Breaking News
Home / ಜಿಲ್ಲೆ / ಬೆಂಗಳೂರು / ಸದ್ಯಕ್ಕೆ ಶಾಲೆ ಆರಂಭ ಇಲ್ಲ : ಸಚಿವ ಸುರೇಶ್‍ಕುಮಾರ್

ಸದ್ಯಕ್ಕೆ ಶಾಲೆ ಆರಂಭ ಇಲ್ಲ : ಸಚಿವ ಸುರೇಶ್‍ಕುಮಾರ್

Spread the love

ಬೆಂಗಳೂರು, ಜೂ.28- ಕೋವಿಡ್-19 ನಿಂದಾಗಿ ತೂಗುಯ್ಯಾಲೆಯಲ್ಲಿದ್ದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎನಿಸಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜುಲೈ 19 ಮತ್ತು 22ರಂದು ಎರಡು ದಿನಗಳು ಮಾತ್ರ ನಡೆಯಲಿದೆ. ರಾಜ್ಯದ ಸುಮಾರು 8,76,581 ವಿದ್ಯಾರ್ಥಿಗಳು 73,666 ಕೇಂದ್ರಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ.

ಜುಲೈ 19 (ಸೋಮವಾರ) ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜುಲೈ 19 (ಸೋಮವಾರ)ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಮೊದಲ ಪತ್ರಿಕೆ (ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ) ಹಾಗೂ ಜುಲೈ 22 (ಗುರುವಾರ)ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ (ಭಾಷಾ ವಿಷಯಗಳು) ಪರೀಕ್ಷೆ ನಡೆಯಲಿದೆ.

ವಿಕಾಸಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹಾಗೂ ಅಧಿಕಾರಿಗಳು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಖಜಾನೆ ಅಧಿಕಾರಿಗಳು ಸೇರಿದಂತೆ ಮತ್ತಿತರರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎರಡು ದಿನ ಮಾತ್ರ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಾಗುವುದು. ಪ್ರತಿಯೊಬ್ಬರೂ ಒಎಂಆರ್ ಶೀಟರ್‍ನಲ್ಲಿ ಉತ್ತರವನ್ನು ಭರ್ತಿ ಮಾಡಬೇಕೆಂದು ಅವರು ಮನವಿ ಮಾಡಿದರು. ಕಳೆದ ಬಾರಿ ಆರು ದಿನಗಳ ಕಾಲ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಇದು ವಿಶೇಷ ಪ್ರಕರಣವಾಗಿರುವುದರಿಂದ ಎರಡು ದಿನ ಮಾತ್ರ ನಡೆಸಲು ಇಲಾಖೆ ತೀರ್ಮಾನಿಸಿದೆ. ಮಕ್ಕಳ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಹಾಗೂ ಪೋಷಕರ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಮಾತ್ರ ಹಾಗೂ ಪ್ರತಿ ಡೆಸ್ಕ್‍ಗೆ ಓರ್ವ ವಿದ್ಯಾರ್ಥಿಯೇ ಪರೀಕ್ಷೆ ಬರೆಯಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವ ಮುನ್ನ ಸ್ಯಾನಿಟೈಜ್, ಮಾಸ್ಕ್ ಧರಿಸಬೇಕು, ಪರೀಕ್ಷೆ ಬರೆದು ಹೊರಹೋಗುವಾಗ ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಬೇಕು ಎಂದು ಸೂಚಿಸಿದರು. ಪರೀಕ್ಷಾ ಸಂದರ್ಭದಲ್ಲಿ ಕೇಂದ್ರದ ಸುತ್ತಮುತ್ತ 144ನೆ ಸೆಕ್ಷನ್ ವಿಧಿಸಲಾಗಿರುತ್ತದೆ. ವಿದ್ಯಾರ್ಥಿಗಳ ಪೋಷಕರು, ಸಂಬಂಧಿಕರು ಬಿಟ್ಟರೆ ಬೇರೆ ಯಾರೂ ಒಳ ಪ್ರವೇಶಿಸಲು ಅವಕಾಶವಿರುವುದಿಲ್ಲ.

ಕೋವಿಡ್ ಸೋಂಕಿನ ಚಿಹ್ನೆಗಳು ಕಂಡುಬಂದರೆ ಅಂತಹ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪರೀಕ್ಷೆ ಬರೆಯಬಹುದು. ಕೋವಿಡ್-19 ಪಾಸಿಟಿವ್ ಇರುವ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ತಜ್ಞರ ಸಲಹೆಯಂತೆ ಮಾಸ್ಕ್ ಕೂಡ ನೀಡಲಾಗುವುದು. ಅಗತ್ಯವಿರುವವರು ಎನ್-95 ಇಲ್ಲವರೆ ಕ್ಲಾತ್ ಮಾಸ್ಕ್‍ಗಳನ್ನು ಬಳಸಬಹುದು. ಸ್ಕೌಟ್ ಹಾಗೂ ಗೈಡ್ಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಮಾಸ್ಕ್ ನೀಡಲು ಮುಂದೆ ಬಂದಿವೆ ಎಂದು ಹೇಳಿದರು.

ಪರೀಕ್ಷಾ ಕೊಠಡಿಗೆ ಬರುವ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನಿಷ್ಠ ಪಕ್ಷ ಒಂದು ಡೋಸ್ ಲಸಿಕೆ ಪಡೆಯಲೇಬೇಕು. ಈವರೆಗೂ ಯಾರು ಪಡೆದಿಲ್ಲವೋ ಅವರು ಒಂದು ವಾರದೊಳಗೆ ಪಡೆಯಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೊರೊನಾ ಕಾರಣದಿಂದ ಬೇರೆ ಬೇರೆ ಜಿಲ್ಲೆಗಳು ಇಲ್ಲವೆ ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಿರುವ ವಿದ್ಯಾರ್ಥಿಗಳು ಕೂಡ ತಾವು ಬಯಸಿದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಬಹುದು. ಈಗಾಗಲೇ ಈ ರೀತಿ 10 ಸಾವಿರ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ನಾಳೆಯಿಂದ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಪ್ರವೇಶ ಪತ್ರವನ್ನು ಕಳುಹಿಸಿಕೊಡಲಾಗುವುದು. ಆಯಾ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದರು. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯಬೇಕು. ಯಾವುದೇ ಪೋಷಕರು ಅನಗತ್ಯವಾಗಿ ಒತ್ತಡ ಹಾಕದಂತೆ ಮನವಿ ಮಾಡಿದರು.

ಎಚ್ಚರಿಕೆ: ಈ ಬಾರಿ ಅನಗತ್ಯವಾಗಿ ಯಾರಾದರೂ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಪ್ರತಿವರ್ಷ ಕೆಲವರು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ. ಇದಕ್ಕೆ ಈ ಬಾರಿ ಅವಕಾಶ ಕೊಡುವುದಿಲ್ಲ ಎಂದು ಸುರೇಶ್‍ಕುಮಾರ್ ತಿಳಿಸಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ