Breaking News
Home / ರಾಜಕೀಯ / ಸಿಗಂದೂರು | ಲಾಂಚ್ ಅವ್ಯವಸ್ಥೆಗೆ ಕೊನೆ ಎಂದು…?

ಸಿಗಂದೂರು | ಲಾಂಚ್ ಅವ್ಯವಸ್ಥೆಗೆ ಕೊನೆ ಎಂದು…?

Spread the love

ಹೊಳೆಬಾಗಿಲು (ತುಮರಿ): ಶರಾವತಿ ಮುಳುಗಡೆ ಸಂತ್ರಸ್ತರು ಸೇರಿದಂತೆ ಕರೂರು – ಬಾರಂಗಿ ಹೋಬಳಿಯ ಜನರಿಗೆ ಆದ್ಯತೆ ನೀಡದೇ, ಈ ಭಾಗದ ಜನರ ಸಂಪರ್ಕ ಕೊಂಡಿಯಾಗಿರುವ ‘ಸಿಗಂದೂರು ಲಾಂಚ್’ ಸಮರ್ಪಕ ಸೇವೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಿರುದ್ಧ ಸ್ಥಳೀಯರು ದೂರಿದ್ದಾರೆ.

ಶರಾವತಿ ಕಣಿವೆಯ ತುಮರಿ, ಬ್ಯಾಕೋಡು, ಕಟ್ಟಿನಕಾರು ಭಾಗದ 30,000ಕ್ಕೂ ಅಧಿಕ ಜನರು ದಿನನಿತ್ಯದ ಕೆಲಸಗಳಿಗೆ, ಕೋರ್ಟ್, ಕಚೇರಿ ಕಾರ್ಯಗಳಿಗೆ ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸಿಲು ಲಾಂಚ್ ಮೂಲಕವೇ ಸಾಗಬೇಕಾದ ಅನಿವಾರ್ಯತೆ ಇದೆ. ಆದರೆ ಜನರಿಗೆ ಅನುಕೂಲಕ್ಕೆ ತಕ್ಕಂತೆ ಲಾಂಚ್ ಸೇವೆ ಸಿಗದೇ ಪರದಾಡುತ್ತಿದ್ದಾರೆ. ತಾಂತ್ರಿಕ ದೋಷ ಕಾರಣ ನೀಡುವುದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಾಕಷ್ಟು ಅಡ್ಡಿಯಾಗಿದೆ ಎಂದು ಗ್ರಾಮದ ಕೆ.ಜಯಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೇವೆ ನಿಲ್ಲಿಸಿದ ಎರಡು ಲಾಂಚ್: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸಿಗಂದೂರು ದೇವಿ ದರ್ಶನ ಪಡೆಯಲು ಟಿ.ಟಿ., ಬಸ್, ಕಾರು, ದ್ವಿಚಕ್ರ ವಾಹನಗಳ ಮೂಲಕ ಸಾವಿರಾರು ಮಂದಿ ಆಗಮಿಸುತ್ತಿದ್ದು, ಭಾನುವಾರ ಸಹ ನೂರಾರು ವಾಹನಗಳು ಸುಡು ಬಿಸಿಲಿನಲ್ಲಿ ಅಂಬಾರಗೋಡ್ಲು ದಡದಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು. ಆದರೆ ಜನರಿಗೆ ಸೇವೆ ನೀಡಬೇಕಾದ ಎರಡು ಲಾಂಚ್‌ಗಳು ತಾಂತ್ರಿಕ ದೋಷದಿಂದ ಏಕಾಏಕಿ ಸ್ಥಗಿತಗೊಂಡ ಪರಿಣಾಮ ಸ್ಥಳಿಯರು, ಚುನಾವಣೆ ಕಾರ್ಯಕ್ಕೆ ತೆರಳಬೇಕಿದ್ದ ಸಿಬ್ಬಂದಿ, ಪೊಲೀಸ್ ವಾಹನಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಅಂಬಾರಗೋಡ್ಲು – ಕಳಸವಳ್ಳಿ ಕಡವಿನಲ್ಲಿ ಒಟ್ಟು 4 ಲಾಂಚ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಸಿಗಂದೂರು ಸೇತುವೆ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡ್ ಕಂಪನಿಗೆ ಒಂದು ಲಾಂಚ್ ನೀಡಲಾಗಿದೆ. ಉಳಿದ 3 ಲಾಂಚ್‌ಗಳ ಪೈಕಿ ಒಂದು ತಾಂತ್ರಿಕ ದೋಷದಿಂದ ಏ.13ರಂದು ಸ್ಥಗಿತಗೊಂಡಿದೆ. ಸ್ಥಗಿತಗೊಂಡು ವಾರ ಕಳೆದರೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನುಳಿದ ಎರಡು ಲಾಂಚ್‌ಗಳ ಮೇಲೆ ಕಾರ್ಯಭಾರ ಹೆಚ್ಚಿದ್ದು, ಈ ಪೈಕಿ ಮತ್ತೊಂದು ಲಾಂಚ್‌ನಲ್ಲಿ ಭಾನುವಾರ ಭಾರಿ ತಾಂತ್ರಿಕ ದೋಷ ಕಂಡುಬಂದಿದ್ದು, ಅದೂ ಸ್ಥಗಿತಗೊಂಡಿದೆ.

ಸುರಕ್ಷತೆ ಇಲ್ಲದ ಲಾಂಚ್ ಸೇವೆ: ಸಿಗಂದೂರು ಲಾಂಚ್ ಸುಗಮ ಸಂಚಾರ ನೀಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೇ ನಿರ್ಲಕ್ಷ್ಯದಿಂದ 2020ರ ಸೆಪ್ಟೆಂಬರ್‌ನಲ್ಲಿ ಎರಡು ಲಾಂಚ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪರಾಗಿದ್ದರು. ಲಾಂಚ್ ಡಿಕ್ಕಿ ಪ್ರಕರಣದ ನಂತರವು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ.

‘ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು, ಉಳಿದಿರುವ ಒಂದೇ ಲಾಂಚ್‌ನಲ್ಲಿ ಭಾನುವಾರ ನಿಯಮ ಮೀರಿ ಸೇವೆ ನೀಡಲಾಗುತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಜನರನ್ನು ತುಂಬಿಸುದರಿಂದ ನಮಗೆ ಸುರಕ್ಷತೆಯ ಚಿಂತೆ ಎದುರಾಗಿದೆ’ ಎಂದು ಪ್ರವಾಸಿಗ ನಾಗರಾಜ್ ಪಾವಗಡ ‘ಪ್ರಜಾವಾಣಿ’ ಎದುರು ಆತಂಕ ವ್ಯಕ್ತಪಡಿಸಿದರು.

‘ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸಿಗಂದೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸ್ಥಳೀಯರು ಸಾಗರಕ್ಕೆ ಬರಲು ಹಾಗೂ ಮರಳಿ ತಮ್ಮೂರಿಗೆ ಹೋಗಲು ನಿತ್ಯ ಸಂಕಟ ಎದುರಿಸುವಂತಾಗಿದೆ. ಸ್ಥಳೀಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ನಮ್ಮ ನೋವು ಆಲಿಸಬೇಕು’ ಎಂದು ಮಹಿಳೆಯರು ನೋವು ತೋಡಿಕೊಂಡರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ