Breaking News
Home / ರಾಜ್ಯ / ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ನಂ.1: ಕಾಂಗ್ರೆಸ್‌ನ ಸುರ್ಜೇವಾಲಾ

ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ನಂ.1: ಕಾಂಗ್ರೆಸ್‌ನ ಸುರ್ಜೇವಾಲಾ

Spread the love

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ದೂರಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಶಾಸಕರನ್ನು ಖರೀದಿಸಿ ಬಂದ ಅನೈತಿಕ ಸರ್ಕಾರವಿದು. ಜನಾದೇಶದಿಂದ ರಚನೆಯಾದುದಲ್ಲ. ಅವ್ಯವಹಾರ, ಅಕ್ರಮಗಳಿಂದಲೇ ಕೂಡಿರುವ ಆಡಳಿತದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಚಿವರೊಬ್ಬರು ದೇಶದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬೆಳವಣಿಗೆ ಇಲ್ಲಿ ನಡೆದಿದೆ. ಆ ಸಚಿವ ಕೆ.ಎಸ್. ಈಶ್ವರಪ್ಪ ಸರಿಯೋ? ಮುಖ್ಯಮಂತ್ರಿ ಕ್ರಮ ಸರಿಯೋ? ಇಬ್ಬರಲ್ಲಿ ಯಾರಾದರೊಬ್ಬರು ರಾಜೀನಾಮೆ ಕೊಡಬೇಕು. ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ‘ಬಿ.ವೈ. ವಿಜಯೇಂದ್ರ ತೆರಿಗೆ’ ಎನ್ನುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ಇಷ್ಟಾದರೂ ಯಡಿಯೂರಪ್ಪ ಅಧಿಕಾರದಲ್ಲಿ ಉಳಿದಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

‘ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಅದು ಸರಿಯಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡು ತಿದ್ದಿಕೊಳ್ಳಬೇಕು. ಇಲ್ಲವಾದಲ್ಲಿ, ಆ ಸಚಿವರ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ವಿವಿಧ ಸಮಾಜಗಳು ಮೀಸಲಾತಿ ಕೇಳುತ್ತಿವೆ. ಆದರೆ, ಭರವಸೆ ಕೊಟ್ಟು ನಂತರ ಮರೆಯುವ ಕೆಲಸವನ್ನು ಸರ್ಕಾರ ಮರೆಯುತ್ತಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಮತ್ತು ಇದರಿಂದ ಜನರಿಗೆ ತೊಂದರೆ ಆಗಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ’ ಎಂದು ದೂರಿದರು.

‘ತೈಲ, ಅಡುಗೆ ಅನಿಲ ಸಿಲಿಂಡರ್ ದರ ಗಗನಕ್ಕೇರಿದೆ. ರಸಗೊಬ್ಬರ, ಕೀಟನಾಶಕ, ಕೃಷಿ ಪರಿಕರಗಳ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತಿದೆ. ಕಾರ್ಪೊರೇಟ್ ವಲಯದವರ ಸಾಲ ಮನ್ನಾ ಮಾಡುವ ಸರ್ಕಾರಕ್ಕೆ ರೈತರ ಸಾಲ ನೆನಪಾಗುತ್ತಿಲ್ಲ. ನಿರುದ್ಯೋಗವೇ ಈ ಸರ್ಕಾರದ ನೀತಿಯಾಗಿದೆ’ ಎಂದು ಆರೋಪಿಸಿದರು.

‘ಮಳೆಗಾಲದಲ್ಲಿ ಬಿದ್ದಿದ್ದ ಮನೆಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಲು ಬಂದಿದ್ದ ಮಹಿಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಎದುರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆ ಸಚಿವರು ಮತ ಯಾಚನೆಯಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.

‘ಲೋಕಸಭೆ ಉಪ ಚುನಾವಣೆಯು ಕರ್ನಾಟಕ ಮತ್ತು ದೇಶದ ರಾಜಕೀಯ ದಿಕ್ಸೂಚಿ ಆಗಲಿದೆ. ಬಿಜೆಪಿಯನ್ನು ಮನೆಗೆ ಕಳುಹಿಸಲು ಆದೇಶ ನೀಡುವುದಕ್ಕಾಗಿ ಜನರು ತಯಾರಾಗಿದ್ದಾರೆ. ಬದಲಾವಣೆ ಬಯಸಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ