Breaking News
Home / ರಾಜಕೀಯ / ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ; ಧಾರವಾಡ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ

ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ; ಧಾರವಾಡ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ

Spread the love

ಧಾರವಾಡ: ನೀರು ಭೂಮಿಯ ಮೇಲಿನ ಅತ್ಯಮೂಲ್ಯ ಸಂಪನ್ಮೂಲ. ಗಿಡಗಳಿಂದ ಹಿಡಿದು ಕಣ್ಣಿಗೆ ಕಾಣದ ಜೀವಿಗಳವರೆಗೆ ಈ ನೀರೆ ಆಸರೆ. ಅದರಲ್ಲೂ ರೈತರ ಪಾಲಿಗೆ ನೀರು ಎನ್ನುವುದು ಬಹು ಮುಖ್ಯವಾದ ಸಂಪನ್ಮೂಲ. ನೀರಿಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥದಿಂದಾಗಿ ಈ ಸಂಪನ್ಮೂಲದ ಕೊರತೆಯುಂಟಾಗುತ್ತಿದೆ. ನೀರನ್ನು ಹಿಡಿದಿಡುವ ಪ್ರಯತ್ನ ನಡೆಯದೇ ಇರುವುದು ಇದಕ್ಕೆ ಒಂದು ಕಾರಣವಾಗಿದ್ದರೆ, ನೀರನ್ನು ಅವಶ್ಯಕತೆಗಿಂತ ಹೆಚ್ಚು ಬಳಸುತ್ತಿರುವುದು ಮತ್ತೊಂದು ಕಾರಣ. ಈ ನಿಟ್ಟಿನಲ್ಲಿ ನೀರನ್ನು ಮಿತವಾಗಿ ಬಳಸಿ ಎನ್ನುವ ಜಾಗೃತಿಯೊಂದಿಗೆ, ಕೃಷಿಗಾಗಿ ನೀರು ಹಿಡಿದಿಡುವ ಬಗ್ಗೆಯೂ ಜಾಗೃತಿ ಆರಂಭಿಸಲಾಗಿದೆ. ಆರಂಭದಲ್ಲಿ ಈ ಕೆಲಸಕ್ಕೆ ಜನರು ಉತ್ಸಾಹ ತೋರಿಸಲಿಲ್ಲ. ಆದರೆ ಇದೀಗ ಜನರಲ್ಲಿ ಈ ಜಾಗೃತಿ ಮೂಡಿದ್ದು, ತಮ್ಮ ತಮ್ಮ ಹೊಲಗಳಲ್ಲಿ ಕೃಷಿ ಹೊಂಡಗಳ ಮೂಲಕ ನೀರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಧಾರವಾಡ ಜಿಲ್ಲೆಯ ಕೃಷಿಕರು ಕೂಡ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ನಿರ್ಮಿಸಿರುವ ಎಲ್ಲಾ ಕೃಷಿ ಹೊಂಡಗಳಲ್ಲಿ ಇದೀಗ ನೀರು ನಿಂತು, ರೈತರ ಮೊಗದಲ್ಲಿ ಮಂದಹಾಸ ಕಾಣುತ್ತಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಸಾಥ್
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಹೊಲಗಳಲ್ಲಿ ಹಲವಾರು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಕಳೆದೆರಡು ವರ್ಷಗಳಲ್ಲಿ ಕೃಷಿ ಹೊಂಡಕ್ಕೆ ಹೆಚ್ಚು ಒತ್ತು ಕೊಟ್ಟು, ಅನೇಕ ರೈತರ ಭೂಮಿಯಲ್ಲಿ ಹೊಂಡಗಳ ನಿರ್ಮಾಣ ಮಾಡಲಾಯಿತು. ಹೀಗೆ ನಿರ್ಮಾಣವಾಗಿರುವ ಕೃಷಿ ಹೊಂಡಗಳು ಒಂದು ಕಡೆಗೆ ಕೃಷಿಗೆ ಪೂರಕ ವಾತಾವರಣ ಸೃಷ್ಟಿಸಿದರೆ ಮತ್ತೊಂದು ಕಡೆ ಇವು ಅಂತರ್ಜಲ ವೃದ್ಧಿಗೂ ಕಾರಣವಾಗಿವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲಾದ್ಯಂತ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ, ದನ-ಕರುಗಳಿಗೆ ನೀರು ಕುಡಿಯಲು ಈ ಹೊಂಡಗಳು ಆಶ್ರಯ ತಾಣಗಳಾಗಿವೆ.

ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ
ಜಿಲ್ಲೆಯಲ್ಲಿ ಒಂದೂವರೆ ವರ್ಷದಲ್ಲಿ ನರೇಗಾ ಯೋಜನೆಯಡಿ ಸುಮಾರು 150 ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಿಕೊಂಡಿದ್ದಾರೆ. ಆ ಮೂಲಕ ಮಳೆ ನೀರು ನಿಲ್ಲುವಂತೆ ಮಾಡಿಕೊಂಡಿದ್ದಾರೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಜಿಲ್ಲೆಯ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿದ್ದು, ಇದರಿಂದ ಯೋಜನೆಯ ಉದ್ದೇಶವೂ ಸಾಫಲ್ಯ ಕಾಣುತ್ತಿದೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣದಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಹೊಲದಲ್ಲಿ ಮಳೆ ನೀರು ಹರಿದು ಹೋಗುವುದನ್ನು ಇದರಿಂದ ತಡೆಯಬಹುದಾಗಿದೆ. ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಡೆಯಲು ಹಾಗೂ ಹೊಲದಲ್ಲಿನ ಅಂತರ್ಜಲ ಹೆಚ್ಚಳಕ್ಕಾಗಿ ಕೃಷಿ ಹೊಂಡಗಳನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ನಿರ್ಮಿಸಿಕೊಡಲಾಗುತ್ತಿದೆ. ಇದರಿಂದ ಸಿಗುವ ನೀರನ್ನು ರೈತರು ಹೆಚ್ಚಾಗಿ ತರಕಾರಿಗೆ ಬಳಸಿಕೊಳ್ಳಬಹುದಾಗಿದೆ. ಅಗತ್ಯ ಎನಿಸಿದಾಗ ಈ ನೀರನ್ನು ಇನ್ನಿತರ ಕೃಷಿಗೂ ಬಳಸಬಹುದಾಗಿದೆ.

ಧಾರವಾಡ ಜಿಲ್ಲೆಯಲ್ಲಿ ನಿರ್ಮಾಣವಾದ ಕೃಷಿ ಹೊಂಡಗಳ ವಿವರ

ಧಾರವಾಡ ತಾಲೂಕು- 47
ಕಲಘಟಗಿ ತಾಲೂಕು- 59
ನವಲಗುಂದ ತಾಲೂಕು- 16
ಕುಂದಗೋಳ ತಾಲೂಕು- 17
ಹುಬ್ಬಳ್ಳಿ ತಾಲೂಕು- 18

ಯಾರಿಗೆ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ?
ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಬೇಕಾದರೆ ಮೊದಲು ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು. ಈ ಕಾರ್ಡ್ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ರೈತ ಮಹಿಳೆಯರಿಗೆ ಈ ಕೃಷಿ ಹೊಂಡಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ರೈತರು ತೋರಿಸಿದ ಜಮೀನಿನಲ್ಲಿ 7*7, 9*9, 15*15 ಮೀಟರ್ ಹಾಗೂ 3 ಮೀಟರ್ ಆಳದಲ್ಲಿ ಕೃಷಿ ಹೊಂಡ ನಿರ್ಮಿಸಲಾಗುತ್ತದೆ. ಈ ಕೃಷಿ ಹೊಂಡಗಳನ್ನು ಒಂದು ಪೈಸೆ ಖರ್ಚಿಲ್ಲದೇ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿಕೊಳ್ಳುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ.

ಈ ಯೋಜನೆ ಮಳೆಗಾಲದಲ್ಲಿ ಮಳೆ ನೀರಿಗೆ ಭರ್ತಿಯಾಗಿ ಕೃಷಿ ಕೆಲಸಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ ಕೆಲವು ಕಡೆಗಳಲ್ಲಿ ಬೇಸಿಗೆಯಲ್ಲೂ ರೈತರು ಕೃಷಿ ಹೊಂಡಗಳಿಂದ ಉಪಯೋಗ ಪಡೆಯುತ್ತಾರೆ. ರೈತರಿಗೆ ಕೂಲಿಯ ಜತೆಗೆ ಹೊಲದಲ್ಲಿ ಹೊಂಡ ನಿರ್ಮಿಸಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ. ಹೆಚ್ಚಿನ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಹೇಳಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ