Breaking News
Home / ರಾಜಕೀಯ / ಇಷ್ಟು ದಿನ‌ ನೀವು ಏನು ಮಾಡಿದ್ದೀರಿ? ಎಂಬುದು ನನಗೆ ಬೇಕಿಲ್ಲ. ಆಡಳಿತದಲ್ಲಿ ನಾನು ಏನು ಆದೇಶ ಮಾಡುತ್ತೇನೊ ಅದು ಜಾರಿ ಆಗಲೇ ಬೇಕು: ಬೊಮ್ಮಾಯಿ ಗರಂ! .

ಇಷ್ಟು ದಿನ‌ ನೀವು ಏನು ಮಾಡಿದ್ದೀರಿ? ಎಂಬುದು ನನಗೆ ಬೇಕಿಲ್ಲ. ಆಡಳಿತದಲ್ಲಿ ನಾನು ಏನು ಆದೇಶ ಮಾಡುತ್ತೇನೊ ಅದು ಜಾರಿ ಆಗಲೇ ಬೇಕು: ಬೊಮ್ಮಾಯಿ ಗರಂ! .

Spread the love

ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಗಳ ಮಹತ್ವದ ಸಭೆ ನಡೆಸಿದ್ದಾರೆ. ನಂತರ ರಾಜ್ಯ ಸಚಿವ ಸಂಪುಟ ಸಭೆಯನ್ನೂ ಮಾಡಿದ್ದಾರೆ. ಆದರೆ ಅಧಿಕಾರಿಗಳ ಸಭೆಯಲ್ಲಿ ಮಹತ್ವದ ಸೂಚನೆಗಳನ್ನು ಕೊಡುವ ಮೂಲಕ ತಮ್ಮ ಮುಂದಿನ ಆಡಳಿತದ ಮುನ್ಸೂಚನೆಯನ್ನು ಸಿಎಂ ಬೊಮ್ಮಾಯಿ ಕೊಟ್ಟಿದ್ದಾರೆ.

ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನೇರವಾಗಿ ವಿಧಾನಸೌಧಕ್ಕೆ ತೆರಳಿದ್ದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಮುಂದಿನ ಆಡಳಿತ ವೈಖರಿಯ ಬಗ್ಗೆ ಸ್ಪಷ್ಟತೆಯನ್ನು ಸಿಎಂ ಬೊಮ್ಮಾಯಿ ಕೊಟ್ಟಿದ್ದಾರೆ.

ಪ್ರಮುಖವಾಗಿ ಅಧಿಕಾರಿಗಳ ವರ್ತನೆ ಹಾಗೂ ದುಂದು ವೆಚ್ಚದ ಬಗ್ಗೆ ಸಭೆಯಲ್ಲಿ ಕಠಿಣ ಸೂಚನೆಗಳನ್ನು ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ. ಹೇಗಿದ್ದರೂ ನಡೆಯುತ್ತದೆ, ನಾವು ಸರ್ಕಾರಿ ನೌಕರರು ಎಂಬ ಮನೋಭಾವವನೆಯನ್ನು ಬದಲಿಸಿಕೊಳ್ಳುವಂತೆ ಬೊಮ್ಮಾಯಿ ಖಡಕ್ ಆದೇಶ ಮಾಡಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿಗಳು ಕೂಡ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮಹತ್ವದ ಭರವಸೆಯನ್ನು ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ಒಟ್ಟಾರೆ ಇಡೀ ಸಭೆಯಲ್ಲಿ ಆಗಿದ್ದೇನು? ಮುಂದಿದೆ ಮಾಹಿತಿ!

ಇಷ್ಟು ದಿನ ನೀವು ಏನು ಮಾಡಿದ್ದೀರಿ?

ಡ್ರಗ್ಸ್ ಪ್ರಕರಣದ ಉದಾಹರಣೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ತಮ್ಮ ಆಡಳಿತದ ವೈಖರಿಯನ್ನು ಅಧಿಕಾರಿಗಳಿಗೆ ಸೂಚಿಸಿದ್ದಾರೆ. “ಡ್ರಗ್ಸ್ ಪ್ರಕರಣದ ನಂತರ ಸರ್ಕಾರ ಇದೆ ಅಂತಾ ಜನರಿಗೆ ಗೊತ್ತಾಯ್ತು. ಅದೇ ರೀತಿ ನಾವು ಜನರಿಗೆ ಉತ್ತಮ ಸಂದೇಶ ರವಾನೆ ಮಾಡಬೇಕಿದೆ. ಇಷ್ಟು ದಿನ‌ ನೀವು ಏನು ಮಾಡಿದ್ದೀರಿ? ಎಂಬುದು ನನಗೆ ಬೇಕಿಲ್ಲ. ಆಡಳಿತದಲ್ಲಿ ನಾನು ಏನು ಆದೇಶ ಮಾಡುತ್ತೇನೊ ಅದು ಜಾರಿ ಆಗಲೇ ಬೇಕು. ಒಟ್ಟಾಗಿಯೇ ನಾವು ಮುನ್ನಡೆಯಬೇಕು. ನಾವು ಬೇರೆಯಲ್ಲ, ಅಧಿಕಾರಿಗಳಾದ ನೀವು ಬೇರೆಯಲ್ಲ. ಸಾಧನೆಯ ಕ್ರೆಡಿಟ್‌ ನಿಮಗೂ ಸೇರುತ್ತದೆ, ನನಗೂ ಬರುತ್ತದೆ. ರಾಜ್ಯದ ಜನ ನೆನಪಿನಲ್ಲಿಡುವಂತೆ ಎಚ್ಚರಿಕೆಯಿಂದ ಕೆಲಸ ಮಾಡೋಣ” ಎಂದು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ಜೊತೆಗೆ, “ನಾವು ಜನರ ಬಳಿ ಆಡಳಿತ ಕೊಂಡೊಯ್ಯಬೇಕು. ಅದನ್ನು ಬಿಟ್ಟು ಜನರು ನಮ್ಮ ಬಳಿ ಬರುವಂತೆ ಆಗಬಾರದು” ಎಂದು ಅಧಿಕಾರಿಗಳಿಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ದಿಟ್ಟ ತೀರ್ಮಾನ ಕೈಗೊಂಡಿದ್ದೇನೆ

 

“ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು, ಒಂದೇ ತಂಡ ಎಂಬ ಸ್ಫೂರ್ತಿಯಿಂದ ಎಲ್ಲರೂ ಕೆಲಸ ಮಾಡಬೇಕು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, “ಸರ್ಕಾರದ ಆಡಳಿತ ಒಂದು ನಿರಂತರ ಪ್ರಕ್ರಿಯೆ. ಅದು ಎಂತಹ ಪರಿಸ್ಥಿತಿಯಲ್ಲೂ ಅನಿರ್ಬಂಧಿತವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯದ ಜನತೆಗೆ ದಕ್ಷ, ಪ್ರಾಮಾಣಿಕ ಹಾಗೂ ಜನಪರ ಆಡಳಿತ ಕೊಡುವ ದಿಟ್ಟ ತೀರ್ಮಾನ ಕೈಗೊಂಡಿದ್ದೇನೆ. ಇದನ್ನು ಅನುಷ್ಠಾನ ಮಾಡುವುದು ಎಷ್ಟು ಕಷ್ಟ ಎಂಬುದನ್ನು ಅರಿತೇ ಈ ಮಾತನಾಡುತ್ತಿದ್ದೇನೆ” ಎಂದರು.

ನನ್ನ ಸರ್ಕಾರ ನಿಮ್ಮೊಂದಿಗೆ..!

 

“ಪ್ರಗತಿಪರ, ಪರಿಣಾಮಕಾರಿ ಆಡಳಿತ ಕೊಟ್ಟ ಹೆಗ್ಗಳಿಕೆ ನಮ್ಮ ರಾಜ್ಯದ್ದು. ಬದಲಾದ ಪರಿಸ್ಥಿತಿಯಲ್ಲಿ ನಾವು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಬೇಕಾಗಿದೆ. ಸಚಿವ ಸಂಪುಟದ ನಿರ್ಣಯಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು. ವಿಳಂಬವಾದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ಆಡಳಿತದಲ್ಲಿ ವಿಳಂಬ ಧೋರಣೆ ಕ್ಯಾನ್ಸರ್ ಇದ್ದಂತೆ. ಆದ್ದರಿಂದ ಸರ್ಕಾರದ ನಿರ್ಣಯಗಳು ನಿಗದಿತ ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ಬರಬೇಕು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ತಿಳಿಸಿದರು.

“ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕಾರ್ಯಚಟುವಟಿಕೆಗಳು, ನೀತಿ-ನಿಯಮಾವಳಿಗಳು, ಮಾರ್ಗಸೂಚಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದು ಕಾರ್ಯನಿರ್ವಹಿಸಬೇಕು. ಒಳ್ಳೆಯ ಕೆಲಸಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾಡಿ. ನನ್ನ ಸರ್ಕಾರ ನಿಮ್ಮೊಂದಿಗೆ ಇರುತ್ತದೆ” ಎಂದು ಭರವಸೆ ಕೊಟ್ಟಿದ್ದಾರೆ.

ಸಿಎಂ ಬೊಮ್ಮಾಯಿಗೆ ಸಿಎಸ್‌ ಭರವಸೆ!

 

“ಸದ್ಯ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವುದು ಹಾಗೂ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ನಮ್ಮ ಆದ್ಯತೆಯಾಗಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಇಲಾಖೆಯಲ್ಲಿ ವರ್ಷಾಂತ್ಯದ ವೇಳೆಗೆ ಶೇಕಡಾ 5 ರಷ್ಟು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು. ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿ” ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಸೂಚಿಸಿದ್ದಾರೆ.

“ನಿಗದಿತ ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕು. ಜೊತೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಕುರಿತು ಮತ್ತೊಮ್ಮೆ ವಿವರವಾಗಿ ಚರ್ಚಿಸಿ, ಗೊಂದಲ ನಿವಾರಣೆಗೆ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ಇಲಾಖೆಗಳ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ದಕ್ಷತೆಯಿಂದ ಕಾರ್ಯನಿರ್ವಹಿಸುವ ಇಲಾಖೆಗಳಿಗೆ ಉತ್ತೇಜನ ನೀಡಲಾಗುವುದು” ಎಂದರು.

ಸಭೆಯಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮುಖ್ಯಮಂತ್ರಿಯವರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ