Breaking News
Home / ಜಿಲ್ಲೆ / ಬೆಂಗಳೂರು / ಯಾರಾಗ್ತಾರೆ ರಾಜ್ಯ ದ ಮುಂದಿನ ಸಿಎಂ?..

ಯಾರಾಗ್ತಾರೆ ರಾಜ್ಯ ದ ಮುಂದಿನ ಸಿಎಂ?..

Spread the love

ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಗಾದಿ ಎಂಬ ಕುತೂಹಲ ಈಗ ತೀವ್ರವಾಗಿದೆ. ಬಿಜೆಪಿ ಹೈಕಮಾಂಡ್‌ ಭಾಗವಾಗಿರುವ ನಾಯಕರು, ಹಿರಿಯ ಸಚಿವರು, ಶಾಸಕರು ಸೇರಿದಂತೆ ಹಲವರ ಹೆಸರುಗಳು ಸಂಭವನೀಯರ ಪಟ್ಟಿಯಲ್ಲಿವೆ. ಸಂಭವನೀಯರ ಪಟ್ಟಿಯಲ್ಲಿರುವರ ಸಾಮರ್ಥ್ಯ- ದೌರ್ಬಲ್ಯದ ಅಂಶಗಳೇನು ಎಂಬ ವಿವರ ಇಲ್ಲಿದೆ.

ಪ್ರಲ್ಹಾದ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಉತ್ತರ ಕರ್ನಾಟಕದವರು, ಸಂಘ ಪರಿವಾರದ ನಿಷ್ಠಾವಂತ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ನಿಕಟ ಒಡನಾಟ ಇರುವುದು ವರದಾನವಾಗಬಹುದು. ವಿವಾದಗಳಿಲ್ಲ. ಆದರೆ, ಸುಸೂತ್ರವಾಗಿ ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಿಸುತ್ತಿರುವ ಅವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದು ಅನುಮಾನ.

ಜಗದೀಶ ಶೆಟ್ಟರ್‌

ಜಗದೀಶ ಶೆಟ್ಟರ್‌ ಒಮ್ಮೆ ಮುಖ್ಯಮಂತ್ರಿ ಆಗಿದ್ದವರು. ಪರಿವಾರದ ಮೂಲ, ಉತ್ತರ ಕರ್ನಾಟಕ ಮತ್ತು ಲಿಂಗಾಯತ ಸಮುದಾಯದವರು ಅನುಕೂಲಕರ ಅಂಶ. ಯಡಿಯೂರಪ್ಪ ಅವರ ಜತೆಯಲ್ಲೇ ಅವರ ಸಮಕಾಲೀನರನ್ನೂ ಸರ್ಕಾರದಿಂದ ಹೊರಗಿಡುವ ಪ್ರಸ್ತಾವವು ಶೆಟ್ಟರ್‌ಗೆ ಅಡ್ಡಿಯಾಗಬಹುದು.

ಬಿ.ಎಲ್‌. ಸಂತೋಷ್‌

‘ಸಂಘ’ದಿಂದ ಬಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್‌. ಸಂತೋಷ್‌ ಪಕ್ಷದ ಹೈಕಮಾಂಡ್‌ನ ಭಾಗವಾಗಿಯೇ ಇರುವವರು. ಸದ್ಯ ಬಿಜೆಪಿ ನಾಯಕತ್ವ ಬಯಸುವ ಹಿಂದುತ್ವ ಪರ ಸರ್ಕಾರಕ್ಕೆ ಸೂಕ್ತ ಆಯ್ಕೆ ಎನಿಸಬಹುದು. ಅವರು ಮುಖ್ಯಮಂತ್ರಿ ಹುದ್ದೆಗೇರುವುದಾದರೆ ಆರ್‌ಎಸ್‌ಎಸ್‌ ಅನುಮತಿಯೂ ಬೇಕಿದೆ.

ಸಿ.ಟಿ. ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಪಕ್ಷ ನಿಷ್ಠರು, ಯಾವುದೇ ತ್ಯಾಗಕ್ಕೂ ಸಿದ್ಧ ಎಂಬ ಅಭಿಪ್ರಾಯವಿದೆ. ಒಕ್ಕಲಿಗರು. ಜಾತಿಗಿಂತಲೂ ಹೆಚ್ಚಾಗಿ ‘ಹಿಂದುತ್ವದ ನಾಯಕ’ ಎಂಬುದು ಅನುಕೂಲಕರ. ಆದರೆ, ಸರ್ಕಾರ ಮುನ್ನಡೆಸಲು ಅನುಭವದ ಕೊರತೆ ಜೊತೆಗೆ ಕೆಲವೊಮ್ಮೆ ಪ್ರಬುದ್ಧವಲ್ಲದ ರೀತಿಯಲ್ಲಿ ಮಾತನಾಡುತ್ತಾರೆ ಎಂಬ ಅಪವಾದವೂ ಇದೆ.

ಮುರುಗೇಶ ನಿರಾಣಿ

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಮುರುಗೇಶ ನಿರಾಣಿ ಪ್ರಬಲ ಆಕಾಂಕ್ಷಿ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಜತೆಗೆ ವ್ಯಾವಹಾರಿಕ ನಂಟು ಹೊಂದಿರುವುದು ಇವರ ಪ್ರಬಲ ಶಕ್ತಿ. ಉತ್ತರ ಕರ್ನಾಟಕ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡುವುದಾದಲ್ಲಿ ಇವರಿಗೆ ಆದ್ಯತೆ ಸಿಗಬಹುದು.

ವಿಶ್ವೇಶ್ವರ ಹೆಗಡೆ ಕಾಗೇರಿ

ಆರ್‌ಎಸ್‌ಎಸ್‌ ಕಾರ್ಯಕರ್ತರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬ್ರಾಹ್ಮಣ ಸಮುದಾಯದಿಂದ ಕೇಳಿಬರುತ್ತಿರುವ ಹೆಸರುಗಳಲ್ಲಿ ಒಂದು. ಸಂಘ ಪರಿವಾರದ ಬೆಂಬಲವೂ ಇದೆ. ಮತದಾರರನ್ನು ಆಕರ್ಷಿಸಬಲ್ಲ ನಾಯಕತ್ವ ಇಲ್ಲ ಎಂಬುದು ಋಣಾತ್ಮಕ ಅಂಶ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಅವರ ಆಪ್ತ ಎಂದೇ ಗುರುತಿಸಲಾಗುತ್ತಿದೆ. ಲಿಂಗಾಯತರಾಗಿರುವುದು, ಬಿ.ಎಲ್‌.ಸಂತೋಷ್‌ ಜತೆಗಿನ ಒಡನಾಟ ಮತ್ತು ಅವರ ಆಶಯಕ್ಕೆ ತಕ್ಕಂತೆ ಗೃಹ ಇಲಾಖೆಯನ್ನು ನಿರ್ವಹಿಸಿದ್ದಾರೆಂಬುದೂ ವರದಾನವಾಗಬಹುದು. ಆದರೆ, ಹೊರಗಿನಿಂದ ಬಂದವರು ಎಂಬುದು ಇವರಿಗಿರುವ ದೊಡ್ಡ ಅಡ್ಡಿ.

ಶಿವಕುಮಾರ ಉದಾಸಿ

ಹಾವೇರಿ ಸಂಸದ ಶಿವಕುಮಾರ್‌ ಉದಾಸಿ ಕೂಡ ಯುವಕರು. ಮೂರನೇ ಅವಧಿಗೆ ಸಂಸದರು. ಸಕ್ರಿಯರಾಗಿದ್ದು, ಪಕ್ಷದ ವರಿಷ್ಠರಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಇವರ ತಂದೆ ಸಿ.ಎಂ.ಉದಾಸಿ ಜನತಾಪರಿವಾರದವರು ಎಂಬುದು ಪ್ರತಿಕೂಲ ಅಂಶ.

ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಸಂಘ ಪರಿವಾರ ಹಿನ್ನೆಲೆಯ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬಿಜೆಪಿ ಬಯಸುವ ಕಾರ್ಪೋರೇಟ್‌ ಶೈಲಿಯ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿತ್ತು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ