Breaking News
Home / ಜಿಲ್ಲೆ / ಬೆಂಗಳೂರು / 14 ದಿನ ಕರ್ನಾಟಕ ಲಾಕ್‌ಡೌನ್: ಬಸ್‌, ಕಾರು, ಆಟೊ ಸಂಚಾರವೂ ಇಲ್ಲ

14 ದಿನ ಕರ್ನಾಟಕ ಲಾಕ್‌ಡೌನ್: ಬಸ್‌, ಕಾರು, ಆಟೊ ಸಂಚಾರವೂ ಇಲ್ಲ

Spread the love

ಬೆಂಗಳೂರು: ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರು ಮನೆ ಬಿಟ್ಟು ಹೊರಬರುವುದನ್ನು ತಡೆಯಲು ಮಂಗಳವಾರ (ಏ.27) ರಾತ್ರಿಯಿಂದಲೇ 14 ದಿನಗಳ ಕಾಲ (ಮೇ 12ರವರೆಗೆ) ರಾಜ್ಯಾದ್ಯಂತ ಲಾಕ್‌ಡೌನ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.

ಕೊರೊನಾ ಸೋಂಕಿನ ಸರಪಳಿ ತುಂಡರಿಸಿ, ಕೋವಿಡ್‌ ಪ್ರಕರಣಗಳನ್ನು ತಗ್ಗಿಸಲು ಸಾಧ್ಯ ಎಂಬುದಾಗಿ ತಜ್ಞರು ನೀಡಿದ ಸಲಹೆಯನ್ನು ಆಧರಿಸಿ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗಿನ 6 ಗಂಟೆಯ ವರೆಗೆ ಬಿಗಿ ಕ್ರಮಗಳು ಜಾರಿಯಲ್ಲಿರುತ್ತವೆ. ಸಾರ್ವಜನಿಕರು ಪ್ರತಿ ದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆ ಬಳಿಕ ಎಲ್ಲ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ಹಾಕಿಕೊಂಡು ಹೋಗಬೇಕು. ಪೊಲೀಸರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು’ ಎಂದು ಅವರು ಮನವಿ ಮಾಡಿದರು.

ರಾತ್ರಿ ವೇಳೆ ಎಂದಿನಂತೆ ರಾತ್ರಿ ಕರ್ಫ್ಯೂ ಮುಂದುವರಿಯುತ್ತದೆ. ಎರಡು ವಾರಗಳ ಪರಿಸ್ಥಿತಿ ನೋಡಿಕೊಂಡು ನಿರ್ಬಂಧಗಳನ್ನು ಮುಂದುವರಿಸ ಬೇಕೆ- ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು. ಅನಿವಾರ್ಯ ಆದರೆ ‘ಲಾಕ್‌ಡೌನ್’ ಮುಂದುವರಿಸಲಾಗುವುದು ಎಂದೂ ಅವರು ಹೇಳಿದರು.

ಬೆಂಗಳೂರಿನ ಪರಿಸ್ಥಿತಿ ಮಹಾರಾಷ್ಟ್ರವನ್ನೂ ಮೀರಿಸುತ್ತಿದೆ. ಕೋವಿಡ್‌ ಹರಡುವುದನ್ನು ತಡೆಯುವುದು ತುರ್ತು ಅಗತ್ಯವಾಗಿದೆ. ಬಿಗಿ ಕ್ರಮಕ್ಕೆ ಜನರು ಸಹಕಾರ ನೀಡಬೇಕು ಎಂದೂ ಮನವಿ ಮಾಡಿದರು.

ಉತ್ಪಾದನಾ ವಲಯಕ್ಕೆ ರಿಯಾಯ್ತಿ: ಗಾರ್ಮೆಂಟ್‌ ಉದ್ಯಮ ಹೊರತುಪಡಿಸಿ ಉಳಿದ ಎಲ್ಲ ಉತ್ಪಾದನಾ ಘಟಕಗಳ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ನೀಡಲಾಗುವುದು. ಗಾರ್ಮೆಂಟ್ಸ್‌ಗಳಲ್ಲಿ ಒಂದೇ ಸೂರಿನಡಿ ಸಾವಿರಾರು ಜನ ಕುಳಿತು ಕೆಲಸ ಮಾಡುತ್ತಾರೆ. ನಗರದಲ್ಲಿ 7 ರಿಂದ 8 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ.

ಮೆಟ್ರೊ ಮತ್ತು ಸಾರಿಗೆ ಇಲ್ಲ
ಅಂತರ್‌ ಜಿಲ್ಲೆ ಮತ್ತು ನೆರೆಯ ರಾಜ್ಯಗಳಿಗೆ ಹೋಗಲು ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್‌ಗಳು ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಬಸ್‌ ಅಥವಾ ಇತರ ವಾಹನಗಳಲ್ಲಿ ತೆರಳಲು ಅವಕಾಶ. ಬೆಂಗಳೂರಿನಲ್ಲಿ ಮೆಟ್ರೊ ಮತ್ತು ಬಿಎಂಟಿಸಿ ಬಸ್‌ಗಳು ಇರುವುದಿಲ್ಲ. ಉಳಿದ ನಗರಗಳಲ್ಲೂ ಸ್ಥಳೀಯ ಸಾರಿಗೆ ಬಸ್ಸುಗಳು ಇರುವುದಿಲ್ಲ.

ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಬಾರದು ಎಂಬ ಕಾರಣಕ್ಕೆ ಆಟೊ ಸೇರಿದಂತೆ ಯಾವುದೇ ವಾಹನಗಳ ಸಂಚಾರಕ್ಕೂ ಆವಕಾಶ ಇರುವುದಿಲ್ಲ. ಆಸ್ಪತ್ರೆಗೆ ಹೋಗುವ ವಾಹನಗಳಿಗೆ ರಿಯಾಯ್ತಿ ಇದೆ. ಕೈಗಾರಿಕಾ ಘಟಕಗಳು ಕಾರ್ಮಿಕರನ್ನು ಒಯ್ಯಲು ತಮ್ಮದೇ ವಾಹನ ಮಾಡಿಕೊಳ್ಳಬೇಕು. ಅದಕ್ಕೆ ಪೂರ್ವಾನುಮತಿ ಪಡೆಯಬೇಕು ಮತ್ತು ವಾಹನಗಳಲ್ಲಿ ಕಾರ್ಖಾನೆ ಸಿಬ್ಬಂದಿ ಗುರುತಿನ ಚೀಟಿ ಹೊಂದಿರಬೇಕು.

ಕಸಾಪ ಚುನಾವಣೆ ಮುಂದೂಡಿಕೆ
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಂದೂಡಲಾಗಿದೆ. ಮೇ 9 ಕ್ಕೆ ಚುನಾವಣೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು.

ಒಕ್ಕಲಿಗರ ಸಂಘದ ಚುನಾವಣೆಯನ್ನೂ ಮುಂದೂಡಲಾಗಿದೆ.

ಎಲ್ಲರಿಗೂ ಉಚಿತ ಲಸಿಕೆ
ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿದೆ ಎಂದ ಅವರು, ರಾಜ್ಯ ಸರ್ಕಾರ ಈಗಾಗಲೇ 1 ಕೋಟಿ ಡೋಸ್‌ ಲಸಿಕೆ ಖರೀದಿಗೆ ₹ 400 ಕೋಟಿ ಬಿಡುಗಡೆಗೆ ಒಪ್ಪಿಗೆ ನೀಡಿದೆ ಎಂದರು.

ಯಾವುದೆಲ್ಲ ಇರಲಿದೆ
* ನಿರ್ಮಾಣ ವಲಯ
* ಕೃಷಿ ಚಟುವಟಿಕೆಗಳು
* ಉದ್ಯಮ, ದೂರಸಂಪರ್ಕ, ಇಂಟರ್‌ನೆಟ್‌
* ಆರೋಗ್ಯ ಸೇವೆಗಳು, ಕ್ಲಿನಿಕ್, ಮೆಡಿಕಲ್ ಶಾಪ್‌
* ಅಂತರ ರಾಜ್ಯ ಗೂಡ್ಸ್‌ ವಾಹನಗಳಿಗೆ ಅವಕಾಶ
* ಅಗತ್ಯ ಸೇವೆ ಒದಗಿಸುವ ಸರ್ಕಾರದ ವಿವಿಧ ಇಲಾಖೆಗಳ ನೌಕರರಿಗೆ ಅವಕಾಶ
* ಕೋವಿಡ್ ಸಂಬಂಧಿತ ಕರ್ತವ್ಯದಲ್ಲಿರುವ ಸಿಬ್ಬಂದಿ ಹಾಜರಿ
* 50 ಜನಕ್ಕೆ ಸೀಮಿತವಾಗಿ ಮದುವೆಗಳನ್ನು ನಡೆಸಬಹುದು.
* ವಿಮಾನ, ರೈಲು ಪ್ರಯಾಣದ ಟಿಕೆಟ್ ಇದ್ದರೆ ಬಸ್, ಆಟೊ, ಟ್ಯಾಕ್ಸಿಗಳಿಗೆ ಅವಕಾಶ
* ನರೇಗಾ ಕಾಮಗಾರಿಗಳು
* ಕಾರ್ಗೊ ಮತ್ತು ಇ-ಕಾಮರ್ಸ್‌
* ಆರೋಗ್ಯ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಆಟೊ ಮತ್ತು ಟ್ಯಾಕ್ಸಿ ಬಳಕೆ
* ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆಟೊ- ಟ್ಯಾಕ್ಸಿ ಬಳಸಬಹುದು. ಗುರುತಿನ ಚೀಟಿ ಇರಬೇಕು

ಬೆಳಿಗ್ಗೆ 6 ರಿಂದ 10 ರವರೆಗೆ
* ನ್ಯಾಯಬೆಲೆ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು, ತರಕಾರಿ, ಹಾಲು, ಮಾಂಸ, ಮೀನು, ಪಶು ಆಹಾರ ಅಂಗಡಿಗೆ ಅವಕಾಶ
* ರೆಸ್ಟೋರೆಂಟ್‌, ಮದ್ಯದಂಗಡಿ, ಉಪಹಾರ ಗೃಹಗಳಿಂದ ಪಾರ್ಸೆಲ್‌ ಸೇವೆ ಮಾತ್ರ
* ಪೆಟ್ರೋಲ್ ಬಂಕ್‌, ಎಟಿಎಂಗಳಿಗೆ ಅವಕಾಶ

ಏನೇನು ಇರುವುದಿಲ್ಲ
* ದೇವಸ್ಥಾನ, ಮಸೀದಿ, ಚರ್ಚ್‌ಗಳು
* ಶಾಲಾ- ಕಾಲೇಜುಗಳು
* ಸಿನಿಮಾ ಮಂದಿರ, ಶಾಪಿಂಗ್‌ ಮಾಲ್‌, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾಂಗಣ, ಈಜುಕೊಳ
* ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಮಾವೇಶಗಳು
* ಸರ್ಕಾರಿ ಮತ್ತು ಖಾಸಗಿ ಬಸ್‌, ತುರ್ತು ಸಂದರ್ಭ ಬಿಟ್ಟು ಆಟೋ, ಕಾರು ಯಾವುದೂ ಇಲ್ಲ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ