Home / ರಾಜಕೀಯ / ಕಾವೇರಿ ನೀರಿಗಾಗಿ ಸೆ. 26ರಂದು ಬೆಂಗಳೂರು ಬಂದ್; ಏನಿರುತ್ತೆ, ಏನಿರಲ್ಲ?

ಕಾವೇರಿ ನೀರಿಗಾಗಿ ಸೆ. 26ರಂದು ಬೆಂಗಳೂರು ಬಂದ್; ಏನಿರುತ್ತೆ, ಏನಿರಲ್ಲ?

Spread the love

ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ)‌ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ (Cauvery Protest) ಬಂದ್‌ ಬಗ್ಗೆ ತೀರ್ಮಾನ ತೆಗೆದುಕೊಂಡ ಬೆನ್ನಿಗೇ ನಾನಾ ಸಂಘಟನೆಗಳು ತಮ್ಮ ಬೆಂಬಲವನ್ನು ಘೋಷಣೆ ಮಾಡಿವೆ.

 

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು. ಬಂದ್‌ ಘೋಷಣೆಯಾದ ಬಳಿಕ ಹಲವು ಸಂಘಟನೆಗಳು ತಾವು ನಿಮ್ಮ ಜತೆಗಿರುತ್ತೇವೆ ಎಂದು ಪ್ರಕಟಿಸಿವೆ. ಸುಮಾರು 150 ಸಂಘಟನೆಗಳು ಬಂದ್‌ಗೆ ಬೆಂಬಲಿಸಿರುವುದರಿಂದ ಬಂದ್‌ ಯಶಸ್ವಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.

ಬಂದ್‌ ದಿನ ಏನು ಇರಲ್ಲ?

ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್‌ಗಳು, ಥಿಯೇಟರ್‌, ಸೂಪರ್ ಮಾರ್ಕೆಟ್‌, ಪೆಟ್ರೋಲ್ ಬಂಕ್‌, ಶಾಲಾ -ಕಾಲೇಜ್‌ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳು, ಕೈಗಾರಿಕೆಗಳು ಹೋಟೆಲ್‌ಗಳು, ಮಾಲ್‌ಗಳು.

ಎಲ್ಲ ಬಿಎಂಟಿಸಿ ಬಸ್‌ ಘಟಕಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತರದಿರಲು ನೌಕರರು ನಿರ್ಧರಿಸಿದ್ದಾರೆ. ಖಾಸಗಿ ಶಾಲೆಗಳಿಗೆ ಬಹುತೇಕ ರಜೆ ಘೋಷಣೆಯಾಗಿದ್ದು, ಪರೀಕ್ಷೆಗಳು ನಡೆಯುವ ಕಡೆ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿ ಬಂದ್‌ಗೆ ಬೆಂಬಲ ಸೂಚಿಸಲಿದ್ದಾರೆ.

ಹಾಗಿದ್ದರೆ ಏನೇನು ಇರಬಹುದು?

– ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್‌ ಸೇರಿದಂತೆ ಅಗತ್ಯ ವಸ್ತುಗಳು ಇರುತ್ತವೆ.
– ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳವಾಗಿ ಸಂಚರಿಸುವ ಸಾಧ್ಯತೆ ಇದೆ.
– ತುರ್ತು ಅಗತ್ಯದ ಸೇವೆಗಳಿಗೆ, ಅದಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಇರಲಾರದು. ಆದರೆ, ಅಧಿಕೃತ ಗುರುತು ಚೀಟಿ ಬೇಕಾದೀತು.
– ಮೆಟ್ರೋ ಸಂಚಾರ ಇರಬಹುದು.

ಮಂಗಳವಾರದ ಬಂದ್ ಹೇಗಿರಲಿದೆ?

1.ಬೆಂಗಳೂರಿನ ಬಹುತೇಕ ಕನ್ನಡ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಸ್ಥಳೀಯವಾಗಿ ಬಂದ್‌ನ್ನು ಯಶಸ್ವಿಗೊಳಿಸುವ ಪ್ರಯತ್ನಗಳನ್ನು ಕಾರ್ಯಕರ್ತರು ನಡೆಸುವ ಸಾಧ್ಯತೆಗಳಿವೆ.

2. ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಶಿವಶಂಕರ್ ಅವರು ಶಾಲೆ ಕಾಲೇಜುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ. ಕಾವೇರಿ ವಿಚಾರವಾಗಿರುವುದರಿಂದ ಬಂದ್‌ಗೆ ಬೆಂಬಲ ಕೊಡುವ ಸಾಧ್ಯತೆಗಳಿವೆ. ಇನ್ನೂ ಅಧಿಕೃತವಾಗಿ ಶಾಲೆ ಕಾಲೇಜುಗಳ ಬಂದ್‌ ಘೋಷಣೆಯಾಗಿಲ್ಲ.

3. ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಅವರು ಬಂದ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಂದು ಎಲ್ಲಾ ವಾಹನಗಳು ಸಂಚಾರ ನಿಲ್ಲಿಸಲಾಗುತ್ತದೆ ಎಂದಿದ್ದಾರೆ.

4.ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.

5. ಓಲಾ, ಉಬರ್‌ ಇರುವುದಿಲ್ಲ: ಬೆಂಗಳೂರಿನಾದ್ಯಂತ ಮಂಗಳವಾರ ಓಲಾ, ಉಬರ್ ಓಡಿಸದಿರಲು ನಿರ್ಧರಿಸಲಾಗಿದೆ ಎಂದು ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.

6. ಆಟೋ, ಟ್ಯಾಕ್ಸಿಗಳು ಇರುವುದು ಡೌಟ್‌: ಹಲವಾರು ಆಟೋ ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂತಿಮವಾಗಿ ಸಮಗ್ರ ಬೆಂಬಲ ದೊರೆಯುವ ನಿರೀಕ್ಷೆ ಇದೆ.

7. ಅಂಗಡಿ ಮುಂಗಟ್ಟುಗಳು ಬಂದ್‌ ಆಗುವ ಸಾಧ್ಯತೆ ಇದೆ. ಜನರು ಸ್ವಯಂಪ್ರೇರಿತವಾಗಿ ಬಂದ್‌ ಮಾಡಬಹುದು.

8. ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತವಾಗುವ ಸಾಧ್ಯತೆ ಇದೆ.

9. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡುವುದಾಗಿ ಪ್ರಕಟಿಸಲಾಗಿದೆ.

10. ಬಿಬಿಎಂಪಿ ನೌಕರರ ಸಂಘ ಬೆಂಬಲ ನೀಡಿದೆ. ಹೀಗಾಗಿ ಕಾರ್ಮಿಕರು, ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.

11. ಸರ್ಕಾರಿ ನೌಕರರ ಸಂಘಟನೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ, ಹಾಜರಾತಿ ವಿರಳ ಆಗಬಹುದು.

12. ಸಿನಿಮಾ ರಂಗ ಬಂದ್‌ನ್ನು ಬೆಂಬಲಿಸುವುದರಿಂದ ಸಿನಿಮಾ ಮಂದಿರಗಳು ಬಂದ್‌ ಇರಲಿವೆ.

ಸಮಗ್ರ ಕರ್ನಾಟಕ ಬಂದ್‌ಗೆ ವಾಟಾಳ್‌ ಚಿಂತನೆ

ಇತ್ತ ಬೆಂಗಳೂರು ಬಂದ್‌ಗೆ ಕರೆ ನೀಡಿದ ಬೆನ್ನಿಗೇ ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ ನಾಗರಾಜ್‌ ಅವರು ಸಮಗ್ರ ಕರ್ನಾಟಕ ಬಂದ್‌ಗೆ ಕರೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಸೋಮವಾರ ಸಮಗ್ರ ಕರ್ನಾಟಕ ಬಂದ್‌ ಕರೆಯ ಬಗ್ಗೆ ಚರ್ಚೆ ನಡೆಯಲಿದೆ ವಾಟಾಳ್ ನಾಗರಾಜ್ ಜೊತೆ ಮಾತುಕತೆ ಬಳಿಕ ರೈತ ಮುಂದಾಳು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಸೆ.26ರಂದು ಬೆಂಗಳೂರು ಜತೆಗೆ ರಾಮನಗರ ಬಂದ್

ರಾಮನಗರ: ರೇಷ್ಮೆನಗರಿ ರಾಮನಗರದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ಸೆ.26ರಂದು ಬೆಂಗಳೂರು ಬಂದ್ ಜತೆಗೆ ರಾಮನಗರ ಬಂದ್ ನಡೆಯಲಿದ್ದು, ರಾಮನಗರ, ಚನ್ನಪಟ್ಟಣ, ಬಿಡದಿ ಸಂಪೂರ್ಣ ಸ್ತಬ್ಧವಾಗಲಿವೆ. ರೈತ ಹಾಗೂ ಕನ್ನಡಪರ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದೆ. ರಾಮನಗರ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಬಂದ್ ಘೋಷಣೆ ಮಾಡಲಾಗಿದೆ. ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಕೀಲರ ಸಂಘ, ಆಟೋ ಚಾಲಕರ ಸಂಘ ಸೇರಿ ಹಲವು ಸಮುದಾಯಗಳಿಂದ ಬಂದ್‌ ಬೆಂಬಲ ವ್ಯಕ್ತವಾಗಿದೆ.

ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಸಂಪೂರ್ಣ ಬಂದ್‌ ಆಗಲಿದೆ. ಮೆಡಿಕಲ್ ಶಾಪ್‌, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತು ಪಡಿಸಿ ಉಳಿದೆಲ್ಲ ಸೇವೆ ಸ್ಥಗಿತವಾಗಲಿದೆ. ಅಂದು ಬೆ.10ಕ್ಕೆ ಎಪಿಎಂಸಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಯಲಿದೆ. ಹಳೇ ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಸಿದ್ಧತೆ‌ ನಡೆದಿದೆ. ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಬಂದ್ ಬೆಂಬಲಿಸುವಂತೆ ಸಂಘಟನೆಗಳ ಮನವಿ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ