Breaking News
Home / ಜಿಲ್ಲೆ / ಬೆಂಗಳೂರು / ಸೈಬರ್‌ ಲೋಕದಲ್ಲಿ ‘ಬೆತ್ತಲೆ’ ಬ್ಲ್ಯಾಕ್‌ಮೇಲ್

ಸೈಬರ್‌ ಲೋಕದಲ್ಲಿ ‘ಬೆತ್ತಲೆ’ ಬ್ಲ್ಯಾಕ್‌ಮೇಲ್

Spread the love

ಬೆಂಗಳೂರು: ಅವರೊಬ್ಬ ಗ್ರಾನೈಟ್ ಉದ್ಯಮಿ. ಯುವತಿ ಹೆಸರಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಆಕೆಯ ಗುಂಗಿನಲ್ಲೇ ದಿನ ಕಳೆಯಲಾರಂಭಿಸಿದ್ದವರು. ಅಂದು ರಾತ್ರಿ ಏಕಾಏಕಿ ವಿಡಿಯೊ ಕರೆ ಮಾಡಿ ಸಲುಗೆಯಿಂದ ಮಾತನಾಡಿದ್ದ ಯುವತಿ, ‘ನಿಮ್ಮ ದೇಹ ನೋಡಬೇಕು’ ಎಂದು ಹೇಳಿ ಉದ್ಯಮಿ ಬಟ್ಟೆ ಬಿಚ್ಚಿಸಿ ಬೆತ್ತಲಾಗಿಸಿದ್ದಳು. ಬೆತ್ತಲೆ ದೃಶ್ಯವನ್ನು ಸದ್ದಿಲ್ಲದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಮರುದಿನದಿಂದಲೇ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದಳು.

ಇದು ಗ್ರಾನೈಟ್ ಉದ್ಯಮಿಯೊಬ್ಬರ ಕಥೆಯಲ್ಲ. ಕೆಲ ಗಣ್ಯರು, ಕೆಲ ಉದ್ಯಮಿಗಳು, ಕೆಲ ರಾಜಕಾರಣಿಗಳು… ಹೀಗೆ ನೂರಾರು ಮಂದಿ, ಸೈಬರ್‌ ಲೋಕದಲ್ಲಿ ಬೆತ್ತಲೆ ಆಗಿ ಬ್ಲ್ಯಾಕ್‌ಮೇಲ್‌ ಜಾಲದಲ್ಲಿ ಸಿಲುಕುತ್ತಿದ್ದಾರೆ. ಇಂಥ ಕೃತ್ಯದಿಂದ ನೊಂದವರು, ಸೈಬರ್‌ ಕ್ರೈಂ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ಕೆಲವರಂತೂ ಮರ್ಯಾದೆಗೆ ಅಂಜಿ ಕೇಳಿದಷ್ಟು ಹಣ ಕೊಟ್ಟು ಸುಮ್ಮನಾಗುತ್ತಿದ್ದಾರೆ.

ನಗರದ ಸೈಬರ್‌ ಕ್ರೈಂ ಠಾಣೆಗಳಲ್ಲಿ ದಾಖಲಾಗುತ್ತಿರುವ ‘ಬೆತ್ತಲೆ ಬ್ಲ್ಯಾಕ್‌ಮೇಲ್‌’ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಯಾರದ್ದೋ ಯುವತಿಯ ಫೋಟೊ ಹಾಗೂ ಯಾವುದೋ ಜಾಲತಾಣದಲ್ಲಿರುವ ನೀಲಿಚಿತ್ರಗಳನ್ನು ಬಳಸಿಕೊಂಡು ನಕಲಿ ಐ.ಡಿ.ಗಳನ್ನು ಸೃಷ್ಟಿಸಿ ಕೃತ್ಯ ಎಸಗುತ್ತಿರುವ ವಂಚಕರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿದ್ದ ಸೈಬರ್ ವಂಚನೆ, ಇದೀಗ ಎಲ್ಲ ಕ್ಷೇತ್ರಕ್ಕೂ ವ್ಯಾಪಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು ವಂಚಿಸುವವರ ದೊಡ್ಡ ಗ್ಯಾಂಗ್‌ ಇದೆ. ಅಂಥವರೇ ಇದೀಗ ಬೆತ್ತಲೆ ಬ್ಲ್ಯಾಕ್‌ಮೇಲ್‌ ಶುರು ಮಾಡಿದ್ದಾರೆ’ ಎಂದು ಸೈಬರ್‌ ಠಾಣೆಯೊಂದರ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ 10ರಿಂದ 20 ಪ್ರಕರಣಗಳು ದಾಖಲಾಗುತ್ತಿವೆ. ಯುವತಿಯರ ಫೋಟೊ ಇರುವ ಖಾತೆಗಳಿಂದ ಪರಿಚಯ ಮಾಡಿಕೊಂಡು ದೂರುದಾರರನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದೆ. ಯುವತಿಯೇ ಬೆತ್ತಲೆಯಾದ ರೀತಿಯಲ್ಲಿ ನೀಲಿಚಿತ್ರಗಳನ್ನು ತೋರಿಸಿ, ದೂರುದಾರರನ್ನು ಪ್ರಚೋದಿಸಿ ಬೆತ್ತಲೆಗೊಳಿಸುವ ಚಾಲಾಕಿಗಳು ಇದ್ದಾರೆ’ ಎಂದೂ ಹೇಳಿದರು.

ಹೇಗೆ ಕೃತ್ಯ: ‘ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆಯಪ್‌ ಹಾಗೂ ಹಲವು ಆಯಪ್‌ಗಳ ಮೂಲಕ ಅಪರಿಚಿತ ಯುವತಿಯಿಂದ ಫ್ರೆಂಡ್ ರಿಕ್ವೆಸ್ ಬರುತ್ತದೆ. ಅದನ್ನು ಸ್ವೀಕರಿಸುತ್ತಿದ್ದಂತೆ, ‘ಹಾಯ್ ಡಿಯರ್’ ಸೇರಿ ಹಲವು ಸಂದೇಶಗಳು ಬರಲಾರಂಭಿಸುತ್ತವೆ. ಯುವತಿ ಎಂದು ನಂಬಿ ಮುಂದುವರಿದರೆ, ಜಾಲಕ್ಕೆ ಸಿಲುಕಿದಂತೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಮೂರ್ನಾಲ್ಕು ದಿನ ನಿರಂತರವಾಗಿ ಚಾಟಿಂಗ್ ಮಾಡುವ ಯುವತಿ, ಸಲುಗೆಯಿಂದ ಮಾತನಾಡುತ್ತಾಳೆ. ಏಕಾಏಕಿ ರಾತ್ರಿ ವಿಡಿಯೊ ಕರೆ ಮಾಡಿ, ಯುವತಿಯ ನಗ್ನ ವಿಡಿಯೊ ತೋರಿಸುತ್ತಾಳೆ. ಜೊತೆಗೆ, ‘ನೀವು ತುಂಬಾ ಚೆನ್ನಾಗಿದ್ದೀರಾ. ನಿಮ್ಮ ದೇಹ ನೋಡಬೇಕು’ ಎಂದು ಇಚ್ಛಿಸುತ್ತಾಳೆ. ಅವಳ ಮಾತಿಗೆ ಮರುಳಾದ ವ್ಯಕ್ತಿ, ಕೆಲ ನಿಮಿಷಗಳಲ್ಲೇ ಬಟ್ಟೆ ಕಳಚಿ ಬೆತ್ತಲಾಗುತ್ತಾನೆ. ಅಂಗಾಂಗಗಳನ್ನೂ ತೋರಿಸುತ್ತಾನೆ. ಕೆಲ ಹೊತ್ತಿನ ಬಳಿಕ ಕರೆ ಕಡಿತವಾಗುತ್ತದೆ’ ಎಂದೂ ಅಧಿಕಾರಿ ಹೇಳಿದರು.

ಮರುದಿನದಿಂದಲೇ ಬ್ಲ್ಯಾಕ್‌ಮೇಲ್: ‘ರಾತ್ರಿ ಚಿತ್ರೀಕರಿಸಿಕೊಂಡ ಬೆತ್ತಲೆ ವಿಡಿಯೊ ಇಟ್ಟುಕೊಂಡು ಸಂತ್ರಸ್ತರನ್ನು ಬ್ಲ್ಯಾಕ್‌ಮೇಲ್ ಮಾಡುವ ಕೆಲಸ ಮರುದಿನದಿಂದಲೇ ಆರಂಭವಾಗುತ್ತದೆ. ‘ಕೂಡಲೇ ₹25 ಸಾವಿರ ಖಾತೆಗೆ ಹಾಕಿ. ಇಲ್ಲದಿದ್ದರೆ, ಈ ವಿಡಿಯೊ ಯೂಟ್ಯೂಬ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗುವುದು’ ಎಂದು ಬೆದರಿಕೆಯನ್ನೂ ವಂಚಕರು ಹಾಕುತ್ತಾರೆ. ಅದಕ್ಕೆ ಹೆದರಿ ಕೆಲವರು ಹಣ ಕೊಡುತ್ತಾರೆ. ಹಣ ಪಡೆದ ನಂತರ ವಂಚಕರು, ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ. ಅವಾಗಲೇ ಸಂತ್ರಸ್ತರು ಠಾಣೆಗೆ ಬಂದು ದೂರುನೀಡುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಇ-ಮೇಲ್‌ ಕಳುಹಿಸಿದರೂ ಪ್ರತಿಕ್ರಿಯೆ ವಿಳಂಬ’

‘ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಇತರೆ ಆಯಪ್‌ಗಳ ಕೇಂದ್ರ ಕಚೇರಿಗಳು ವಿದೇಶದಲ್ಲಿವೆ. ಪ್ರಕರಣ ದಾಖಲಾಗುತ್ತಿದ್ದಂತೆ, ನಕಲಿ ಖಾತೆ ಬಗ್ಗೆ ಮಾಹಿತಿ ಕೋರಿ ಕಂಪನಿಗಳಿಗೆ ಇ-ಮೇಲ್ ಕಳುಹಿಸಲಾಗುತ್ತಿದೆ. ಆದರೆ, ಪ್ರತಿಕ್ರಿಯೆ ಬರುವುದು ತಡವಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸೈಬರ್‌ ಲೋಕದಲ್ಲಿ ಆಗುವ ಅಪರಾಧಗಳ ಪತ್ತೆಗೆ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಆರೋಪಿಗಳ ಸುಳಿವು ಪತ್ತೆಯೇ ದೊಡ್ಡ ಸವಾಲು. ನಕಲಿ ಖಾತೆಯಲ್ಲಿರುವ ಫೋಟೊ ಆಧರಿಸಿ ಯಾರನ್ನಾದರೂ ವಶಕ್ಕೆ ಪಡೆದರೆ, ಅವರು ಅಮಾಯಕರಾಗಿರುತ್ತಾರೆ. ಸೈಬರ್‌ ಲೋಕದಲ್ಲಿ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು. ಅದುವೇ ಅಪರಾಧ ತಡೆಗೆ ಅಸ್ತ್ರ’ ಎಂದೂ ತಿಳಿಸಿದರು.

ಜಾಲಕ್ಕೆ ಸಿಲುಕದಿರಲು ಹೀಗೆ ಮಾಡಿ

ಅಪರಿಚಿತರಿಂದ ಬರುವ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ಇರಲಿ

ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಖಾತೆಗಳನ್ನು, ಪ್ರೊಫೈಲ್‌ ಪ್ರೈವೇಸಿ ಆಯ್ಕೆ ಬಳಸಿ ಲಾಕ್ ಮಾಡಿ

ಅಪರಿಚಿತರಿಂದ ಬರುವ ವಿಡಿಯೊ ಕರೆಗಳ ಬಗ್ಗೆ ಜಾಗೃತಿ ಇರಲಿ

ಅಪರಿಚಿತರು ಯಾರಾದರೂ ಅನುಮಾನಾಸ್ಪದ ರೀತಿಯಲ್ಲಿ ಸಂದೇಶ ಕಳುಹಿಸಿದರೆ ಪೊಲೀಸರಿಗೆ ಮಾಹಿತಿ ನೀಡಿ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ