೆ, ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಸಮಸ್ಯೆ ಎದುರಿಸಿದ್ದರು. ನನ್ನ ಕಾರಿನಲ್ಲಿ ಅವರನ್ನು ಕರೆದೊಯ್ದು ಶ್ರೀರಾಂಪುರದ ಆಸ್ಪತ್ರೆಗೆ ದಾಖಲಿಸಿದೆ. ಆ ಮಹಿಳೆಗೆ ನಿನ್ನೆ ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹ ಕಾರ್ಯಗಳು ನಮ್ಮ ಮನಸ್ಸಿಗೂ ಸಮಾಧಾನ ತರುತ್ತವೆ.

* ಕೋವಿಡ್‌ ಪರೀಕ್ಷೆ ವಿಳಂಬವಾಗುತ್ತಿರುವುದು ನಿಜವೇ?
ಹೌದು. ಕೋವಿಡ್‌ ಪರೀಕ್ಷೆಗೆ ನಾಲ್ಕೈದು ದಿನ ತೆಗೆದುಕೊಂಡರೆ ಹೇಗೆ. ಅಷ್ಟರಲ್ಲಿ ಸುತ್ತಾಡಿ ಇನ್ನಷ್ಟು ಮಂದಿಗೆ ಪಸರಿಸುತ್ತಾರೆ. ದೃಢಪಟ್ಟ ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯೂ ನಗರದಲ್ಲಿ ಅನೇಕ ಕಡೆ ಆಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಎಲ್ಲ ರೋಗಿಗಳಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಎನ್ನುತ್ತಿದ್ದಾರೆ. ಪರೀಕ್ಷೆ ಫಲಿತಾಂಶ ಅದೇ ದಿನ ಬರಲ್ಲ. ಯಾರದರೂ ಸತ್ತು ಅವರಿಗೆ ಕೋವಿಡ್‌ ದೃಢಪಟ್ಟರೆ ಅವರ ಹತ್ತಿರ ಯಾರೂ ಬರಲ್ಲ. ಸತ್ತವರ ಕೋವಿಡ್‌ ಪರೀಕ್ಷೆ ಫಲಿತಾಂಶವನ್ನೂ ವಿಳಂಬ ಮಾಡುವುದು ಎಷ್ಟು ಸರಿ.

* ಸರ್ಕಾರ ಬಡವರಿಗೆ ₹ 5ಸಾವಿರ ಪ್ಯಾಕೇಜ್‌ ಪ್ರಕಟಿಸಿದೆಯಲ್ಲಾ?
ಮನೆ ಕೆಲಸ ಮಾಡುವವರು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರು, ಸವಿತಾ ಸಮಾಜದವರು, ಆಟೊ ಚಾಲಕರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರ ಖಾತೆಗೆ ₹ 5ಸಾವಿರ ಹಾಕುತ್ತೇವೆ ಎಂದು ಸರ್ಕಾರ ಘೋಷಿಸಿದ್ದು ನಿಜ. ಆದರೆ, ಕೆಲವೇ ಕೆಲವರಿಗೆ ಮಾತ್ರ ಈ ಸವಲತ್ತು ಸಿಕ್ಕಿದೆ. ಜನ ಮಕ್ಕಳ ಶಾಲಾ ಶುಲ್ಕ ಕಟ್ಟಲೂ ಪರದಾಡುತ್ತಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ