Breaking News
Home / ನವದೆಹಲಿ / ಕೃಷಿ ಕಾನೂನುಗಳ ವಾಪಾಸಾತಿಗೆ ಒತ್ತಾಯಿಸಿ ಇಂದು ಭಾರತ್ ಬಂದ್‌

ಕೃಷಿ ಕಾನೂನುಗಳ ವಾಪಾಸಾತಿಗೆ ಒತ್ತಾಯಿಸಿ ಇಂದು ಭಾರತ್ ಬಂದ್‌

Spread the love

ನವದೆಹಲಿ, (ಮಾ. 26): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ‌ ಹೋರಾಟದ ಮುಂದುವರೆದ ಭಾಗವಾಗಿ ಇಂದು (ಮಾರ್ಚ್ 26ರಂದು) ಭಾರತ್ ಬಂದ್​ಗೆ ಕರೆ ಕೊಟ್ಟಿದ್ದಾರೆ.

ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಆರಂಭವಾಗಿದ್ದ 2020ರ ನವೆಂಬರ್ 26ರಂದು; ಬರೊಬ್ಬರಿ‌ ನಾಲ್ಕು ತಿಂಗಳ ಹಿಂದೆ.‌ ಹಾಗಾಗಿ ನಾಲ್ಕು ತಿಂಗಳು ಪೂರೈಸುತ್ತಿರುವ ಹೊತ್ತಿನಲ್ಲಿ ರೈತ ಸಂಘಟನೆಗಳು ಭಾರತ್ ಬಂದ್ ಮಾಡುವಂತೆ ಕರೆ ಕೊಟ್ಟಿವೆ. 2020ರ ನವೆಂಬರ್ 26ರಿಂದ ಈವರೆಗೆ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ 11 ಸುತ್ತಿನ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿ ಬಳಿಕ ಅತ್ಯಂತ ಪ್ರಭಾವಿ ಎಂದು ಹೇಳಲಾಗುವ ಗೃಹ ಸಚಿವ ಅಮಿತ್ ಶಾ ಕೂಡ ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದರು.‌ ಆದರೆ ಈ ಯಾವ ಮಾತುಕತೆಗಳೂ ಫಲ ನೀಡಿಲ್ಲ.‌ ರೈತರು ‘ತಮ್ಮ ಪಾಲಿಗೆ ಮರಣಶಾಸನದಂತಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಿರಿ’ ಎಂದೇ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ‘ಬೇಕಿದ್ದರೆ ಕಾನೂನುಗಳಲ್ಲಿ ಮಾರ್ಪಾಟು ಮಾಡಲಾಗುವುದು, ಇಡೀ ಕಾನೂನುಗಳನ್ನು ವಾಪಸ್ ಪಡೆಯಲು ಮಾತ್ರ ಸಾಧ್ಯವಿಲ್ಲ’ ಎಂದು ಹೇಳುತ್ತಿದೆ. ಹೀಗೆ ಎರಡೂ ಕಡೆಯವರು ತಮ್ಮ‌ ತಮ್ಮ ನಿಲುವನ್ನು ಸಡಿಲಿಸಲು ಒಪ್ಪದ‌ ಕಾರಣ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡುತ್ತಾ ‘ನಮ್ಮ ಸರ್ಕಾರ ರೈತರ ಜೊತೆ ಮಾತನಾಡಲು ಸಿದ್ದ ಇದೆ’ ಎಂದಿದ್ದರು. ಆದರೆ ಈವರೆಗೆ ಕೇಂದ್ರ ಕೃಷಿ ಇಲಾಖೆಯಿಂದ ಪ್ರತಿಭಟನಾನಿರತ ರೈತರಿಗೆ ಪತ್ರ ತಲುಪಿಲ್ಲ.‌ ಹೀಗೆ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ರೈತ ಹೋರಾಟದ ನೇತೃತ್ವದ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಇದೇ ಜನವರಿ 26ರಂದು (ಹೋರಾಟ ಶುರುವಾದ ಎರಡು ತಿಂಗಳಿಗೆ) ‘ದೆಹಲಿ ಚಲೋ’ಗೆ ಕರೆ‌ ಕೊಟ್ಟಿತ್ತು. ಆಗ ಕೆಂಪು ಕೋಟೆಯಲ್ಲಿ ನಡೆದ‌ ಅಹಿತಕರ ಘಟನೆಯನ್ನೇ ನೆಪ ಮಾಡಿಕೊಂಡ‌ ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ದೆಹಲಿ ಗಡಿಗಳಿಂದ ಪ್ರತಿಭಟನಾಕಾರರನ್ನು ವಾಪಸ್ ಕಳಿಸಲು ಪ್ರಯತ್ನಿಸಿತು. ಇದ್ಯಾವುದಕ್ಕೂ ಬಗ್ಗದೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.

40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಈಗ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವನ್ನು ದೇಶದ ಬೇರೆ ಭಾಗಗಳಿಗೂ ಕೊಂಡೊಯ್ಯಬೇಕು ಎಂದು ‘ರೈತ ಮಹಾಪಂಚಾಯತ್’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜೊತೆಗೆ ದೆಹಲಿ ಗಡಿ ಹಾಗೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯೂ ಪ್ರತಿಭಟನೆ ಮಾಡಬೇಕೆಂದು ನಿಶ್ಚಯಿಸಿದೆ. ಅದಕ್ಕಾಗಿಯೇ ಪ್ರತಿಭಟನೆಗೆ ನಾಲ್ಕು ತಿಂಗಳು ತುಂಬುವ ಸಂದರ್ಭದಲ್ಲಿ ಭಾರತ್ ಬಂದ್ ಗೂ ಕರೆ ನೀಡಿದೆ. ಭಾರತ್ ಬಂದ್ ಬೆಂಬಲಿಸುವಂತೆ ವಿವಿಧ ಸಂಘಟನೆಗಳನ್ನು ಮನವಿ ಮಾಡಿಕೊಂಡಿದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ