Breaking News
Home / ಜಿಲ್ಲೆ / ಬೆಳಗಾವಿ / ಕೊರೊನಾ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ: ಸತೀಶ ಜಾರಕಿಹೊಳಿ

ಕೊರೊನಾ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ: ಸತೀಶ ಜಾರಕಿಹೊಳಿ

Spread the love

ಬೆಳಗಾವಿ: ‘ಕೊರೊನಾ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ; ಸೂಕ್ತ ಯೋಜನೆಯೂ ಇಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೊರೊನಾ 2ನೇ ಅಲೆ ಹರಡುವ ಬಗ್ಗೆ ತಜ್ಞರು ಹಿಂದೆಯೇ ತಿಳಿಸಿದ್ದರು. ಹೀಗಾಗಿ, ಸರ್ಕಾರ ಆಸ್ಪತ್ರೆಗಳ ತಯಾರಿ, ಹಾಸಿಗೆಗಳು, ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಹಾಗೂ ಔಷಧಿಗಳ ಸಂಗ್ರಹಣೆ ಸೇರಿ ಅಗತ್ಯ ವ್ಯವಸ್ಥೆ ಮತ್ತು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಸರ್ಕಾರದ ನಿರ್ಲಕ್ಷ್ಯದಿಂದ ಈಗ ಜನರಿಗೆ ಸಮಸ್ಯೆ ಆಗುತ್ತಿದೆ’ ಎಂದು ದೂರಿದರು.

‘ಬೆಂಗಳೂರು ಸೇರಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇಲ್ಲಿ ಅಧಿಕಾರಿಗಳು ಹಾಗೂ ಜನರು ಸಾಕಷ್ಟು ಎಚ್ಚರ ವಹಿಸುತ್ತಿದ್ದಾರೆ. ಆದರೂ ಕೂಡ ಇನ್ನು ಹೆಚ್ಚು ಸುರಕ್ಷತೆ ವಹಿಸಬೇಕಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರನ್ನು ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿ, ಅವರ ಮಾಹಿತಿ ಪಡೆದು ಒಳಬಿಡಬೇಕು. ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು” ಎಂದು ಸಲಹೆ ನೀಡಿದರು.

ಶ್ರೀರಾಮುಲುಗೆ ಬುದ್ಧಿ ಹೇಳಲಿ: ‘ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ ಎಪಿಎಂಸಿಯ ತರಕಾರಿ ಮಾರುಕಟ್ಟೆ ಸ್ಥಳಾಂತರ ಕುರಿತು ಖುದ್ದಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಲು ಸೂಚಿಸುವೆ. ನಗರದ ಎರಡು, ಮೂರು ಕಡೆ ಎಪಿಎಂಸಿಯ ಜಾಗಗಳಿವೆ. ಅಲ್ಲಿಗೆ ಸ್ಥಳಾಂತರಿಸಿ, ಜನರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಶಾಸಕರೂ ಆಗಿರುವ ಸತೀಶ ತಿಳಿಸಿದರು.

‘ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲೂ ನಿರ್ಬಂಧ ಹೇರುವಂತೆ ಸಲಹೆ ನೀಡಿದ್ದೆವು. ಆದರೆ, ತಮ್ಮ ರಾಜಕೀಯಕ್ಕಾಗಿ ಸರ್ಕಾರ ಚುನಾವಣೆ ಮೇಲೆ ನಿರ್ಬಂಧ ಹೇರಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದರೂ ಬಳ್ಳಾರಿ ನಗರಪಾಲಿಕೆ ಚುನಾವಣೆಯಲ್ಲಿ ಸಚಿವ ಬಿ. ಶ್ರೀರಾಮುಲು ಅವರು ಬೃಹತ್ ಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಸಚಿವರು ಎಚ್ಚರ ವಹಿಸಬೇಕು. ಮುಖ್ಯಮಂತ್ರಿಯೂ ಇವರಿಗೆ ಬುದ್ಧಿಮಾತು ಹೇಳಬೇಕು’ ಎಂದರು.

‘ಸರ್ಕಾರವು ದಿಢೀರನೆ ಭಾಗಶಃ ಲಾಕ್‌ಡೌನ್‌ ಮಾಡಿದ್ದು ಸರಿಯಲ್ಲ. ಮೊದಲೇ ತಿಳಿಸಿದ್ದರೆ ವ್ಯಾಪಾರಿಗಳೇ ಸಹಕಾರ ನೀಡುತ್ತಿದ್ದರು. ದಿಢೀರನೆ ಬಂದ್ ಮಾಡಿಸಿರುವುದು ಪಕ್ಷದ ನಿರ್ಧಾರವಾಗಿದೆ. ತಜ್ಞರ ಸಲಹೆ ಪಡೆಯದೆ ಪಕ್ಷದಿಂದ ತೀರ್ಮಾನ ಕೈಗೊಂಡರೆ ಇದೇ ರೀತಿ ಆಗುತ್ತದೆ. ಸರ್ಕಾರ ವ್ಯವಸ್ಥಿತವಾಗಿ ತೀರ್ಮಾನ ಕೈಗೊಳ್ಳುತ್ತಿಲ್ಲ. ಇದನ್ನು ಪಕ್ಷಾತೀತವಾಗಿ ಎಲ್ಲರೂ ವಿರೋಧಿಸಲೇಬೇಕು’ ಎಂದು ಕರೆ ನೀಡಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ