Home / ರಾಜ್ಯ / ಸರ್ಕಾರಿ ಬಸ್‌ಗಳಿಗೆ ಪರ್ಯಾಯವಾಗಿ ಹಲವೆಡೆ ಖಾಸಗಿ ಬಸ್ ಸಂಚಾರ ಆರಂಭ

ಸರ್ಕಾರಿ ಬಸ್‌ಗಳಿಗೆ ಪರ್ಯಾಯವಾಗಿ ಹಲವೆಡೆ ಖಾಸಗಿ ಬಸ್ ಸಂಚಾರ ಆರಂಭ

Spread the love

ಬೆಂಗಳೂರು: ಕೋವಿಡ್ ಸಂಕಷ್ಟದ ಕಾಲದಲ್ಲಿ ಸರ್ಕಾರಿ ಸಾರಿಗೆ ನೌಕರರ ಮುಷ್ಕರದ ಬಿಸಿ ಜನರಿಗೆ ತಟ್ಟುತ್ತಿದೆ. ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರಿ ಸಾರಿಗೆ ನೌಕರರ ಒಕ್ಕೂಟ ಪಟ್ಟು ಹಿಡಿದಿದೆ. ಆದರೆ, ಸದ್ಯ ಆರನೇ ವೇತನ ಆಯೋಗ ಜಾರಿಗೆ ಸಾಧ್ಯವೇ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಪಟ್ಟು ಸಡಿಲಿಸದ ನೌಕರರು ಮುಷ್ಕರ ಆರಂಭಿಸಿದ್ದಾರೆ.

ರಾಜ್ಯದಾದ್ಯಂತ ಸರ್ಕಾರಿ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿಲ್ಲ. ಹೀಗಾಗಿ, ರಾಜ್ಯದ ವಿವಿಧೆಡೆ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಿದೆ.

ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಬಂದು ನಿಂತಿದ್ದು, ಪ್ರಯಾಣಿಕರು ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.

ಬೆಂಗಳೂರಿನಲ್ಲೇ ಮೂರು ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ಓಡಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಬೇರೆ ಜಿಲ್ಲೆಗಳಲ್ಲೂ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಸಾರಿಗೆ ಇಲಾಖೆ ಅನುಮತಿ ನೀಡಿದೆ. ಮುಷ್ಕರ ಇದೆ ಎಂಬ ಕಾರಣಕ್ಕೆ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಖಾಸಗಿ ಬಸ್‌ಗಳು ಸರ್ಕಾರಿ ಬಸ್‌ ನಿಲ್ದಾಣಗಳಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವನ್ನೂ ನೀಡಲಾಗಿದೆ. ಮುಷ್ಕರಕ್ಕೆ ಹೆದರದೆ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ರೈಲುಗಳ ಸೇವೆ ಮತ್ತು ಬೆಂಗಳೂರಿನಲ್ಲಿ ಮೆಟ್ರೊ ರೈಲು ಸೇವೆಯನ್ನೂ ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದಿಂದ ಖಾಸಗಿ ಬಸ್’ಗಳ ಸಂಚಾರ ಆರಂಭವಾಗಿದೆ.

ಜಿಲ್ಲಾಡಳಿತ, ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಗದಗ ಹಾಗೂ ವಿವಿಧ ಭಾಗಗಳಿಗೆ ಖಾಸಗಿ ಬಸ್’ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆಯೂ ಖಾಸಗಿ ಬಸ್ ಸಂಚಾರ ನಡೆಸಿವೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಬಸ್ ನಿಲ್ದಾಣದ ಒಳಗಡೆಯಿಂದಲೇ ಖಾಸಗಿ ಬಸ್’ಗಳು ಸಂಚಾರ ನಡೆಸುತ್ತಿವೆ.

ಬೆಳಗಾವಿ: ಮುಷ್ಕರ ನಡೆಸುತ್ತಿರುವ ಸರ್ಕಾರಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದೆ ಇರುವುದರಿಂದಾಗಿ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವೇ ಖಾಸಗಿ ಬಸ್‌ಗಳು ಹುಬ್ಬಳ್ಳಿ- ಬೆಳಗಾವಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಅವುಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ.

ಕಲಬುರ್ಗಿ: ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ಆಯ್ದ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಮುಷ್ಕರದ ಮಾಹಿತಿ ಇದ್ದುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ.

ಕೆಲಸ ಖಾಸಗಿ ಬಸ್ ಗಳು ಹುಮನಾಬಾದ್-ಬೀದರ್, ಬಳ್ಳಾರಿ ಮಾರ್ಗದಲ್ಲಿ ಸಂಚಾರ ನಡೆಸಿದವು.

ಸಾಧ್ಯವಾದಷ್ಟು ಮಾರ್ಗಗಳಲ್ಲಿ ಸಾರಿಗೆ ‌ಸಂಸ್ಥೆ ಬಸ್ ಓಡಿಸಲು ಸಂಸ್ಥೆ ಅಧಿಕಾರಿಗಳು ಪ್ರಯತ್ನ ‌ಮುಂದುವರಿಸಿದ್ದಾರೆ. ಆದರೆ, ಸಿಬ್ಬಂದಿ ‌ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.

ಬಾಗಲಕೋಟೆ: ಬಸ್ ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ‌ ಅವಲಂಬಿಸಬೇಕಿದೆ.

ಗೋವಾ ಪಣಜಿಯಿಂದ ಮುಂಜಾನೆ ಬಂದಿಳಿದ ಇಳಕಲ್ ಗೆ ಹೋಗಬೇಕಿದ್ದ ಕುಟುಂಬವೊಂದು ಬಾಗಲಕೋಟೆ ಬಸ್ ನಿಲ್ದಾಣದಲ್ಲಿಯೇ ಉಳಿದಿದೆ. ಟಂ ಟಂ ಸೇರಿದಂತೆ ಖಾಸಗಿ ವಾಹನಗಳ ಚಾಲಕರು ಊರಿಗೆ ಕರೆದೊಯ್ಯಲು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಮಕ್ಕಳು-ಮರಿ ಕಟ್ಟಿಕೊಂಡು ಬಂದಿದ್ದೇವೆ. ಏನು ಮಾಡುವುದು ಎಂದು ಕುಟುಂಬದ ಸದಸ್ಯೆ ರೇಖಾ ಅಳಲು ತೋಡಿಕೊಂಡರು.

ಬಾಗಲಕೋಟೆ ಬಸ್ ನಿಲ್ದಾಣದಿಂದ ನಸುಕಿನ ಐದು ಗಂಟೆಯಿಂದ ಕಾರ್ಯಾಚರಣೆ ನಡೆಸಬೇಕಿದ್ದ 16 ಬಸ್ ಗಳು ರಸ್ತೆಗೆ ಇಳಿಯಲಿಲ್ಲ.

ಉಡುಪಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿಲ್ಲ.

ಖಾಸಗಿ ಬಸ್‌ಗಳ ಸಂಚಾರ ಎಂದಿನಂತಿದೆ. ಜಿಲ್ಲೆಯ ಎಲ್ಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಇರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡುವ ಹಾಗೂ ಉಡುಪಿ ಮಂಗಳೂರು ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿಲ್ಲ.

ಹೊರ ಜಿಲ್ಲೆಗಳಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿದ್ದ ಕೆಲವು ಪ್ರಯಾಣಿಕರಿಗೆ ಸಮಸ್ಯೆಯಾಯಿತು.

ಚಿತ್ರದುರ್ಗ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಮೂರು ಬಸ್ ಗಳು ಪ್ರಯಾಣಿಕರಿಗೆ ಬುಧವಾರ ಸೇವೆ ಒದಗಿಸಿದ್ದು, ಪೊಲೀಸ್ ಭದ್ರತೆಯಲ್ಲಿ ಸಂಚರಿಸಿದವು.

ಪೂನಾದಿಂದ ದಾವಣಗೆರೆ ಮಾರ್ಗವಾಗಿ ಬಂದಿದ್ದ ವೋಲ್ವೊ ಬಸ್ ಬೆಂಗಳೂರಿಗೆ ತೆರಳಿತು. ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರಿಂದ ಕೊಟ್ಟೂರು ಮಾರ್ಗವಾಗಿ ಹೂವಿನಹಡಗಲಿ ಹಾಗೂ ಮತ್ತೊಂದು ಬಸ್ ಭರಮಸಾಗರ ಮಾರ್ಗವಾಗಿ ದಾವಣಗೆರೆಗೆ ಸಂಚರಿಸಿತು.

ಬಹುತೇಕ ನೌಕರರು ಕರ್ತವ್ಯಕ್ಕೆ ಗೈರು ಹಾಜರು ಆಗಿದ್ದಾರೆ. ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಜನರಿಲ್ಲದೇ ಬಿಕೊ ಎನ್ನುತ್ತಿದೆ. ಖಾಸಗಿ ಬಸ್ ಸಂಚಾರ ಎಂದಿನಂತಿದೆ. ಕೆ ಎಸ್ ಆರ್ ಟಿ ಸಿ ಬಸ್ ನಡುವೆ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಖಾಸಗಿ ಬಸ್ ಗಳು ಸೇವೆ ಒದಗಿಸುತ್ತಿವೆ. ಖಾಸಗಿ ಬಸ್ಸುಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ

ಕೆಲಸಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ನಿಲುವಿನ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ

ಕಾರವಾರದಲ್ಲಿ ಟೆಂಪೋಗಳ ಸಂಚಾರ ಎಂದಿನಂತೆ ಇದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ