Breaking News
Home / ರಾಜಕೀಯ / ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ’: ಯಶ್‌ಗೆ ಪತ್ರ ಬರೆದ ಸಾರಿಗೆ ನೌಕರರು?

ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ’: ಯಶ್‌ಗೆ ಪತ್ರ ಬರೆದ ಸಾರಿಗೆ ನೌಕರರು?

Spread the love

ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯದಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಈ ಪ್ರತಿಭಟನೆಗೆ ನಟ ಯಶ್ ಅವರು ಬೆಂಬಲ ಕೊಡಬೇಕಾಗಿ ಸಾರಿಗೆ ನೌಕರರು ಒಕ್ಕೂಟ ಬರೆದಿದೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಯಾವುದೇ ಸಂಘಟನೆಯ ಅಧಿಕೃತ ಮುದ್ರೆ, ಸಹಿ, ದಿನಾಂಕ ಇಲ್ಲ. ಆದರೆ, ಯಶ್ ಅವರ ತಂದೆ ಸಹ ಬಿಎಂಟಿಸಿ ನಿವೃತ್ತ ನೌಕರರಾಗಿರುವ ಕಾರಣ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

 

ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ.

ಪ್ರೀತಿಯ ರಾಕಿಂಗ್ ಸ್ಟಾರ್ ಯಶ್,

ವಿಷಯ: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಕೋರಿ…

ಯುಗಾದಿ ಹಬ್ಬದ ಶುಭಾಷಯ ಕೋರುತ್ತಾ, ಒಂದು ವಾರದಿಂದ ಕರ್ನಾಟಕದಲ್ಲಿ ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಟರವು ಸರ್ಕಾರದ ಹಠಮಾರಿ ಧೋರಣೆಯಿಂದ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿಷಯ ನಿಮಗೆ ತಿಳಿಯದಾದುದೇನಲ್ಲ. ಹೀಗಿರುವಾಗ, ಸಾರಿಗೆ ನೌಕರ ಕುಟುಂಬದ ಹಿನ್ನೆಲೆ ಇರುವ, ಇಲ್ಲಿನ ನೌಕರರ ಪಾಡು-ಬದುಕು-ಬವಣೆಗಳ ಬಗೆಗೆ ಚಾಲಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಘೋಷಿಸಿರುವ ಹಾಗೂ ನಮಗೆ ಹಿರಿಯ ಸಿಬ್ಬಂದಿಯೂ ಆಗಿದ್ದ ನಿಮ್ಮ ತಂದೆಯವರು ಅವರ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡಿರಬಹುದು. ಪ್ರಯತ್ನ-ಪರಿಶ್ರಮ ಫಲವಾಗಿ ಚಲನಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಆಗಿ ಜನಮಾನಸದಲ್ಲಿ ರಾರಾಜಿಸುತ್ತಿರುವ ತಾವು ಸಮಾಜ ಸೇವೆಯಲ್ಲೂ ಹಿಂದೆ ಬಿದ್ದಿಲ್ಲವೆಂಬುದು ನಮಗೆ ಹೆಮ್ಮೆಯ ವಿಷಯ. ಆದರೀಗ, ಸಾರಿಗೆ ನೌಕರರು ನಿರಂತರವಾಗಿ ತಮ್ಮ ಮೇಲಾಗುತ್ತಿರುವ ತಾರತಮ್ಯ ದೌರ್ಜನ್ಯ-ದಬ್ಬಾಳಿಕೆಗಳಿಂದ ಬೇಸತ್ತು ಹೋರಾಟಕ್ಕೆ ಕುಟುಂಬ ಸಮೇತರಾಗಿ ಬೀದಿಗಿಳಿದಿದ್ದಾರೆ. ಹೃದಯಹೀನ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಸೇವೆ ಮಾಡುವ ಕೈಗಳನ್ನು ಭಿಕ್ಷೆ ಬೇಡುವಂತೆ ಮಾಡಿದೆ. ಇದೂ ನಿಮಗೆ ತಿಳಿದಿರಬಹುದು. ಕಾನೂನಿ ಚೌಕಟ್ಟಿನಲ್ಲಿ ಮುಷ್ಕರ ಮೊರೆಹೋಗಿರುವ ನಾವು ಇಂತಹ ಸಂಕಷ್ಟದ ಸಮಯದಲ್ಲಿ ನಿಮ್ಮಿಂದ ಬೆಂಬಲ ನಿರೀಕ್ಷಿಸಬಹುದೇ? ನಿಮ್ಮ ಏಳಿಗೆನ್ನು ಹೆಮ್ಮೆಯಿಂದ ಸಂಭ್ರಮಿಸುವ ನಾವು, ನಿಮ್ಮ ಬೆಂಬಲವೂ ನಮ್ಮ ಹೋರಾಟಕ್ಕೆ ಧನಾತ್ಮಕ ಪರಿಣಾಮ ಬೀರಬಹುದೆಂಬ ನಂಬಿಕೆ ಹೊಂದಿದ್ದೇವೆ ಹಾಗೂ ನಿಮ್ಮ ಬೆಂಬಲ ನಿರೀಕ್ಷೆಯಲ್ಲಿ ಆಸೆಗಣ್ಣಿಂದ ಕಾಯುತ್ತಿರುತ್ತೇವೆ.

ವಂದನೆಗಳು….

ಇಂತಿ

ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ

ಕ ರಾ ಸಾ ನೌಕರರ ಒಕ್ಕೂಟ, ಕರ್ನಾಟಕ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಅಧಿಕೃತವಲ್ಲದೇ ಈ ಪತ್ರದ ಬಗ್ಗೆ ನಟ ಯಶ್ ಪ್ರತಿಕ್ರಿಯಿಸುತ್ತಾರಾ ಎಂಬ ಕುತೂಹಲ ಸಹಜವಾಗಿ ಕಾಡ್ತಿದೆ. ಇದುವರೆಗೂ ಯಾವ ಸಿನಿಮಾ ನಟರು ನೌಕರರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿಲ್ಲ. ಇಲ್ಲಿಂದ ಸಿನಿಮಾರಂಗಕ್ಕೂ ಈ ಮುಷ್ಕರ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆಯೂ ಕಾಡ್ತಿದೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ತಡರಾತ್ರಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ: 25 ಯುವತಿಯರು, ಡ್ರಗ್ಸ್ ಪತ್ತೆ

Spread the love ಬೆಂಗಳೂರು: ಬೆಂಗಳೂರಿನಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ತಂಡ ದಾಳಿ ನಡೆಸಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ