Breaking News
Home / ರಾಜಕೀಯ / ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಖಚಿತ; ರಾಜಕೀಯ ಉತ್ತರಾಧಿಕಾರಿ ಯಾರು ಎಂಬುದಷ್ಟೇ ಪ್ರಶ್ನೆ, ಚರ್ಚೆ!

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಖಚಿತ; ರಾಜಕೀಯ ಉತ್ತರಾಧಿಕಾರಿ ಯಾರು ಎಂಬುದಷ್ಟೇ ಪ್ರಶ್ನೆ, ಚರ್ಚೆ!

Spread the love

ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತವಾಗಿದೆ. ಆದರೆ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಕುಟುಂಬದವರಿಗೆ ಮತ್ತೆ ಸಿಎಂ ಹುದ್ದೆ ಸಿಗಲ್ಲ. ಆದರೆ, ಯಡಿಯೂರಪ್ಪ ರಾಜಕೀಯ ಉತ್ತರಾಧಿಕಾರಿಗೆ ಯಾವ ಸ್ಥಾನಮಾನ ನೀಡಲಾಗುತ್ತೆ ಎಂಬುದು ಇನ್ನೂ ಸ್ಪಸ್ಪೆನ್ಸ್.

ರಾಘವೇಂದ್ರಗೆ ಹೋಲಿಸಿದರೆ, ವಿಜಯೇಂದ್ರಗೆ ಹೆಚ್ಚಿನ ನಾಯಕತ್ವ ಗುಣ
ಕರ್ನಾಟಕದ ಯಡಿಯೂರಪ್ಪ ಸಿಎಂ ಕುರ್ಚಿಯಲ್ಲಿ ಈಗ ದಿನಗಳನ್ನು ಎಣಿಸುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಯಡಿಯೂರಪ್ಪ ಸಿದ್ದವಾಗಿದ್ದಾರೆ. ಆದರೆ, ಈಗ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯವಾಗಿ ಅಷ್ಟೇನೂ ಸಕ್ರಿಯವಾಗಿರಲು ಸಾಧ್ಯವಿಲ್ಲ. ಹೆಚ್ಚೆಂದರೇ, 2023ರ ವಿಧಾನಸಭೆ ಚುನಾವಣೆ, 2024ರ ಲೋಕಸಭಾ ಚುನಾವಣೆಗೆ ಪಕ್ಷದ ಪರ ಯಡಿಯೂರಪ್ಪ ಪ್ರಚಾರ ನಡೆಸಬಹುದು.

ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮುದಾಯ ಶೇ. 16 ರಷ್ಟು ಜನಸಂಖ್ಯೆ ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರೇ ಪ್ರಬಲ ಸಮುದಾಯ. ಹೀಗಾಗಿ ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ಅನ್ನು ಹಿಡಿದಿಟ್ಟುಕೊಳ್ಳಲು ಯಡಿಯೂರಪ್ಪ ಶಕ್ತಿಯನ್ನ ಬಿಜೆಪಿ ಹೈಕಮಾಂಡ್ ಬಳಸಿಕೊಳ್ಳಲಿದೆ. ಆದರೆ, ಯಡಿಯೂರಪ್ಪ ರಾಜಕೀಯ ಉತ್ತರಾಧಿಕಾರಿ ಯಾರಾಗ್ತಾರೆ ಎಂಬುದು ಕೂಡ ಮುಖ್ಯ.

ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಆಗುವುದು ಖಚಿತ. ಯಡಿಯೂರಪ್ಪಗೆ ಒಟ್ಟು ಐವರು ಮಕ್ಕಳಿದ್ದಾರೆ. ಅರುಣಾದೇವಿ, ಪದ್ಮಾವತಿ, ಉಮಾದೇವಿ ಸೇರಿದಂತೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಸೇರಿದಂತೆ ಇಬ್ಬರು ಗಂಡು ಮಕ್ಕಳು. ಈಗ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅಪ್ಪನ ರಾಜಕೀಯ ಉತ್ತರಾಧಿಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಆಯ್ಕೆ ಕೂಡ ಯಡಿಯೂರಪ್ಪ ಕುಟುಂಬದ್ದು. ಎಲ್ಲ ಪ್ರಭಾವಿ ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಮಾಡಿದಂತೆ ಯಡಿಯೂರಪ್ಪ ಕೂಡ ತಮ್ಮ ಮಗ ವಿಜಯೇಂದ್ರರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಮಾಡುತ್ತಿದ್ದಾರೆ. ಈ ಬಗ್ಗೆ ಐದಾರು ವರ್ಷಗಳ ಹಿಂದೆಯೇ ಯಡಿಯೂರಪ್ಪ ಕುಟುಂಬದಲ್ಲೇ ಅಪ್ಪನ ರಾಜಕೀಯ ಉತ್ತರಾಧಿಕಾರಿ ಯಾರಾಗಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ಹಿರಿಯ ಮಗ ಬಿ.ವೈ.ರಾಘವೇಂದ್ರ, ರಾಜಕೀಯವಾಗಿ ಆಕ್ರಮಣಕಾರಿ ಧೋರಣೆ ಹೊಂದಿಲ್ಲ. ಮೃದು ಸ್ವಭಾವದ ವ್ಯಕ್ತಿ.

ರಾಘವೇಂದ್ರಗೆ ಹೋಲಿಸಿದರೇ, ವಿಜಯೇಂದ್ರಗೆ ಹೆಚ್ಚಿನ ನಾಯಕತ್ವ ಗುಣಗಳಿವೆ. ವಿಜಯೇಂದ್ರಗೆ ರಾಜಕೀಯ ಚಾಕಚಾಕ್ಯತೆ ಇದೆ. ವಿಜಯೇಂದ್ರಗೆ ರಾಜಕೀಯವಾಗಿ ಆಕ್ರಮಣಕಾರಿ (ಪೊಲಿಟಿಕಲ್ ಆಗ್ರೆಸಿವ್ ನೆಸ್) ಗುಣ, ಸ್ವಭಾವ ಇದೆ. ಎಲ್ಲರನ್ನೂ ಸಂಭಾಳಿಸಿಕೊಂಡು ಜೊತೆಗೆ ಕರೆದುಕೊಂಡು ಹೋಗುವ ಸ್ವಭಾವ, ಗುಣ ವಿಜಯೇಂದ್ರರಲ್ಲಿದೆ. ಯಡಿಯೂರಪ್ಪ ಪ್ರಬಲ ಲಿಂಗಾಯತ ಸಮುದಾಯದ ನಾಯಕರು. ಹೀಗಾಗಿ ಯಡಿಯೂರಪ್ಪ ರಾಜಕೀಯ ಉತ್ತರಾಧಿಕಾರಿ ಆಗುವವರು ಲಿಂಗಾಯತ ಸಮುದಾಯದ ನಾಯಕರಾಗಿ ಸಮುದಾಯವನ್ನು ಕೂಡ ಮುನ್ನೆಡೆಸಿಕೊಂಡು ಹೋಗಬೇಕು. ಸಮುದಾಯದ ನಾಯಕತ್ವ ಹೊರಲು ಕೂಡ ಸಿದ್ದರಾಗಿರಬೇಕು.

ಹೀಗಾಗಿ ವಿಜಯೇಂದ್ರ, ಅಪ್ಪನ ರಾಜಕೀಯ ಉತ್ತರಾಧಿಕಾರಿ ಆಗುವುದೇ ಸೂಕ್ತ ಎಂದು ಬಿಎಸ್‌ವೈ ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬ ವರ್ಗ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿಗೆ ನೀಡಿದ್ದಾರೆ. ಹೀಗಾಗಿಯೇ ಕಳೆದ ಎರಡು ಮೂರು ವರ್ಷಗಳಿಂದ ವಿಜಯೇಂದ್ರ ಮುಂಚೂಣಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಹಿರಿಯ ಮಗ ಬಿ.ವೈ.ರಾಘವೇಂದ್ರ, ಏನಿದ್ದರೂ ಶಿಕಾರಿಪುರ, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ರಾಘವೇಂದ್ರ 2009 ರಿಂದಲೇ ಶಿವಮೊಗ್ಗ ಲೋಕಸಭಾ ಸದಸ್ಯ, ಶಿಕಾರಿಪುರ ಕ್ಷೇತ್ರದ ಶಾಸಕ. ಈಗಾಗಲೇ ಮೂರು ಬಾರಿ ಎಂಪಿ ಆಗಿದ್ದಾರೆ. ಆದರೆ, ವಿಜಯೇಂದ್ರ ಇದುವರೆಗೂ ಯಾವುದೇ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿಲ್ಲ.

‘ತಂದೆ ಯಡಿಯೂರಪ್ಪ ಅವರಂತೆ ವಿಜಯೇಂದ್ರಗೆ ಮಾಸ್ ಲೀಡರ್ ಆಗುವ ಸಾಮರ್ಥ್ಯ ಇದೆ. ವಿಜಯೇಂದ್ರ ಹೋದ ಕಡೆಯೆಲ್ಲಾ ಜನರು ಸೇರುತ್ತಾರೆ ಎಂದು ಕರ್ನಾಟಕದ ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ್ ಹೇಳ್ತಾರೆ. ಬಿ.ವೈ.ರಾಘವೇದ್ರ ಶಿವಮೊಗ್ಗಕ್ಕೆ ಸೀಮಿತರಾದರು. ಆದರೆ, ವಿಜಯೇಂದ್ರ ಬೆಂಗಳೂರುನಲ್ಲಿದ್ದುಕೊಂಡು, ರಾಜಧಾನಿಯನ್ನ ಕೇಂದ್ರ ಸ್ಥಾನ ಮಾಡಿಕೊಂಡು ರಾಜ್ಯ ಸುತ್ತಿದ್ದಾರೆ. ಸಂಪನ್ಮೂಲ ಸಂಗ್ರಹಿಸಿ ಚುನಾವಣೆ ವೇಳೆ ಖರ್ಚು ಮಾಡುವ ಸಾಮರ್ಥ್ಯ ಇದೆ. ವಿಜಯೇಂದ್ರಗೆ ರಾಜಕೀಯ ಚಾಕಚಾಕ್ಯತೆ ಇದೆ. ಲಿಂಗಾಯತ ಯುವ ಸಮುದಾಯ ವಿಜಯೇಂದ್ರನತ್ತ ಆಕರ್ಷಿತರಾಗಿದ್ದಾರೆ. ಲಿಂಗಾಯತರು ಮಾತ್ರವಲ್ಲದೇ, ಬೇರೆ ಸಣ್ಣ ಸಮುದಾಯದವರನ್ನು ವಿಜಯೇಂದ್ರ ಬಿಜೆಪಿಯತ್ತ ಆಕರ್ಷಿಸುತ್ತಿದ್ದಾರೆ. ಹೀಗಾಗಿ ವಿಜಯೇಂದ್ರನೇ ಯಡಿಯೂರಪ್ಪರ ರಾಜಕೀಯ ಉತ್ತರಾಧಿಕಾರಿ’ ಎಂದು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ್ ಹೇಳಿದ್ದಾರೆ.

ತಂದೆಯ ಪರ ಕೋರ್ಟ್‌ನಲ್ಲಿ ಕಾನೂನು ಹೋರಾಟ
ಆದರೆ, 2011ರಿಂದ ಯಡಿಯೂರಪ್ಪ ಡಿನೋಟೀಫಿಕೇಷನ್, ಆಕ್ರಮ ಗಣಿಗಾರಿಕೆ, ಭ್ರಷ್ಟಾಚಾರದ ಆರೋಪದ ಪ್ರಕರಣಗಳಲ್ಲಿ ಸಿಲುಕಿಕೊಂಡರು. ಆಗ ತಂದೆಯ ರಕ್ಷಣೆಗೆ ಧಾವಿಸಿದ್ದು ಇದೇ ವಿಜಯೇಂದ್ರ. 45 ವರ್ಷ ವಯಸ್ಸಿನ ವಿಜಯೇಂದ್ರ ಬಿ.ಎ., ಎಲ್‌ಎಲ್‌.ಬಿ ಪದವಿಧರ . ಶಿವಮೊಗ್ಗ ಜಿಲ್ಲಾ ಕೋರ್ಟ್, ಹೈಕೋರ್ಟ್ ನಲ್ಲಿ ವಕೀಲರಾಗಿ ಕೆಲ ಕಾಲ ಪ್ರಾಕ್ಟೀಸ್ ಮಾಡಿದ್ದಾರೆ. ಯಡಿಯೂರಪ್ಪ ವಿರುದ್ಧದ ಕೇಸ್ ಗಳು ಸುಪ್ರೀಂಕೋರ್ಟ್ ವರೆಗೂ ಹೋಗಿವೆ. ಸುಪ್ರೀಂಕೋರ್ಟ್‌ ಸಿಜೆ ಎಸ್.ಎಚ್‌. ಕಪಾಡಿಯಾ ಯಡಿಯೂರಪ್ಪ ವಿರುದ್ದ ಜೆಎಸ್‌ಡಬ್ಲ್ಯು ಕಂಪನಿಯಿಂದ ಲಂಚ ಪಡೆದ ಆರೋಪದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದ್ದರು.

ಯಡಿಯೂರಪ್ಪ ವಿರುದ್ಧ 38 ಕೋರ್ಟ್ ಕೇಸ್ ಗಳಿದ್ದವು. ಆಗೆಲ್ಲಾ ಅಪ್ಪನ ಕೋರ್ಟ್ ಕೇಸ್ ಗಳನ್ನು ನೋಡಿಕೊಂಡಿದ್ದು ವಿಜಯೇಂದ್ರ. ಅಪ್ಪನ ವಿರುದ್ಧದ ಕೋರ್ಟ್ ಕೇಸ್ ಗಳಿದ್ದಾಗ ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ವಿಜಯೇಂದ್ರ ಹೋಗಿ ವಕೀಲರನ್ನು ನೇಮಿಸಿ, ತಂದೆ ಕೋರ್ಟ್ ಕೇಸ್ ಗಳಿಂದ ಹೊರಬರುವಂತೆ ನೋಡಿಕೊಂಡರು. 2016 ರಲ್ಲೇ ಯಡಿಯೂರಪ್ಪ ತಮ್ಮ ವಿರುದ್ಧದ ಸಿಬಿಐ ಕೇಸ್ ನಿಂದ ಖುಲಾಸೆಯಾಗಿದ್ದಾರೆ.

ವರುಣಾ ಕ್ಷೇತ್ರದ ಸ್ಪರ್ಧೆಗೆ ಯತ್ನಿಸಿ ವಿಫಲ
ವಿಜಯೇಂದ್ರ 2018ರ ವಿಧಾನಸಭೆ ಚುನಾವಣೆಯಲ್ಲೇ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯಲು ಕೂಡ ಸಿದ್ಧವಾಗಿದ್ದರು. ಮೈಸೂರು ಭಾಗದಲ್ಲಿ ತಾವು ಸ್ಪರ್ಧೆ ಮಾಡಿದ್ದರೇ, ಬಿಜೆಪಿ ಹೆಚ್ಚಿನ ಕ್ಷೇತ್ರ ಗೆಲ್ಲಲು ಸಾಧ್ಯವಾಗುತ್ತೆ ಎಂಬ ಲೆಕ್ಕಾಚಾರ ಕೂಡ ಇತ್ತು. ವಿಜಯೇಂದ್ರ ಖುದ್ದಾಗಿ ವರುಣಾ ಕ್ಷೇತ್ರಕ್ಕೆ ಹೋಗಿ ಒಂದೆರೆಡು ದಿನ ರೋಡ್ ಶೋಗಳನ್ನು ಕೂಡ ನಡೆಸಿದ್ದರು. ವರುಣಾ ಕ್ಷೇತ್ರದಿಂದ ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧೆ ಮಾಡುವುದು ಖಚಿತವಾಗಿತ್ತು.

ಇಂಥ ಪ್ರತಿಷ್ಠಿತ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರನ ವಿರುದ್ಧ ಮತೊಬ್ಬ ಮಾಜಿ ಸಿಎಂ ಮಗ ಸ್ಪರ್ಧೆ ಮಾಡಿದ್ದರೇ, ಪ್ರತಿಷ್ಠೆಯ ಕಣವಾಗುತ್ತಿತ್ತು. ಆದರೆ, ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಕೊನೆ ಕ್ಷಣದಲ್ಲಿ ಬಿಜೆಪಿ ಪಕ್ಷವು ಅಪ್ಪ-ಮಗ ಇಬ್ಬರಿಗೂ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಲ್ಲ. ನಮ್ಮದು ಕಾಂಗ್ರೆಸ್ ಪಕ್ಷದ ವಂಶಪಾರಂಪರ್ಯ ಆಳ್ವಿಕೆಯನ್ನು ಪೋಷಿಸುವ ಪಕ್ಷವಲ್ಲ ಎಂಬ ನಿಲುವು ತೆಗೆದುಕೊಂಡು, ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿತ್ತು. ಬಳಿಕ ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಇದಕ್ಕೂ ಮುನ್ನ ವಿಜಯೇಂದ್ರ ಬಿಜೆಪಿ ಪಕ್ಷದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.

ಅಪರೇಷನ್ ಕಮಲದ ರೂವಾರಿ
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದೇ ಇದ್ದಾಗ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತು ಒಂದು ವರ್ಷ ಕಾರ್ಯನಿರ್ವಹಿಸಿತು. ಬಳಿಕ ನಡೆದ ಅಪರೇಷನ್ ಕಮಲದ ಕಾರ್ಯಾಚರಣೆಯ ಮುಂದಾಳತ್ವ ವಹಿಸಿಕೊಂಡು ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರನ್ನು ರಾಜೀನಾಮೆ ಕೊಡಿಸಿ, ಬಿಜೆಪಿ ಪಕ್ಷಕ್ಕೆ ಕರೆ ತಂದಿದ್ದರಲ್ಲಿ ಬಿ.ವೈ.ವಿಜಯೇಂದ್ರ ಪಾತ್ರ ಕೂಡ ಇದೆ. ತೆರೆಯ ಹಿಂದೆ ನಿಂತೇ ಅಪ್ಪನ ಸರ್ಕಾರ ರಾಜ್ಯದಲ್ಲಿ ಪ್ರತಿಷ್ಠಾಪನೆ ಆಗುವಂತೆ ವಿಜಯೇಂದ್ರ ನೋಡಿಕೊಂಡಿದ್ದಾರೆ. 2019ರ ಜುಲೈ 26 ರಂದು ಯಡಿಯೂರಪ್ಪ ಮತ್ತೆ ರಾಜ್ಯದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಜಯೇಂದ್ರ ಪಾತ್ರ ಮತ್ತಷ್ಟು ಹೆಚ್ಚಾಗಿದೆ.

ವಿಜಯೇಂದ್ರ ಸೂಪರ್ ಸಿಎಂ ಎಂಬ ಹಣೆಪಟ್ಟಿ
ವಿಜಯೇಂದ್ರ, ತೆರೆಯ ಹಿಂದೆಯೇ ಸರ್ಕಾರದ ಪ್ರಮುಖ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಎಂಬ ಟೀಕೆ, ಆರೋಪಗಳಿವೆ. ವಿಜಯೇಂದ್ರ ಈಗಾಗಲೇ ಯಡಿಯೂರಪ್ಪ ಸರ್ಕಾರದಲ್ಲಿ ಸೂಪರ್ ಸಿಎಂ ಎಂಬ ಟೀಕೆಯನ್ನು ಎದುರಿಸುತ್ತಿದ್ದಾರೆ. ಜಲಸಂಪನ್ಮೂಲ, ಇಂಧನ ಇಲಾಖೆ, ಬಿ.ಡಿ.ಎ, ಬೆಂಗಳೂರು ಅಭಿವೃದ್ದಿ ಸೇರಿದಂತೆ ಪ್ರಮುಖ ಇಲಾಖೆಗಳ ಟೆಂಡರ್ ನೀಡುವಲ್ಲಿ ವಿಜಯೇಂದ್ರ ತೀರ್ಮಾನವೇ ಅಂತಿಮ. ಎಲ್ಲವನ್ನೂ ವಿಜಯೇಂದ್ರ ತೀರ್ಮಾನ ಮಾಡ್ತಾರೆ ಎಂಬ ಆರೋಪ, ಟೀಕೆಗಳನ್ನು ಸ್ವಪಕ್ಷಿಯರೇ ಮಾಡಿದ್ದಾರೆ. ವಿಜಯೇಂದ್ರ ವಿಧಾನಸಭೆಯ ಸದಸ್ಯರೂ ಅಲ್ಲ, ಸಚಿವರು ಅಲ್ಲ. ಆದರೆ, ರಾಜ್ಯ ಸರ್ಕಾರದಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಿದ್ದಾರೆ. ಸಂವಿಧಾನೇತರ ಶಕ್ತಿಯಾಗಿ ಸಿಎಂಗಿರುವ ಎಲ್ಲ ಅಧಿಕಾರ ಚಲಾಯಿಸುತ್ತಿದ್ದಾರೆ ಎಂಬ ಆರೋಪ, ಟೀಕೆಗಳನ್ನ ಬಿಜೆಪಿ ಶಾಸಕರೇ ಮಾಡಿದ್ದಾರೆ.

ಕಳೆದ 2 ವರ್ಷಗಳಲ್ಲಿ ಎದುರಾದ ಉಪಚುನಾವಣೆಗಳ ಪೈಕಿ ಒಕ್ಕಲಿಗ ಪ್ರಾಬಲ್ಯದ ಮಂಡ್ಯದ ಕೆ.ಆರ್.ಪೇಟೆ, ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದರ ಕ್ರೆಡಿಟ್ ಅನ್ನು ವಿಜಯೇಂದ್ರ ಪಡೆದಿದ್ದಾರೆ. ಈ ಮೂಲಕ ತಾವೇ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಎಂಬುದನ್ನು ಮತ್ತೆ ಮತ್ತೆ ನಿರೂಪಿಸುವ ಕೆಲಸವನ್ನು ವಿಜಯೇಂದ್ರ ಮಾಡಿದ್ದಾರೆ. ಆದರೆ, ವಿಜಯೇಂದ್ರ ಉಸ್ತುವಾರಿ ಹೊತ್ತಿದ್ದ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ.

ಇದಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ವಿರೋಧಿ ಅಲೆ ಇದ್ದಿದ್ದು ಕಾರಣ ಎನ್ನುವುದು ವಿಜಯೇಂದ್ರ ನೀಡಿದ್ದ ಸ್ಪಷ್ಟನೆ. ತಾವು ಕ್ಷೇತ್ರಕ್ಕೆ ಹೋದಾಗಲೇ ಅಭ್ಯರ್ಥಿ ಸೋಲುತ್ತಾರೆ ಎಂದು ಗೊತ್ತಿತ್ತು. ಆದರೆ, ತಮ್ಮ ತಂದೆ ನೀನು ಅಲ್ಲೇ ಇದ್ದು, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂದು ಸೂಚನೆ ನೀಡಿದ್ದರಿಂದ ಮಸ್ಕಿಯಲ್ಲೇ ಕೆಲಸ ಮಾಡಿದೆ ಎಂದು ವಿಜಯೇಂದ್ರ ದೆಹಲಿಯಲ್ಲಿ ಪತ್ರಕರ್ತರ ಜೊತೆಗೆ ಇತ್ತೀಚೆಗೆ ಹೇಳಿದ್ದರು.

ವಿಜಯೇಂದ್ರ ಕಣ್ಣು ಹಳೇ ಮೈಸೂರು ಮ್ಯಾಲೆ
ವಿಜಯೇಂದ್ರಗೆ ಹಳೆ ಮೈಸೂರು ಪ್ರಾಂತ್ಯದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಹೊಣೆ ನೀಡುವುದಾಗಿಯೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಯಡಿಯೂರಪ್ಪ ಅವರೇ ಹೇಳಿದ್ದರು. ವಿಜಯೇಂದ್ರ ಕಣ್ಣು ಕೂಡ ಹಳೆ ಮೈಸೂರು ಪ್ರಾಂತ್ಯದ ಮೇಲೆಯೇ ಇದೆ. ಹಳೆ ಮೈಸೂರು ಪ್ರಾಂತ್ಯ ಬಿಜೆಪಿಗೆ ದೀರ್ಘಕಾಲದವರೆಗೂ ಬರಡುಭೂಮಿಯೇ ಆಗಿರಲ್ಲ. ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಒಳ್ಳೆಯ ಅವಕಾಶ ಇದೆ ಎಂದು ವಿಜಯೇಂದ್ರ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೇಳಿದ್ದರು. ಕೆ.ಆರ್.ಪೇಟೆ, ಶಿರಾದಲ್ಲಿ ನಾವು ಗೆದ್ದಿದೇವೆ. ಜನರ ಬಳಿಗೆ ನಾವು ಹೋಗಬೇಕು ಅಷ್ಟೇ. ಅಭಿವೃದ್ದಿಯ ಅಜೆಂಡಾದೊಂದಿಗೆ ಜನರ ಬಳಿ ಹೋದರೇ, ಖಂಡಿತ ಬಿಜೆಪಿ ಬೆಂಬಲಿಸುತ್ತಾರೆ ಎಂದು ವಿಜಯೇಂದ್ರ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಳೆ ಮೈಸೂರು ಪ್ರಾಂತ್ಯದಲ್ಲಿ 15-20 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದರೇ, ಬಿಜೆಪಿಗೆ ಬಹುಮತಕ್ಕೆ ಕೊರತೆಯಾಗಲ್ಲ ಎಂಬುದು ವಿಜಯೇಂದ್ರ, ಯಡಿಯೂರಪ್ಪ ಲೆಕ್ಕಾಚಾರ.

ವಿಜಯೇಂದ್ರಗೆ ಯಾವ ಹುದ್ದೆ ಎನ್ನುವುದೇ ಸಸ್ಪೆನ್ಸ್
ಜುಲೈ 16, 17ರಂದು ಯಡಿಯೂರಪ್ಪ ದೆಹಲಿಗೆ ಹೋಗಿ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ರಾಜನಾಥ್ ಸಿಂಗ್ ರನ್ನು ಭೇಟಿಯಾದಾಗ ವಿಜಯೇಂದ್ರ ಕೂಡ ದೆಹಲಿಗೆ ಹೋಗಿದ್ದರು. ಮೋದಿ ಹೊರತುಪಡಿಸಿ ಉಳಿದ ನಾಯಕರನ್ನು ಯಡಿಯೂರಪ್ಪ ಭೇಟಿಯಾದಾಗ ವಿಜಯೇಂದ್ರ ಕೂಡ ಇದ್ದರು. ಬಿಜೆಪಿ ವರಿಷ್ಠರಿಗೆ ತಮ್ಮ ಮಗನನ್ನು ಯಡಿಯೂರಪ್ಪ ಪರಿಚಯಿಸಿ ಮಗನಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಕೇಳಿದ್ದಾರೆ. ಈ ವೇಳೆಯೇ ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆಯೂ ಯಡಿಯೂರಪ್ಪ ಪ್ರಸ್ತಾಪ ಮಾಡಿ ಚರ್ಚೆ ನಡೆಸಿದ್ದಾರೆ. ಮಗ ವಿಜಯೇಂದ್ರನ ರಾಜಕೀಯ ಭವಿಷ್ಯ ಉಜ್ವಲಗೊಳಿಸುವ ಬಗ್ಗೆ ಯಡಿಯೂರಪ್ಪ ಒತ್ತು ನೀಡಿದ್ದಾರೆ.

ಈಗ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದ ನಾಯಕರಿಗೆ ಸಿಎಂ ಹುದ್ದೆ ನೀಡಿದರೇ, ವಿಜಯೇಂದ್ರಗೆ ಡಿಸಿಎಂ ಹುದ್ದೆ ನೀಡಬಹುದು ಎಂಬ ಲೆಕ್ಕಾಚಾರಗಳಿವೆ. ಒಂದು ವೇಳೆ ಲಿಂಗಾಯತ ಸಮುದಾಯದವರಿಗೆ ಸಿಎಂ ಹುದ್ದೆ ನೀಡಿದರೇ, ವಿಜಯೇಂದ್ರಗೆ ಡಿಸಿಎಂ ಹುದ್ದೆ ಸಿಗಲ್ಲ. ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಷಿ, ಬಿ.ಎಲ್,ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ, ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಪೈಕಿ ಯಾರಾದರೊಬ್ಬರು ಸಿಎಂ ಹುದ್ದೆಗೇರಿದರೇ, ವಿಜಯೇಂದ್ರಗೆ ಡಿಸಿಎಂ ಹುದ್ದೆ ಸಿಗುವ ಲೆಕ್ಕಾಚಾರ ವಿಜಯೇಂದ್ರ ಬೆಂಬಲಿಗರಲ್ಲಿದೆ.

ಹೇಗಿದ್ದರೂ, ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕು. ಆ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸಿ ವಿಧಾನಸಭೆಗೆ ಗೆದ್ದು ಬರುವ ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಈ ಅವಧಿಗೆ ವಿಜಯೇಂದ್ರಗೆ ಡಿಸಿಎಂ ಹುದ್ದೆ ನೀಡದೇ ದೂರವೂ ಇಡಬಹುದು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ, ವಂಶಪಾರಂಪರ್ಯ ರಾಜಕಾರಣ ವಿರೋಧಿ ಸಿದ್ದಾಂತ ಇದೆ. ಹೀಗಾಗಿ ಈಗಾಗಲೇ ಅಣ್ಣ ಬಿ.ವೈ.ರಾಘವೇಂದ್ರಗೆ ಲೋಕಸಭಾ ಸದಸ್ಯರಾಗಿರುವುದರಿಂದ ತಮ್ಮ ವಿಜಯೇಂದ್ರಗೆ ಅಸೆಂಬ್ಲಿ ಟಿಕೆಟ್ ನೀಡಲು ಕೂಡ ಬಿಜೆಪಿ ತನ್ನ ನಿಯಮಗಳಿಂದ ವಿನಾಯಿತಿ ನೀಡಬೇಕಾಗುತ್ತೆ. ಈ ನಿಯಮದ ಅರಿವು ಕೂಡ ವಿಜಯೇಂದ್ರಗೆ ಇದೆ.

ಕರ್ನಾಟಕದಲ್ಲಿ ಸಿಎಂ ಆಗಿ ಆಳ್ವಿಕೆ ನಡೆಸಿದವರು ತಮ್ಮ ಮಕ್ಕಳನ್ನೇ ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬೆಳೆಸಿದ ದೊಡ್ಡ ಇತಿಹಾಸವೇ ಇದೆ. ಕೆಲವರು ತಂದೆಯ ರಾಜಕೀಯ ಉತ್ತರಾಧಿಕಾರಿಯಾಗಲು ಯತ್ನಿಸಿ ವಿಫಲವೂ ಆಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ತಂದೆಯ ರಾಜಕೀಯ ಉತ್ತರಾಧಿಕಾರಿಯಾಗಿದ್ದಾರೆ.

ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅಕಾಲಿಕ ಸಾವನ್ನಪ್ಪಿದ ಬಳಿಕ ಮತ್ತೊಬ್ಬ ಪುತ್ರ ಯತೀಂದ್ರರನ್ನು ರಾಜಕೀಯಕ್ಕೆ ಕರೆ ತನ್ನಿ ಎಂಬ ಸಲಹೆಯನ್ನು ದೇವೇಗೌಡರೇ ಸಿದ್ದರಾಮಯ್ಯಗೆ ನೀಡಿದ್ದರು. ಯತೀಂದ್ರ ಈಗ ವರುಣಾ ಕ್ಷೇತ್ರದ ಶಾಸಕ. ಬಂಗಾರಪ್ಪ ಪುತ್ರ ಮಧು, ಕುಮಾರ್ ಇಬ್ಬರೂ ರಾಜಕೀಯವಾಗಿ ಎದುರಾಳಿಗಳಾಗಿ ಸಕ್ರಿಯವಾಗಿದ್ದಾರೆ. ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ ಮಗಳು ಮಮತಾ ನಿಚ್ಚಾನಿ, ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ ತಂದೆಯ ರಾಜಕೀಯ ಉತ್ತರಾಧಿಕಾರಿ ಆಗಲು ಯತ್ನಿಸಿ ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ