Breaking News
Home / ರಾಜಕೀಯ / ಬಿಜೆಪಿಯೇ ಬೆಡ್‌ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್: ದಿನೇಶ್ ಗುಂಡೂರಾವ್

ಬಿಜೆಪಿಯೇ ಬೆಡ್‌ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್: ದಿನೇಶ್ ಗುಂಡೂರಾವ್

Spread the love

ಬೆಂಗಳೂರು, ಮೇ 08: ಬೆಡ್ ಬ್ಲಾಕಿಂಗ್ ಹಗರಣದ ಕಿಂಗ್‌ಪಿನ್ ಹಾಗೂ ಸೂತ್ರದಾರ ಎರಡೂ ಬಿಜೆಪಿಯೇ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ತಾವೇ ದಂಧೆಯಲ್ಲಿ ಭಾಗಿಯಾಗಿ ಜನರ ಮುಂದೆ ನಾಟಕ ಮಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಶಾಸಕ ಸಹಚರರು ಹಾಗೂ ಬಿಜೆಪಿಯ ಕಾರ್ಯಕರ್ತರು ಪುಡಿರೌಡಿಗಳಂತೆ ವರ್ತನೆ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಸಂಸದ ಹಾಗೂ ಶಾಸಕರು ವಾರ್ ರೂಂ ಮೇಲೆ ದಾಳಿ ಮಾಡಿ ಲೈವ್ ಮಾಡಿದ್ದಾರೆ. ಇದರಲ್ಲಿ ಲೈವ್ ಮಾಡುವ ಅಗತ್ಯವಾದರೂ ಏನಿತ್ತು. ಒಂದು ವೇಳೆ ಲೋಪವಾಗಿದ್ದರೆ ಅಧಿಕಾರಿಗಳನ್ನು ಕರೆದು ಲೋಪ ಸರಿಪಡಿಸಬಹುದಿತ್ತು. ಆದರೆ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಶಾಸಕ ಸಹಚರರು ನಾನು ಸತ್ತಂತೆ ಮಾಡ್ತೀನಿ, ನೀನು ಅತ್ತಂತೆ ಮಾಡು ಎಂಬ ಡ್ರಾಮಾ ಮಾಡಿದ್ದಾರೆ.

ತೇಜಸ್ವಿ ಸೂರ್ಯ ಸಂಸದರ ರೀತಿ ವರ್ತಿಸದೆ ಕಪಟ ನಾಟಕ ಮಂಡಳಿ ಕಟ್ಟಿಕೊಂಡು ನಾಟಕ ಮಾಡಿದ್ದಾರೆ. ಪ್ರದರ್ಶನ ಶೂರ ತೇಜಸ್ವಿ ಸೂರ್ಯ ಯಾವ ರೀತಿ ನಾಟಕ ಮಾಡಿದ್ದಾರೆಂದರೆ, ಇವರು ದಾಳಿ ಮಾಡಿದ ಮೇಲೆ ಬೆಡ್‌ಗಳು ಸಿಕ್ಕವಂತೆ, ಬೆಡ್ ವೆಕೇನ್ಸಿ ಝೀರೋ ಆಯಿತಂತೆ. ಆದರೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ವಾಸ್ತವ ಸ್ಥಿತಿಯನ್ನು ಟ್ವೀಟ್ ಮಾಡಿ ತೋರಿಸಿದ್ದಾರೆ. ಅಂದರೆ ಸಂಸದರ ಉದ್ದೇಶವೇನಿತ್ತು.? ಜನರಿಗೆ ಸಹಾಯ ಮಾಡುವ ಉದ್ದೇಶವೋ ಅಥವಾ ಜನರನ್ನು ದಾರಿ ತಪ್ಪಿಸುವ ಉದ್ದೇಶವೋ.?

ಇವರ ಉದ್ದೇಶ ವಾರ್ ರೂಂ ಬಿಜೆಪಿಯವರ ನಿಯಂತ್ರಣದಲ್ಲಿರಬೇಕು. ವಾರ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿರುವ 206 ಸಿಬ್ಬಂದಿಗಳ ಪೈಕಿ ಯಾರು ಅಲ್ಪಸಂಖ್ಯಾತರಿದ್ದಾರೋ ಅವರನ್ನು ಗುರಿಯಾಗಿಸಿ ಹೊರಗಟ್ಟಬೇಕು. ಮತ್ತು ಬಿಜೆಪಿ ಗೂಂಡಾಗಳು ಅಲ್ಲಿ ಕೆಲಸ ಮಾಡಬೇಕು.ಅವರು ಹೇಳಿದವರಿಗೆ ಬೆಡ್ ಮತ್ತು ಐಸಿಯು ನೀಡಬೇಕು. ಇದು ಇವರ ನಿಜವಾದ ಉದ್ದೇಶ. ಹಾಗಾಗಿ ಇದಕ್ಕಿಂತ ದೊಡ್ಡ ಅಪರಾಧ ಇನ್ನೇನಾದರೂ ಇರಲು ಸಾಧ್ಯವೆ.?

ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಸಂಕಷ್ಟದಲ್ಲಿರುವವರ ರಕ್ಷಣೆಗೆ ಧಾವಿಸಬೇಕು. ನಮ್ಮಲಿರುವ ಶಕ್ತಿಯನ್ನು ಜನರಿಗೆ ಅರ್ಪಿಸುವ ಸಂದರ್ಭವಿದು. ಯಾಕಂದರೆ ಈಗ ಎಲ್ಲರೂ ಆರ್ಥಿಕ ಹಾಗೂ ಆರೋಗ್ಯ ಸಂಕಷ್ಟದಲ್ಲಿದ್ದಾರೆ. ಜನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.

ಇಂತಹ ಕಾಲದಲ್ಲಿ ಈ ಕೀಳು ಮಟ್ಟದ ನಾಟಕಕ್ಕೆ ಪ್ಲಾನ್ ಮಾಡಲು ಬಿಜೆಪಿ ನಾಯಕರಿಗೆ ಸಮಯ ಸಿಕ್ಕಿದಾದರೂ ಹೇಗೆ. ? ತೇಜಸ್ವಿ ಸೂರ್ಯರವರಿಗೆ ಈ ನಾಟಕಕ್ಕೆ ಸ್ಕ್ರಿಪ್ಟ್ ಬರೆಯಲು ಹಾಗೂ ಡೈಲಾಗ್ ಬರೆಯಲು ಸಮಯ ಸಿಕ್ಕಿದ್ದೇ ಆಶ್ಚರ್ಯ. ಸಾರ್ವಜನಿಕ ಜೀವನದಲ್ಲಿರುವ ಯಾರೇ ಆದರೂ ಇಂತಹ ಕೀಳು ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಆದರೆ ತೇಜಸ್ವಿ ಸೂರ್ಯ ಆ ಮಟ್ಟಕ್ಕೂ ಇಳಿದು ಬಿಟ್ಟಿದ್ದಾರೆ.

ವ್ಯವಸ್ಥೆಯಲ್ಲಿ ಹಾಗೂ ರಾಜಕಾರಣದಲ್ಲಿ ಕೆಲವೊಮ್ಮೆ ಭ್ರಷ್ಟಾಚಾರ ಸೇರಿದಂತೆ ಅನೇಕ ಲೋಪಗಳು ನಡೆಯುತ್ತವೆ. ಆದರೆ ನಾವು ಈಗ ಯಾವ ಸಂದರ್ಭದಲ್ಲಿ ಇದ್ದೇವೆ ಎಂದು ಯೋಚಿಸಿ ವರ್ತಿಸಬೇಕು. ಒಂದು ಕಡೆ ಸರ್ಕಾರ ಕೊರೊನಾ ಪರಿಸ್ಥಿತಿ ನಿಭಾಯಿಸಲಾಗದೆ ಒದ್ದಾಡುತ್ತಿದೆ. ಮತ್ತೊಂದು ಕಡೆ ಅಧಿಕಾರಿಗಳು ಸಾಂಕ್ರಾಮಿಕ ನಿಯಂತ್ರಣಕ್ಕೆ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವ ಸಂದರ್ಭದಲ್ಲಿ ವ್ಯವಸ್ಥೆಯ ಲೋಪವನ್ನು ಸರಿಪಡಿಸಬೇಕೆ ಹೊರತು ಪ್ರಚಾರ ಪಡೆಯುವ ಉದ್ದೇಶವಿರಬಾರದು. ತೇಜಸ್ವಿ ಸೂರ್ಯರವರ ವರ್ತನೆ ವ್ಯವಸ್ಥೆಯನ್ನೇ ಕುಲಗೆಡಿಸುವ ಯತ್ನ.

ಇನ್ನು ಪ್ರದರ್ಶನ ಶೂರ ತೇಜಸ್ವಿ ಸೂರ್ಯ ಘಟನೆಯ ಬಳಿಕ ವಾರ್ ರೂಂಗೆ ತೆರಳಿ, ಅಲ್ಲಿದ್ದವರಿಗೆ ಮೊಬೈಲ್ ಬಳಸದಂತೆ ಹಾಗೂ ವಿಡಿಯೋ ಚಿತ್ರೀಕರಣ ಮಾಡದಂತೆ ಹೇಳಿ, ಈ ಹಿಂದಿನ ತಮ್ಮ ನಡತೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ್ದಾರೆ.

ತೇಜಸ್ವಿ ಸೂರ್ಯರಿಗೆ ತಾವು ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಪಾಪಪ್ರಜ್ಞೆ ಕಾಡಿಲ್ಲ. ಪಾಪಪ್ರಜ್ಞೆ ಕಾಡಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದರು. ಹೀಗೆ ಕದ್ದುಮುಚ್ಚಿ ಹೋಗಿ ಕ್ಷಮೆ ಕೇಳುತ್ತಿರಲಿಲ್ಲ. ಇದು ಕೂಡ ನಾಟಕದ ಮುಂದುವರೆದ ಭಾಗ.

ವಿಶೇಷವೆಂದರೆ ಇವರು ಮಾತನಾಡಿದ ಆಡಿಯೋ ಕ್ಲಿಪ್ಪಿಂಗ್ ಬಹಿರಂಗವಾಗಿದೆ. ಇಷ್ಟಾದರೂ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ನಾನು ಕ್ಷಮೆ ಕೇಳಿಯೇ ಇಲ್ಲ ಎಂಬ ಭಂಡ ವಾದ ಮಂಡಿಸಿದ್ದಾರೆ. ಈ ಮನುಷ್ಯ ಸಂಸದನಾಗಿರಲು ಲಾಯಕ್ಕೋ ಅಥವಾ ನಾಲಾಯಕ್ಕೋ ಎಂದು ಅವರೇ ನಿರ್ಧರಿಸಲಿ‌ ಎಂದು ಹೇಳಿದರು.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ