Breaking News
Home / ರಾಜಕೀಯ / ಲಾಕ್​ಡೌನ್ ಮುಗಿದ ನಂತರ ಆರಂಭವಾಗುವ ಸಾರಿಗೆ ಸೇವೆಯಲ್ಲಿ ಲಸಿಕೆ ಪಡೆದ ಸಿಬ್ಬಂದಿಗಳಿಗೆ ಆದ್ಯತೆ: ಡಿಸಿಎಂ ಲಕ್ಷ್ಮಣ ಸವದಿ

ಲಾಕ್​ಡೌನ್ ಮುಗಿದ ನಂತರ ಆರಂಭವಾಗುವ ಸಾರಿಗೆ ಸೇವೆಯಲ್ಲಿ ಲಸಿಕೆ ಪಡೆದ ಸಿಬ್ಬಂದಿಗಳಿಗೆ ಆದ್ಯತೆ: ಡಿಸಿಎಂ ಲಕ್ಷ್ಮಣ ಸವದಿ

Spread the love

ಬೆಂಗಳೂರು: ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್​ಡೌನ್ ಮುಗಿದ ನಂತರ ಪ್ರಾರಂಭವಾಗುವ ಸಾರಿಗೆ ಸೇವೆಗೆ ಎರಡನೇ ಸುತ್ತಿನ ಕೊವಿಡ್ ಲಸಿಕೆ ಪಡೆದಂತಹ ಚಾಲಕರು ಮತ್ತು ನಿರ್ವಾಹಕರನ್ನೇ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸ್ಪಷ್ಟಪಡಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಆಶ್ರಯದಲ್ಲಿ ಇಂದು (ಜೂನ್ 1) ಸಾರಿಗೆ ಸಿಬ್ಬಂದಿಗಳಿಗೆ ಎರಡನೆಯ ಹಂತದಲ್ಲಿ ಕೊವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಆಂದೋಲನಕ್ಕೆ ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ಚಾಲನೆ ನೀಡಿದ ಬಳಿಕ ಮಾತನಾಡಿದ್ದು, ನಾಲ್ಕೂ ಸಾರಿಗೆ ನಿಗಮಗಳಲ್ಲಿ ಇದೇ ರೀತಿಯ ಉಚಿತ ಲಸಿಕೆ ನೀಡುವ ಅಭಿಯಾನವನ್ನು ಏರ್ಪಡಿಸಲಾಗುತ್ತಿದೆ. ಇವುಗಳ ಪ್ರಯೋಜನವನ್ನು ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದರು.

ಬಿಎಂಟಿಸಿಯಲ್ಲಿ ಒಟ್ಟು ಸುಮಾರು 31 ಸಾವಿರದಷ್ಟು ಸಿಬ್ಬಂದಿಗಳಿದ್ದು, ಇವರಲ್ಲಿ ಈಗಾಗಲೇ ಸುಮಾರು 19 ಸಾವಿರದಷ್ಟು ಮಂದಿಗೆ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಉಳಿದವರಿಗೂ ಆದ್ಯತೆ ಮೇರೆಗೆ, ಲಸಿಕೆ ನೀಡಲು ಕ್ರಮ ವಹಿಸಲಾಗಿದೆ. ಲಾಕ್​ಡೌನ್ ಮುಗಿದ ನಂತರ ಕರ್ತವ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ ಎರಡು ಸುತ್ತಿನ ಲಸಿಕೆಯನ್ನು ನೀಡಿದ್ದಲ್ಲಿ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದಲೂ ಸುರಕ್ಷಿತವಾಗುತ್ತದೆ ಎಂದು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬಳಿಕ ಸಾರಿಗೆ ಬಸ್​ಗಳ ಸಂಚಾರದ ವಿಷಯವಾಗಿ ಮಾತನಾಡಿದ ಅವರು ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಲಾಕ್​ಡೌನ್ ಅವಧಿಯನ್ನು ಎಲ್ಲಿಯವರೆಗೆ ಜಾರಿಯಲ್ಲಿರಬೇಕು ಎಂಬುದನ್ನು ಶೀಘ್ರವೇ ನಿರ್ಧರಿಸಲಾಗುವುದು. ಲಾಕ್​ಡೌನ್ ಅವಧಿಯ ಬಗ್ಗೆ ಸರಕಾರ ಅಂತಿಮವಾಗಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬ ಆಧಾರದ ಮೇಲೆ ಸಾರಿಗೆ ಸಂಸ್ಥೆಗಳ ಸೇವೆಯನ್ನು ಪುನ: ಪ್ರಾರಂಭಿಸಲಾಗುವುದು. ಆದ್ದರಿಂದ ಸಾರಿಗೆ ಬಸ್ಸುಗಳ ಸಂಚಾರವನ್ನು ಯಾವಾಗ ಪುನರ್ ಪ್ರಾರಂಭಿಸಲಾಗುತ್ತದೆ ಎಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ನಂತರ ಲಾಕ್​ಡೌನ್​ ವಿಚಾರವಾಗಿ ಮಾತನಾಡಿದ ಲಕ್ಷ್ಮಣ ಸವದಿ ರಾಜ್ಯದಲ್ಲಿ ಲಾಕ್​ಡೌನ್ ಜಾರಿಗೊಳಿಸಿರುವುದರಿಂದ ಕೊವಿಡ್ ನಿಯಂತ್ರಣಕ್ಕೆ ಬರುತ್ತಿರುವುದು ತುಸು ಸಮಾಧಾನಕರ ಸಂಗತಿ. ಹಾಗಂತ ಯಾರೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ ತೋರಬಾರದು ಎಂದು ಸಲಹೆ ನೀಡಿದರು.

ಬೆಂಗಳೂರಿನ ಶಾಂತಿನಗರದಲ್ಲಿ ಬಿಎಂಟಿಸಿಯ ಸಿಬ್ಬಂದಿಗಳಿಗೆ ಉಚಿತವಾಗಿ ಕೊವಿಡ್ ಲಸಿಕೆ ನೀಡುವ ಆಂದೋಲನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸಿ. ಶಿಖಾ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ