Breaking News
Home / Uncategorized / ಹಬ್ಬದ ಕೂಳಿಗೆ ಆಸೆ ಬಿದ್ದು ವರ್ಷದ ಕೂಳು ಕಳೆದುಕೊಂಡ್ರಾ ಬಾಂಬೆ ಟೀಮ್!

ಹಬ್ಬದ ಕೂಳಿಗೆ ಆಸೆ ಬಿದ್ದು ವರ್ಷದ ಕೂಳು ಕಳೆದುಕೊಂಡ್ರಾ ಬಾಂಬೆ ಟೀಮ್!

Spread the love

ಬೆಂಗಳೂರು, ಜು. 27: ಅಧಿಕಾರದ ಆಸೆಗೆ ಬಿದ್ದು ಮಾತೃ ಪಕ್ಷಕ್ಕೆ ಮಣ್ಣೆರಚಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸಿದ್ದ ಬಾಂಬೆ ಗ್ಯಾಂಗ್ ವಿಚಲಿತಕ್ಕೆ ಒಳಗಾಗಿದೆ. ಪ್ರಭಾವಿ ಖಾತೆಗಳನ್ನು ಕರುಣಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕೆ ಬದುಕನ್ನೇ ಮುಡಿಪಿಟ್ಟ ಬಿಎಸ್‌ವೈ ಅವರಿಂದಲೇ ರಾಜೀನಾಮೆ ಪಡೆದ ಬಿಜೆಪಿ ಪಕ್ಷ ಪಕ್ಷಾಂತರಿಗಳಿಗೆ ಮುಂದಿನ ದಿನಗಳಲ್ಲಿ ಎಷ್ಟು ಮರ್ಯಾದೆ ಕೊಡಬಹುದು ಎಂಬ ಪ್ರಶ್ನೆ ಎದುರಾಗಿದೆ. ಹಬ್ಬದ ಕೂಳಿಗೆ ಆಸೆ ಬಿದ್ದು ವರ್ಷದ ಕೂಳು ಕಳೆದುಕೊಂಡಂತಾಗಿದೆ ಬಾಂಬೆ ಗ್ಯಾಂಗ್ ಪರಿಸ್ಥಿತಿ.

ಬಾಂಬೆಯ ಲೆಕ್ಕಾಚಾರ ಈಗ ಉಲ್ಟಾ: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಕ್ಕಿದ್ದಂತೆ ಪತನವಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಚಿವ ಸ್ಥಾನ ಸಿಗಲಿಲ್ಲ. ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣ ಕೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ಬಾಂಬೆಗೆ ಹಾರಿದ್ದರು. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಬಿ.ಸಿ. ಪಾಟೀಲ್, ಬೈರತಿ ಬಸವರಾಜು, ಎಂಟಿಬಿ ನಾಗರಾಜು, ಮನಿರತ್ನ, ಎಸ್. ಟಿ. ಸೋಮಶೇಖರ್ , ಡಾ. ಕೆ. ಸುಧಾಕರ್ ಕಾಂಗ್ರೆಸ್ ನಿಂದ ಜಿಗಿದಿದ್ದರು. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಬಿಟ್ಟು ಎಚ್‌. ವಿಶ್ವನಾಥ್, ನಾರಾಯಣಗೌಡ, ಶಾಸಕ ಗೋಪಾಲಯ್ಯ ಆಪರೇಷನ್ ಕಮಲ ಪಾಳಯ ಸೇರಿದ ನಾಯಕರು.

ಪ್ರಭಾವಿ ಸ್ಥಾನ ಅಲಂಕರಿಸಿದರು

ಗುಜರಾತ್‌ನಲ್ಲೇ ಕಾಂಗ್ರೆಸ್ ಶಕ್ತಿ ತೋರಿಸಿದ್ದ ಡಿ.ಕೆ. ಶಿವಕುಮಾರ್ ಶತಾಯ ಗತಾಯ ಪ್ರಯತ್ನ ಮಾಡಿದ್ರೂ ಬಾಂಬೆ ಸೇರಿದ್ದ ಒಬ್ಬ ಶಾಸಕನನ್ನು ವಾಪಸು ಕರೆ ತರಲು ಸಾಧ್ಯವಾಗಲಿಲ್ಲ. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳಿಸಿದ ಬಾಂಬೆ ಟೀಮ್ ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು ಎಂದು ಜೈಕಾರ ಹಾಕಿಬಿಟ್ಟರು. ಸರ್ಕಾರ ರಚನೆ ಮುಲಾಜಿಗೆ ಒಳಗಾಗಿ ಪಕ್ಷಾಂತರಿ ನಾಯಕರಿಗೆ ಅಯಕಟ್ಟಿನ ಮಂತ್ರಿ ಸ್ಥಾನಗಳನ್ನು ನೀಡಿದ್ದು ಬಿ.ಎಸ್. ಯಡಿಯೂರಪ್ಪ. ಕೊಟ್ಟ ಮಾತಿನಂತೆ ನಂಬಿ ಬಂದ ಶಾಸಕರಿಗೆ ಮೋಸ ಮಾಡಲಿಲ್ಲ. ಮೂಲ ಬಿಜೆಪಿಗರ ಅಪಸ್ವರದ ನಡುವೆಯೂ ವಲಸಿಗ ಹಕ್ಕಿಗಳಿಗೆ ಮಹತ್ವದ ಸಚಿವ ಸ್ಥಾನಗಳನ್ನೇ ಕೊಟ್ಟು ಪೋಷಣೆ ಮಾಡಿದರು. ಯಡಿಯೂರಪ್ಪ ಈ ನಡೆಗೆ ಮೂಲ ಬಿಜೆಪಿಗರು ತೀವ್ರ ವಿರೋಧ ವ್ಯಕ್ತಪಡಿಸಿದರು. ವೈದ್ಯಕೀಯ, ಆರೋಗ್ಯ, ಕಾರ್ಮಿಕ, ಸಹಕಾರ, ಆಹಾರ, ಅಬಕಾರಿ, ಸಿಂಹಪಾಲು ಸಚಿವ ಸ್ಥಾನ ಅಲಂಕರಿಸಿದರು.

ಅಸ್ತಿತ್ವ ಕಳೆದುಕೊಂಡರು

 

ಆಪರೇಷನ್ ಕಮಲಕ್ಕೆ ತುತ್ತಾಗಿ ಪ್ರಭಾವಿ ಸಚಿವ ಸ್ಥಾನಗಳನ್ನು ಹುದ್ದೆ ಗಿಟ್ಟಿಸಿಕೊಂಡವರು ಸಿಂಹಪಾಲು ಇರಬಹುದು. ಸಚಿವ ಸ್ಥಾನ ಅಧಿಕಾರದ ಆಸೆಗೆ ಬಿದ್ದು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಳ್ಳುತ್ತಿರುವ ಸರಣಿ ಶುರುವಾಗಿದೆ. ಒಂದಡೆ ಒಬ್ಬೊಬ್ಬರ ರಾಜಕೀಯ ಭವಿಷ್ಯ ಮುಗಿಯುತ್ತಿದೆ. ಇಲ್ಲಿವರೆಗೂ ಕಂಕಳಲ್ಲಿ ಇಟ್ಟುಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ಅವರೇ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಪಕ್ಷಾಂತರಿಗಳಿಗೆ ಎಷ್ಟು ಮಹತ್ವ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಸಿಎಂನ್ನೇ ಬದಲಿಸಿದ ನಾಯಕರು ಇದೀಗ ಮೂಲ ಬಿಜೆಪಿಗರಿಗೆ ಒತ್ತು ನೀಡಲಿದ್ದಾರೆ. ಹೀಗಾಗಿ ಬಾಂಬೆ ಟೀಮ್ ಸದಸ್ಯರು ಸಚಿವ ಸ್ಥಾನ ಕಳೆದುಕೊಳ್ಳುವುದು ಗ್ಯಾರೆಂಟಿ. ಯಡಿಯೂರಪ್ಪ ಸಿಎಂ ಆಗಿ ನಾಲ್ಕು ವರ್ಷ ಅಧಿಕಾರ ನಡೆಸುತ್ತಾರೆ. ಅಲ್ಲಿವರೆಗೂ ಸಚಿವರಾಗಿ ಇರೋಣ ಎಂದು ಕನಸು ಕಾಣುತ್ತಿದ್ದವರು ಇದೀಗ ಇರುವ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ದೂಡಿದ್ದಾರೆ. ಅಂತೂ ಅಧಿಕಾರ ಎಂಬ ಹಬ್ಬದ ಊಟಕ್ಕೆ ಆಸೆ ಪಟ್ಟು ವರ್ಷದ ಬದುಕಿಗೆ ಕೊಳ್ಳಿ ಇಟ್ಟುಕೊಂಡಿದ್ದಾರೆ.

ಪತನದ ಪರ್ವ ಶುರುವಾಯ್ತು

 

ಜೆಡಿಎಸ್ ಕೋಟೆಯಾಗಿದ್ದ ಹೊಸಕೋಟೆಯ ಪ್ರಭಾವಿ ಶಾಸಕರಾಗಿದ್ದವರು ಬಿ. ಎನ್. ಬಚ್ಚೇಗೌಡ. ಬಚ್ಚೇಗೌಡರನ್ನು ಮಣಿಸಿ ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದ್ದು ಎಂ.ಟಿ. ಬಿ ನಾಗರಾಜ್ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬೀಗಿದ್ದರು. ಪಕ್ಷಾಂತರಿ ಎಂಟಿಬಿಯನ್ನು ಕೇವಲ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶರತ್ ಬಚ್ಚೇಗೌಡ ತನ್ನ ರಾಜಕೀಯ ಭವಿಷ್ಯ ಕಂಡುಕೊಂಡರು. ಭವಿಷ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದರೂ ಶರತ್ ಅವರನ್ನು ಮಣಿಸುವುದು ಕಷ್ಟ. ಸಚಿವ ಸ್ಥಾನ ಪಡೆದ ಒಂದೇ ತಿಂಗಳಿಗೆ ಇದೀಗ ಸಿಎಂ ಬದಲಾಗಿದ್ದಾರೆ. ಆ ಸಚಿವ ಸ್ಥಾನ ಸಿಗುವ ಗ್ಯಾರೆಂಟಿ ಇಲ್ಲ. ಹೊಸಕೋಟೆಯಲ್ಲಿ ಚುನಾವಣೆಯಲ್ಲಿ ನಿಂತು ಗೆಲ್ಲುತ್ತೀನಿ ಎಂಬ ಸಣ್ಣ ಭರವಸೆಯೂ ಇಲ್ಲದಂತಾಗಿದೆ. ಪಕ್ಷಾಂತರಿಯಾಗಿ ಪರೋಕ್ಷವಾಗಿ ಮುಗಿದ ನಾಯಕರಲ್ಲಿ ಎಂಟಿಬಿ ಕೂಡ ಒಬ್ಬರು.

ರಾಜಕೀಯ ನಿವೃತ್ತಿಯ ಮಾತು

 

ಬಾಂಬೆ ಟೀಮ್ ನಾಯಕನಾಗಿ ಗುರುತಿಸಿಕೊಂಡವರು ರಮೇಶ್ ಜಾರಕಿಹೊಳಿ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡು ಬಿಜೆಪಿಗೆ ಸೇರಿದರು. ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಲೀಡರ್ ಪಟ್ಟ ಧರಿಸಿದರು. ಹಠಕ್ಕೆ ಬಿದ್ದು ಡಿ.ಕೆ. ಶಿವಕುಮಾರ್ ಕೂತ ಕುರ್ಚಿಯಲ್ಲಿ ಕೂತರು. ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಸಚಿವ ಸ್ಥಾನ ಕಳೆದುಕೊಂಡರು. ಮಾತ್ರವಲ್ಲ, ರಾಜಕೀಯ ಜೀವನದಿಂದ ದೂರ ಉಳಿಯುವ ಮಾತು ಆಡುತ್ತಿದ್ದಾರೆ. ಸರ್ಕಾರವನ್ನು ಉಳಿಸಿದ ರಮೇಶ್ ಜಾರಕಿಹೊಳಿ ಡಿಸಿಎಂ, ಸಿಎಂ ಕನಸು ಕಾಣುತ್ತಿದ್ದರು. ಮುಂದೆ ಸಚಿವ ಸ್ಥಾನವಲ್ಲ, ಬಿಜೆಪಿಯಲ್ಲಿ ಉಳಿಯಲಾಗದ ಪರಿಸ್ಥಿತಿ.

ಬಾಣ ಬಿಡುವುದರಲ್ಲೇ ರಾಜಕೀಯ ಅಂತ್ಯ

 

ಶಿಕ್ಷಣ ಸಚಿವರಾಗಿ ಎಚ್. ವಿಶ್ವನಾಥ್ ಕೈಗೊಂಡ ಹಲವು ತೀರ್ಮಾನಗಳನ್ನು ಈಗಲೂ ಶಿಕ್ಷಕ ಸಮುದಾಯ ನೆನಪಿಸಿಕೊಳ್ಳುತ್ತದೆ. ಹಳ್ಳಿ ಹಕ್ಕಿ ಎಂದೇ ಖ್ಯಾತರಾದ ವಿಶ್ವನಾಥ್ ಸಿಎಂ ಹುದ್ದೆ ನಿಭಾಯಿಸುವಂತಹ ಜ್ಞಾನ ಉಳ್ಳವರು. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಅಲ್ಲಿನ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಬಿಜೆಪಿಗೆ ಸೇರಿದರು. ಪಕ್ಷಾಂತರವನ್ನು ಸಮರ್ಥಿಸಿಕೊಂಡ ವಿಶ್ವನಾಥ್ ಇದೀಗ ಬಿಜೆಪಿ ವಿರುದ್ಧ ಕೋಡಿ ಮಠದ ಶ್ರೀಗಳ ತರ ಭವಿಷ್ಯ ನುಡಿಯುವ ದುಸ್ಥಿತಿಗೆ ತಲುಪಿದ್ದಾರೆ. ಈ ಮೂಲಕ ತನ್ನ ರಾಜಕೀಯ ಭವಿಷ್ಯವನ್ನೇ ಮಂಕಾಗಿಸಿಕೊಂಡಿದ್ದಾರೆ.

ರೆಬಲ್ ಟೈಗರ್ ವಾಸ್ತವ ಸ್ಥಿತಿ

 

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದ ಸಿ.ಪಿ. ಯೋಗೀಶ್ವರ್ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದು ನಾನೇ ಎಂದು ಹೇಳಿಕೊಂಡಿದ್ದರು. ಆದರೆ, ಯಾವಾಗ ಬಯಸಿದ ಸಚಿವ ಸ್ಥಾನ ಸಿಗಲಿಲ್ಲವೋ ಯಡಿಯೂರಪ್ಪ ಸರ್ಕಾರದ ವಿರುದ್ಧವೇ ಸೈನಿಕ ಸಿಡಿದೆದ್ದರು. ಸಿಎಂ ಬದಲಾವಣೆ ಮಾಡಿಸ್ತೇನೆ ಎಂದು ಹೇಳಿಕೊಂಡು ಓಡಾಡಲು ಶುರು ಮಾಡಿದರು. ಇದೀಗ ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಆಗಿದೆ. ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ನೂತನ ಸಿಎಂ ಸಿ.ಪಿ. ಯೋಗೀಶ್ವರ್‌ಗೆ ಎಷ್ಟರ ಮಟ್ಟಿಗೆ ಒತ್ತು ನೀಡುತ್ತಾರೆ. ವಿಪರ್ಯಾಸ ಎಂದರೆ ಮತ್ತೆ ಚನ್ನಪಟ್ಟಣದಲ್ಲಿ ಚುನಾವಣೆ ಎದುರಿಸಿ ಗೆಲ್ಲುವ ಸ್ಥಿತಿಯಂತೂ ಕಣ್ಮರೆಯಾಗಿದೆ. ಇನ್ನು ಈ ಸಚಿವಗಿರಿ ಎರಡು ವರ್ಷ ಸಿಗಬಹುದು. ಮುಂದೇನು ಎಂಬುದು ಗೊತ್ತಿಲ್ಲ.

ಬಹುತೇಕರದ್ದು ಇದೇ ಸಮಸ್ಯೆ

ಇದು ಸದ್ಯಕ್ಕೆ ಪಕ್ಷಾಂತರಗೊಂಡವರ ಅಸಲಿ ಚಿತ್ರಣ. ಇನ್ನೂ ಎರಡು ವರ್ಷದಲ್ಲಿ ಏನು ಬದಲಾವಣೆ ಆಗುತ್ತೋ ಗೊತ್ತಿಲ್ಲ. ಈ ಅವಧಿಯಲ್ಲಿ ಇನ್ನೂ ಅದೆಷ್ಟು ಪಕ್ಷಾಂತರಿಗಳು ತಮ್ಮ ಛಾಯೆ ಕಳೆದುಕೊಳ್ಳಲಿದ್ದಾರೋ ಗೊತ್ತಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡಲಿಕ್ಕೆ ಪಕ್ಷಾಂತರಿಗಳ ಅಗತ್ಯವಿತ್ತು. ಅನಿವಾರ್ಯವಾಗಿ ಆದ್ಯತೆ ಕೊಡಬೇಕಿತ್ತು. ಭವಿಷ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ. ಮೂಲ ಬಿಜೆಪಿಗರಿಗೆ ದ್ರೋಹ ಬಗೆಯಲು ಆಗದು. ಈಗಾಗಲೇ ಪಕ್ಷಾಂತರಿಗಳು ಪ್ರತಿನಿಧಿಸುವ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯ ನಾಯಕರಿದ್ದಾರೆ. ಪಕ್ಷ ತೊರೆದ್ರೂ ಬಿಜೆಪಿ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಬಾಂಬೆ ಟೀಮ್ ನ ಒಂದೊಂದು ವಿಕೆಟ್ ಸದ್ದಿಲ್ಲದೇ ಪತನಗೊಂಡರೂ ಅಚ್ಚರಿ ಪಡಬೇಕಿಲ್ಲ. ಮುಂದಿನ ಚುನಾವಣೆಯಲ್ಲಿ ಗೆದ್ದು ಎಷ್ಟು ಮಂದಿ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲಿದ್ದಾರೆ ಎಂಬುದು ಯಕ್ಷ ಪ್ರಶ್ನೆ.


Spread the love

About Laxminews 24x7

Check Also

2 ಸಾವಿರ ರೂ. ಕಳ್ಳತನ ಶಿಕ್ಷಕಿಯರು ಸಮವಸ್ತ್ರ ಬಿಚ್ಚಿಸಿ ವಿದ್ಯಾರ್ಥಿನಿ ಪರಿಶೀಲನೆ; ಆತ್ನಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

Spread the loveಬಾಗಲಕೋಟೆ, ಮಾರ್ಚ್​.17: 2 ಸಾವಿರ ರೂ. ಕಳ್ಳತನವಾಗಿದೆ ಎಂದು ಶಿಕ್ಷಕಿಯರು ಸಮವಸ್ತ್ರ ಬಿಚ್ಚಿಸಿ ವಿದ್ಯಾರ್ಥಿನಿಯನ್ನು ಪರಿಶೀಲನೆ ನಡೆಸಿದ್ದು ಇದರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ