Breaking News
Home / ರಾಜ್ಯ / ಮತ್ತೆ ಲಾಕ್‌ಡೌನ್‌ ಆಗದಿರಲಿ; ಸಾರ್ವಜನಿಕರ ಪಾತ್ರ ಮುಖ್ಯ

ಮತ್ತೆ ಲಾಕ್‌ಡೌನ್‌ ಆಗದಿರಲಿ; ಸಾರ್ವಜನಿಕರ ಪಾತ್ರ ಮುಖ್ಯ

Spread the love

ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಎಲ್ಲೆ ಮೀರುತ್ತಿದ್ದು, ಒಂದೊಂದೇ ಜಿಲ್ಲೆಗಳು ಲಾಕ್‌ಡೌನ್‌ಗೆ ಮೊರೆ ಹೋಗುತ್ತಿವೆ. ಕರ್ನಾಟಕದಲ್ಲಿ ಸದ್ಯಕ್ಕೆ ಅಂಥ ಪರಿಸ್ಥಿತಿ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲವಾದರೂ ಇದು ಅಷ್ಟೊಂದು ಸರಳವಾದ ವಿಚಾರ ವಂತೂ ಅಲ್ಲ. ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಏರಿಕೆ ಯಾಗುತ್ತಿರುವುದನ್ನು ಗಮನಿಸಿದರೆ ನಾವು ಇನ್ನೊಮ್ಮೆ ಲಾಕ್‌ಡೌನ್‌ನತ್ತ ಮುಖ ಮಾಡದೆ ಇರುವಂತೆ ನೋಡಿಕೊಳ್ಳಬೇಕಾಗಿದೆ.

ಇದನ್ನೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒತ್ತಿ ಒತ್ತಿ ಹೇಳುತ್ತಿರುವುದು. ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳುವ ಮೂಲಕ ನಾವು ಇನ್ನೊಂದು ಲಾಕ್‌ಡೌನ್‌, ಕರ್ಫ್ಯೂನಂಥ ಪರಿಸ್ಥಿತಿಯನ್ನು ತಂದುಕೊಳ್ಳುವುದು ಬೇಡ ಎಂದು ಜನತೆಯಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ. ಈಗಾಗಲೇ ಕೆಲವು ಕಠಿನ ನಿರ್ಬಂಧಗಳನ್ನು ಸರಕಾರ ಹೇರಿದೆ. ಕೊರೊನಾ ನಿಯಂತ್ರಣ ಮತ್ತು ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ| ಸುಧಾಕರ್‌ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ಹೆಜ್ಜೆ ಇಟ್ಟಿರುವುದು ಸ್ತುತ್ಯರ್ಹ. ಕೊಳ್ಳೆ ಹೊಡೆಯುವ ಮೊದಲೇ ದಿಡ್ಡಿ ಬಾಗಿಲು ಹಾಕುವುದು ಸೂಕ್ತ.

ಜನವರಿ ತಿಂಗಳ ಅನಂತರ ಇದೇ ಮೊದಲ ಬಾರಿ ಸೋಂಕಿನ ಸಂಖ್ಯೆ ಒಂದು ಸಾವಿರದ ಆಸುಪಾಸಿನಲ್ಲಿರುವುದು ಕಡೆಗಣಿಸುವಂಥ ವಿಚಾರವಂತೂ ಅಲ್ಲ. ಫೆಬ್ರವರಿ ಕೊನೆಯ ವಾರ ನಿತ್ಯ ಸರಾಸರಿ 400ರಷ್ಟಿದ್ದ ಪ್ರಕರಣಗಳು ಮಾರ್ಚ್‌ ಮೊದಲ ವಾರ 500 ದಾಟಿದ್ದರೆ, ಈಗ 900 ದಾಟಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದಂತೂ ಸತ್ಯ. ಇನ್ನೊಂದು ಅಘಾತಕಾರಿ ಅಂಶವೆಂದರೆ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಿಸಲಾಗಿಲ್ಲ. ಅಂದರೆ ಪರೀಕ್ಷೆ ಸಂಖ್ಯೆ ಕಡಿಮೆ ಇದ್ದಾಗಲೇ ಸೋಂಕು ಏರಿಕೆ ಕಂಡುಬರುತ್ತಿದೆ ಎನ್ನುವುದು ಆತಂಕಕಾರಿಯೇ. ದೇಶದಲ್ಲಿ ಕಳೆದ ಒಂದೇ ವಾರದಲ್ಲಿ ಶೇ. 33ರಷ್ಟು ಏರಿಕೆ ಕಂಡುಬಂದಿದೆ. ರವಿವಾರದಿಂದ ಸೋಮವಾರದೊಳಗಿನ 24 ಗಂಟೆಗಳಲ್ಲಿ 26,291ರಷ್ಟು ಸೋಂಕು ದಾಖಲಾಗಿರುವುದು ಗಮನಾರ್ಹವಾದುದು. ಇದು 84 ದಿನಗಳಲ್ಲೇ ಗರಿಷ್ಠವಾದುದು.

ಸರಕಾರ ಈಗಲೇ ಗಂಭೀರವಾಗಿ ಪರಿಗಣಿಸಿ ಅಗತ್ಯ ಇರುವ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಜತೆ ಜತೆಗೆ, ಸಾರ್ವಜನಿಕರೂ ಈ ನಿಟ್ಟಿನಲ್ಲಿ ಸರಕಾರದ ಜತೆ ಕೈಜೋಡಿಸಬೇಕು. ಎಲ್ಲಕ್ಕೂ ಸರಕಾರವನ್ನೇ ನೆಚ್ಚಿಕೊಂಡು ಅಥವಾ ಸರಕಾರದ ಮೇಲೆ ಭಾರ ಹಾಕಿ ಕೂರುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ ಅಲ್ಲ. ಸರಕಾರ ವಿಧಿಸುವ ನಿಯಮಗಳ ಪಾಲನೆಗೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು. ಕೊರೊನಾ ಮಾರ್ಗಸೂಚಿಯಲ್ಲಿ ಉಲ್ಲೇಖೀಸಲಾಗಿರುವ ಕೆಲವು ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕಾಗುತ್ತದೆ. ಇಲ್ಲದೆ ಇದ್ದರೆ ಕಳೆದ ಮಾರ್ಚ್‌, ಎಪ್ರಿಲ್‌, ಮೇ ತಿಂಗಳ ಕರಾಳ ದಿನಗಳನ್ನು ಇನ್ನೊಮ್ಮೆ ಆಹ್ವಾನಿಸಿದಂತಾಗುತ್ತದೆ.

ಅದಕ್ಕೆ ಅವಕಾಶ ಕೊಡಬಾರದು ಎಂದಿದ್ದರೆ ಅದು ಬರಿ ಸರಕಾರದ ಹೊಣೆಯಲ್ಲ; ಪ್ರತಿಯೊಬ್ಬ ನಾಗರಿಕನ ಹೊಣೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ