Breaking News
Home / ನವದೆಹಲಿ / ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್​ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ

ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್​ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ

Spread the love

ನಿಮಗೆ ನೆನಪಿದೆಯಾ? ಕಳೆದ ವರ್ಷ, ಕೊರೊನಾ ಮೊದಲ ಅಲೆ ಅಪ್ಪಳಿಸಿದಾಗ, ಎಲ್ಲೆಲ್ಲೂ ವೈದ್ಯಕೀಯ ವೆಂಟಿಲೇಟರ್​ಗಾಗಿ ಹಾಹಾಕಾರ ಎದ್ದಿತ್ತು. ಹೌದು. ಅದೇ ರೀತಿ ಹೈಡ್ರೋಕ್ಸಿಕ್ಲೋರೊಕ್ವಿನ್​ (ಎಚ್​ಸಿಕ್ಯೂ) ಮಾತ್ರೆಗೂ ಬೇಡಿಕೆ ತುಂಬಾ ಇತ್ತು. ಭಾರತ ಅಮೇರಿಕಕ್ಕೆ (ಎಚ್​ಸಿಕ್ಯೂ) ಮಾತ್ರೆಯನ್ನು ಕಳಿಸಿತ್ತು. ಭಾರತ ಸರ್ಕಾರ ಹೊಸ ಹೊಸ ವೆಂಟಿಲೇಟರ್​ ತಯಾರಿಸಲು ಕರೆ ಕೊಟ್ಟಿತ್ತು. ಅದು ಹೇಗೋ, ಭಾರತದಲ್ಲಿ ಕೊರೊನಾ ವೈರಾಣು ಮಣ್ಣುಮುಕ್ಕಿತು. ನಾವು ಬೇರೆಲ್ಲಾ ದೇಶಗಳಿಗಿಂತಲೂ ಸುಲಭವಾಗಿ ಕೊವಿಡ್​ 19 ಯುದ್ಧದಲ್ಲಿ ಗೆದ್ದುಬಿಟ್ಟೆವು ಎಂದು ಬೀಗುವಷ್ಟರಲ್ಲಿ ಸೋಂಕಿನ ಎರಡನೇ ಅಲೆ ಬಂದಪ್ಪಳಿಸಿದೆ. ಕಳೆದ ಬಾರಿ ಕೊರೊನಾ ವೈರಾಣುವಿನ ಗುಣಲಕ್ಷಣಗಳೇನು? ಅದು ಹೇಗೆ ವರ್ತಿಸಬಹುದು? ಎಂಬ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದಿದ್ದರೂ ತಕ್ಕಮಟ್ಟಿಗೆ ಅದರ ಹೊಡೆತವನ್ನು ತಡೆದುಕೊಂಡು ಪರಿಸ್ಥಿತಿ ನಿಭಾಯಿಸಲಾಗಿತ್ತು. ಆದರೆ, ಈಗ ಕಳೆದೊಂದು ವರ್ಷದ ಅನುಭವವಿದ್ದರೂ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈಗ ಕೆಲವು ತಜ್ಞರು ನಿಜವಾದ ವಿಚಾರವನ್ನು ಟಿವಿ9 ಡಿಜಿಟಲ್​ಗೆ ಹೇಳಿದ್ದಾರೆ. ಅದೇನೆಂದರೆ, ಕಳೆದ ಒಂದು ವರ್ಷದಲ್ಲಿ ಈ ರೋಗದ ಚಿಕಿತ್ಸಾ ವಿಧಾನವೇ ಬದಲಾವಣೆ ಆಗಿದೆ. ಹಾಗಾಗಿ ಈ ಬಾರಿ ಆಮ್ಲಜನಕಕ್ಕೆ ಹಾಹಾಕಾರ ಎದ್ದಿರುವುದನ್ನು ಇಲ್ಲಿ ಗಮನಿಸಬಹುದು.

ಮೊದಲ ಅಲೆಯ ಆರಂಭಿಕ ಹಂತದಲ್ಲಿ ಕೊರೊನಾ ಸೋಂಕು ತಗುಲಿದರೆ ಮುಗಿದೇ ಹೋಯಿತು ಎಂಬ ಭಯ ಜನರಲ್ಲಿತ್ತು. ಅದರ ಹೊರತಾಗಿಯೂ ವೈದ್ಯರು ಸೂಕ್ತ ಚಿಕಿತ್ಸಾ ಕ್ರಮಗಳ ಮೂಲಕ ಸೋಂಕಿತರನ್ನು ಗುಣಪಡಿಸುತ್ತಿದ್ದರು. ಈ ಬಾರಿ ಇದಕ್ಕೆ ವ್ಯತಿರಿಕ್ತವಾಗಿ ಜನರಲ್ಲಿ ಭಯ ಕಡಿಮೆಯಾಗಿ, ವೈದ್ಯ ವಲಯದ ಆತಂಕ ಜಾಸ್ತಿಯಾಗಿದೆ. ಕಳೆದ ಕೆಲ ವಾರಗಳಿಂದ ಏರುತ್ತಲೇ ಇರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಎರಡನೇ ಅಲೆ ಎಷ್ಟು ವೇಗವಾಗಿ ವ್ಯಾಪಿಸುತ್ತಿದೆ ಎಂಬುದನ್ನು ಅಂದಾಜಿಸಬಹುದು. ಅಂತೆಯೇ, ಅದನ್ನು ನಿಭಾಯಿಸಲಾಗದೇ ಆರೋಗ್ಯ ವ್ಯವಸ್ಥೆ ಪರಿತಪಿಸುತ್ತಿರುವುದನ್ನು ಗಮನಿಸಿದರೆ ಸೋಂಕಿನ ಗಂಭೀರತೆಯನ್ನೂ ಅರ್ಥೈಸಿಕೊಳ್ಳಬಹುದು.

ಎರಡನೇ ಅಲೆಯ ಸೋಂಕು ವ್ಯಾಪಿಸುತ್ತಿದ್ದಂತೆಯೇ ದೊಡ್ಡ ಮಟ್ಟದ ಕೂಗು ಕೇಳಿಬರುತ್ತಿರುವುದು ಆಕ್ಸಿಜನ್ ಕೊರತೆ ಬಗ್ಗೆ. ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಐಸಿಯು ಇಲ್ಲ, ವೆಂಟಿಲೇಟರ್ ಇಲ್ಲ, ರೆಮ್​ಡೆಸಿವಿರ್ ಇಲ್ಲ ತೀರಾ ಮೂಲಭೂತ ಅವಶ್ಯಕತೆಯಾದ ಆಕ್ಸಿಜನ್​ ಕೂಡಾ ಇಲ್ಲ ಎಂದು ವೈದ್ಯರೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಆರೋಗ್ಯ ಇಲಾಖೆ ಆಗಲೂ ಕಾಡಿದ್ದ ಈ ಮೇಲಿನ ಎಲ್ಲಾ ಕೊರತೆಗಳನ್ನು ನೀಗಿಸಲು ಪ್ರಯತ್ನಪಟ್ಟಿತ್ತು. ಬಹುತೇಕ ಎಲ್ಲಾ ವ್ಯವಸ್ಥೆಗಳನ್ನೂ ಮೇಲ್ದರ್ಜೆಗೆ ಏರಿಸುವ ಮೂಲಕ ಆರೋಗ್ಯ ವ್ಯವಸ್ಥೆಯ ಗುಣಮಟ್ಟವನ್ನು ಏರಿಸುತ್ತೇವೆ ಎಂದು ಪಣತೊಟ್ಟಿತ್ತು. ಆದರೆ, ಒಂದು ವರ್ಷದಿಂದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದರೂ ಈಗ ಸೋಲುತ್ತಿರುವುದೇಕೆ ಎನ್ನುವುದು ಸಹಜವಾಗಿ ಕಾಡುವ ಸಂದೇಹ.

ಮೊದಲ ಅಲೆಗೂ ಈ ಬಾರಿಯದ್ದಕ್ಕೂ ಚಿಕಿತ್ಸೆಯ ವಿಧಾನವೇ ಬೇರೆ ಆಯ್ತು
ಈ ಬಗ್ಗೆ ಕೆಲ ವೈದ್ಯರು ಕಳೆದ ಬಾರಿಯ ಕೊರೊನಾಕ್ಕೂ ಈ ಬಾರಿಯ ಕೊರೊನಾಕ್ಕೂ ಚಿಕಿತ್ಸೆ ನೀಡುವ ವಿಧಾನವೇ ಬದಲಾಗಿದೆ. ಕಳೆದ ವರ್ಷ ಆಕ್ಸಿಜನ್​ಗಿಂತಲೂ ವೆಂಟಿಲೇಟರ್ ಅವಶ್ಯಕತೆ ಹೆಚ್ಚಾಗಿತ್ತು. ಹೀಗಾಗಿ ವೆಂಟಿಲೇಟರ್​ ಉತ್ಪಾದನೆ ಹೆಚ್ಚಿಸಲಾಗಿತ್ತು. ಅದರ ಪರಿಣಾಮ ಈ ಬಾರಿ ವೆಂಟಿಲೇಟರ್ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಲಕ್ಷ ಲಕ್ಷ ಜನ ಸೋಂಕಿಗೆ ಈಡಾಗುತ್ತಿದ್ದಾರೆ. ಅವರಲ್ಲಿ 10 ಪ್ರತಿಶತ ಜನರನ್ನು ವೆಂಟಿಲೇಟರ್​ ಮೇಲೆ ಮೆಲಗಿಸಬೇಕೆಂದು ಕೊಂಡರೆ, ಈ ಬಾರಿಯೂ ವೆಂಟಿಲೇಟರ್​ ಕೊರತೆ ಕಾಡಬೇಕಿತ್ತು ಅಲ್ಲವೇ? ಕಳೆದ ಬಾರಿಯಂತೆ ಈ ಬಾರಿ ಎಲ್ಲೂ ವೆಂಟಿಲೇಟರ್​ ಕೊರತೆ ಆಗಿಲ್ಲ. ಅರೆ, ಹೌದಲ್ಲ. ಈ ಬಾರಿ ಎಲ್ಲೆಲ್ಲೂ ಆಮ್ಲಜನಕದ ಬಗ್ಗೆ ಚರ್ಚೆ. ಇದು ಯಾಕೆ ಹೀಗೆ? ಮಲ್ಯ ಆಸ್ಪತ್ರೆಯಲ್ಲಿ ಹಿರಿಯ ಹೃದಯ ಶಸ್ತ್ರ ಚಿಕಿತ್ಸಕರಾಗಿರುವ, ಡಾ ದಿವಾಕರ ಭಟ್​ ಹೇಳಿದ್ದು ಹೀಗೆ: ಪ್ರಾಮಾಣಿಕವಾಗಿ ಹೇಳೋದಾದರೆ, ಈ ರೋಗವನ್ನು ವೈದ್ಯಕೀಯ ಜಗತ್ತು ಕೂಡ ಅಧ್ಯಯನ ಮಾಡುತ್ತಿದೆ. ಈ ರೋಗಕ್ಕೆ ಒಂದು ಪ್ರಮಾಣೀಕೃತ ಚಿಕಿತ್ಸಾ ವಿಧಾನ ಎಂಬುದು ಇನ್ನೂ ರೂಪಿತವಾಗಿಲ್ಲ. ಉದಾಹರಣೆಗೆ, ಕಳೆದ ವರ್ಷ ನಾವೆಲ್ಲ ಬಹಳ ಕೊವಿಡ್​ ರೋಗಿಗಳನ್ನು ವೆಂಟಿಲೇಟರ್​ ಸಹಾಯಕ್ಕೊಳಪಡಿಸುತ್ತಿದ್ದೆವು. ಒಂದು ಹಂತದಲ್ಲಿ ಎಚ್​ಸಿಕ್ಯೂ ಗುಳಿಗೆ ಕೊಡಲಾಗುತ್ತಿತ್ತು. ಈ ಬಾರಿ ಅವೆಲ್ಲ ಬದಲಾವಣೆ ಆಗಿದೆ. ಚಿಕಿತ್ಸಾ ವಿಧಾನದಲ್ಲಿ ಬಹಳ ಬದಲಾವಣೆ ಆಗಿದೆ. ಔಷಧಿಯ ಜೊತೆಗೆ ಆಮ್ಲಜನಕ ನೀಡಿ ರೋಗಿಗಳ ಶರೀರದಲ್ಲಿ ಆಮ್ಲಜನಕದ ಲೆವಲ್​ ನೋಡುತ್ತೇವೆ. ಇನ್ನೊಂದ ವಿಚಾರ. ಹೊರ ಜಗತ್ತು, ರೆಮ್​ಡಿಸಿವರ್​ ಮಾತ್ರೆಯ ಕೊರತೆ ಬಗ್ಗೆ ಮಾತನಾಡುತ್ತಿದ್ದರೆ, ವೈದ್ಯರು ಈ ಮಾತ್ರೆಯನ್ನು ರೋಗಿಗಳಿಗೆ ನೀಡುತ್ತಿಲ್ಲ.

ಇನ್ನು ಕೆಲ ವೈದ್ಯರು ಆಕ್ಸಿಜನ್​ ನೀಡುವಲ್ಲಿ ಅಥವಾ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡುವುದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಬದಲಾಗಿರುವುದು ಸೌಲಭ್ಯಗಳ ಪೂರೈಕೆಯಲ್ಲಿ. ದೇಶದಲ್ಲಿ ಆಕ್ಸಿಜನ್​ ಕೊರತೆ ಕಾಡುತ್ತಿದೆ. ಬೇಡಿಕೆಗೆ ತಕ್ಕುದಾದ ಪೂರೈಕೆ ಇಲ್ಲ. ಕಳೆದ ವರ್ಷಕ್ಕಿಂತಲೂ ಈ ಬಾರಿ ಸೋಂಕಿತರು ಬಲುಬೇಗನೇ ಗಂಭೀರಾವಸ್ಥೆ ತಲುಪುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ದೇಹದಲ್ಲಿ ಆಮ್ಲಜನಕದ (Oxygen Saturation) ಪ್ರಮಾಣ ಶೇ.94-95ರಷ್ಟು ಇದ್ದರೆ ಸಮಸ್ಯೆ ಇಲ್ಲ. ಆದರೆ, ಅದು ಶೇ.92ಕ್ಕಿಂತ ಕಡಿಮೆಯಾಗುತ್ತಿದೆ ಎಂದಾದಲ್ಲಿ ಎಚ್ಚರಿಕೆ ವಹಿಸಬೇಕು. ಕಡಿಮೆಯಾಗುತ್ತಿದೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆಯೇ ಆಮ್ಲಜನಕ ನೀಡಿದರೆ ಗಂಭೀರ ಹಂತಕ್ಕೆ ಹೋಗುವುದನ್ನು ತಡೆಗಟ್ಟಬಹುದು. ಆದರೆ, ಹೆಚ್ಚಿನವರಿಗೆ ಆ ಹಂತದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಉಲ್ಬಣಿಸುತ್ತಿದೆ ಎಂದು ವೈದ್ಯರು ಹೇಳುತ್ತಾರೆ.

ಅಲ್ಲದೇ, ಇದೀಗ ಸರ್ಕಾರ ರೆಮ್​ಡೆಸಿವಿರ್ ಇಂಜೆಕ್ಷನ್​ ಮೇಲೆ ಹೆಚ್ಚು ಅವಲಂಬಿತರಾಗಬೇಡಿ ಅದು ಜೀವರಕ್ಷಕ ಎಂದು ಬಿಂಬಿತವಾಗಿದೆಯಷ್ಟೇ ಅದರ ಹೊರತಾಗಿ ಚಿಕಿತ್ಸೆ ನೀಡಬಹುದು ಅದನ್ನು ಅನುಸರಿಸಿ ಎನ್ನುತ್ತಿದೆ. ಆದರೆ, ಜನರಿಗೆ ರೆಮ್​ಡೆಸಿವರ್​ ಇದ್ದರೆ ಮಾತ್ರ ಬದುಕಿಸಬಹುದು ಎಂಬ ಅಭಿಪ್ರಾಯ ಹುಟ್ಟಿಕೊಂಡಿರುವುದರಿಂದ ನಿಭಾಯಿಸುವುದು ಕಷ್ಟವಾಗುತ್ತಿದೆ. ಸದ್ಯಕ್ಕೆ ರೆಮ್​ಡೆಸಿವಿರ್ ಪೂರೈಕೆಯಲ್ಲೂ ಕೊರತೆ ಇದೆ. ನಮ್ಮ ಗಮನಕ್ಕೆ ಬಂದ ಹಾಗೆ ಮೊದಲ ಅಲೆಯಲ್ಲಿ ಪರಿಣಾಮಕಾರಿಯಾಗಿದ್ದಂತೆ ಈ ಬಾರಿ ರೆಮ್​ಡೆಸಿವಿರ್ ಪರಿಣಾಮ ಬೀರುತ್ತಿಲ್ಲ. ಆದರೆ, ಜನರ ಮನಸ್ಸಿನಲ್ಲಿ ರೆಮ್​ಡೆಸಿವಿರ್ ಹಾಸುಹೊಕ್ಕಾಗಿದೆ ಎನ್ನುವುದು ವೈದ್ಯರ ಅನಿಸಿಕೆ.

ಏನಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ
ಮೊದಲ ಅಲೆಗೂ ಈಗಿನದ್ದಕ್ಕೂ ಗಂಭೀರತೆಯಲ್ಲಿ ಅಜಗಜಾಂತರವಿದೆ. ಇದಕ್ಕೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ಬಹುಮುಖ್ಯವಾಗಿ ಉಸಿರಾಟದ ಸಮಸ್ಯೆ ತಲೆದೋರುತ್ತಿರುವುದರಿಂದ ಅದನ್ನು ನಿಯಂತ್ರಿಸುವುದರತ್ತ ಮೊದಲು ಗಮನಹರಿಸಬೇಕಾಗಿದೆ. ಆಕ್ಸಿಜನ್ ಪೂರೈಕೆ ಆಗದ ಹೊರತು ಈ ಹಂತದಲ್ಲಿ ಗಂಭೀರಾವಸ್ಥೆಗೆ ತಲುಪಿದವರನ್ನು ಉಳಿಸುವುದು ಅಸಾಧ್ಯದ ಮಾತು. ಕೆಲವರಿಗೆ ನಿಮಿಷಕ್ಕೆ 30 ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಕಳೆದ ಬಾರಿ ಈ ಪ್ರಮಾಣದ ಅಗತ್ಯ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಆಮ್ಲಜನಕ ಪೂರೈಕೆಯತ್ತ ಹೆಚ್ಚು ಗಮನನೀಡಬೇಕಿದೆ ಎಂದು ಬಹುತೇಕ ವೈದ್ಯರು ಆಗ್ರಹಿಸುತ್ತಿದ್ದಾರೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ