Breaking News
Home / ಜಿಲ್ಲೆ / ಬೆಂಗಳೂರು / ರಾಜ್ಯದ ಆಮ್ಲಜನಕ ಬೇರೆಡೆ ಹಂಚಿಕೆಗೆ ಆಕ್ರೋಶ

ರಾಜ್ಯದ ಆಮ್ಲಜನಕ ಬೇರೆಡೆ ಹಂಚಿಕೆಗೆ ಆಕ್ರೋಶ

Spread the love

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಸಂದರ್ಭದಲ್ಲಿ ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲೇ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದಲ್ಲಿ ನಿತ್ಯವೂ 1,043 ಟನ್‌ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಅದರಲ್ಲಿ 865 ಟನ್‌ ರಾಜ್ಯಕ್ಕೆ ಹಂಚಿಕೆ ಮಾಡಿದ್ದು, 675 ಟನ್ ಮಾತ್ರ ಬಳಕೆಗೆ ಲಭ್ಯವಾಗುತ್ತಿದೆ ಎಂಬ ಮಾಹಿತಿಯುಳ್ಳ ವರದಿಯನ್ನು ‘ಪ್ರಜಾವಾಣಿ’ ಮಂಗಳವಾರ ಪ್ರಕಟಿಸಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರಿಕೆಯ ವರದಿಯ ತುಣುಕನ್ನು ಹಂಚಿಕೊಂಡಿರುವ ನೂರಾರು ಮಂದಿ, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಫೇಸ್‌ ಬುಕ್‌, ವಾಟ್ಸ್‌ ಆಯಪ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳು, ಜಾಲ ತಾಣಗಳಲ್ಲಿ ರಾಜ್ಯದ ಆಮ್ಲಜನಕದ ಬೇಡಿಕೆ, ಕೇಂದ್ರದಿಂದ ಹಂಚಿಕೆ ಮತ್ತು ಪೂರೈಕೆ ಕುರಿತು ಚರ್ಚೆ ನಡೆದಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಿ, ಬೇರೆ ರಾಜ್ಯಗಳಿಂದ ಇಲ್ಲಿಗೆ ಆಮ್ಲಜನಕ ತರಿಸಿಕೊಳ್ಳಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು ಹಲವರು ವಿರೋಧಿಸಿದ್ದಾರೆ. ಕೇಂದ್ರ ಸರ್ಕಾರದ ನಿಲುವಿನಿಂದಾಗಿಯೇ ರಾಜ್ಯದಲ್ಲಿ ಆಮ್ಲಜನಕ ಪೂರೈಕೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ.

ಹೊಣೆ ಯಾರು?: ‘ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ‌, ತೆಲಂಗಾಣ ರಾಜ್ಯಗಳಿಗೆ ಕೊಡಬೇಕಂತೆ. ಒಡಿಶಾದಿಂದ ಇಲ್ಲಿಗೆ 48 ಗಂಟೆಗಳ ಪ್ರಯಾಣ ಮಾಡಿ ಆಮ್ಲಜನಕ ತರಬೇಕು. ಈ ಅವಧಿಯಲ್ಲಿ ಆಮ್ಲಜನಕದ ಕೊರತೆಯಾಗಿ ಯಾರಿಗಾದರೂ ತೊಂದರೆ ಆದರೆ ಅದಕ್ಕೆ ಯಾರೂ ಹೊಣೆ ಇಲ್ಲ. ಕೇಂದ್ರೀಕೃತ ವ್ಯವಸ್ಥೆ ಹೇಗೆ ತೊಂದರೆ ಮಾಡುತ್ತದೆ ಎಂಬುದಕ್ಕೆ ಒಂದು ತಾಜಾ ಉದಾಹರಣೆ’ ಎಂದು ಮುನ್ನೋಟ ಬಳಗದ ವಸಂತ್‌ ಶೆಟ್ಟಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಒಂದು ದೇಶ- ಒಂದು ಚುನಾವಣೆ, ಒಂದು ತೆರಿಗೆ, ಒಂದು ಪಡಿತರ ಚೀಟಿ, ಒಂದು ಭಾಷೆ ಎಂದು ಎಲ್ಲವನ್ನೂ ಕೇಂದ್ರೀಕರಿಸುವುದನ್ನು ಸಮರ್ಥಿಸುವವರು ಇದೇ ಬಗೆಯ ಕೇಂದ್ರೀಕೃತ ವ್ಯವಸ್ಥೆ ರಷ್ಯಾದಲ್ಲಿ ಏಕೆ ಸೋತಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯಲ್ಲಿನ ತನ್ನ ಕರ್ತವ್ಯಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ಮುಂದಿನ ದಿನಗಳಲ್ಲಿ ವಿರೋಧ ದಾಖಲಿಸುವುದೊಂದೇ ರಾಜ್ಯಗಳ ಮುಂದಿರುವ ದಾರಿ’ ಎಂದು ಐ.ಟಿ ತಂತ್ರಜ್ಞ ನಿತೇಶ್ ಕುಂಟಾಡಿ ಫೇಸ್‌ ಬುಕ್‌ನಲ್ಲಿ ಎಚ್ಚರಿಸಿದ್ದಾರೆ.

ತರ್ಕ ಇದೆಯಾ?: ‘ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕದಲ್ಲಿ ಕಟಾವು ಮಾಡಿ, ರಾಜ್ಯಕ್ಕೆ ಒಡಿಶಾ ಮತ್ತು ಆಂಧ್ರದಿಂದ ಹೆಚ್ಚುವರಿ ಆಮ್ಲಜನಕ ಹಂಚಿಕೆ ಮಾಡಲಾಗಿದೆ. ಇದಕ್ಕೇನಾದರೂ ತರ್ಕ ಇದೆಯಾ? ಮೋದಿಯ ತಲೆ ಒಳಗೆ ಮೆದುಳು ಇದೆಯಾ?’ ಎಂದು ಬರಹಗಾರ ಸುರೇಶ ಕಂಜರ್ಪಣೆ ಪ್ರಶ್ನಿಸಿದ್ದಾರೆ.

ಎಲ್ಲದರಲ್ಲೂ ತಾರತಮ್ಯ: ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್‌ ಮುಖಂಡ ರಕ್ಷಿತ್ ಶಿವರಾಂ, ‘ಕೇಂದ್ರ ಸರ್ಕಾರ ಕರ್ನಾಟಕವನ್ನು ಎಲ್ಲ ವಿಷಯಗಳಲ್ಲೂ ಏಕೆ ಕಡೆಗಣಿಸುತ್ತಿದೆ? ಜಿಎಸ್‌ಟಿ ಪಾಲು ಹಂಚಿಕೆ, ಕೋವಿಡ್‌ ಅನುದಾನ ಆಯಿತು, ಈಗ ಆಮ್ಲಜನಕ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಅಷ್ಟೂ ಆಮ್ಲಜನಕವನ್ನು ಇಲ್ಲೇ ಬಳಸಿಕೊಳ್ಳಲು ಅವಕಾಶ ನೀಡಿದರೆ ಸಮಸ್ಯೆ ತಪ್ಪಿಸಬಹುದು’ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಧೈರ್ಯವಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇದ್ದರೂ, ಇಲ್ಲಿಂದ ಗುಜರಾತ್‌ ಮತ್ತು ಉತ್ತರ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಿಂದ ಆಮ್ಲಜನಕ ಕಳಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಲು ಬಿಜೆಪಿನ ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

‘ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಸಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ರಾಜ್ಯದ ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗಿಲ್ಲ. ಪರಿಸ್ಥಿತಿ ನಿರ್ವಹಣೆ ಸರ್ಕಾರಕ್ಕೆ ಗೊತ್ತಿಲ್ಲ. ನಿರ್ವಹಣೆಯಲ್ಲಿನ ವೈಫಲ್ಯದಿಂದ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ