Home / ರಾಜಕೀಯ / ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಭೂಮಿಯ ಪರಿಷ್ಕೃತ ಮಾರ್ಗಸೂಚಿ ದರ ಜಾರಿ: ಸಚಿವ ಕೃಷ್ಣ ಬೈರೇಗೌಡ

ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಭೂಮಿಯ ಪರಿಷ್ಕೃತ ಮಾರ್ಗಸೂಚಿ ದರ ಜಾರಿ: ಸಚಿವ ಕೃಷ್ಣ ಬೈರೇಗೌಡ

Spread the love

ಬೆಂಗಳೂರು : ಅಕ್ಟೋಬರ್ 1 ರಿಂದ ರಾಜ್ಯಾದ್ಯಂತ ಭೂಮಿಯ ಪರಿಷ್ಕೃತ ನೂತನ “ಮಾರ್ಗಸೂಚಿ ದರ” (ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನೋಂದಣಿ ಇಲಾಖೆ ಕಾನೂನಿನ ಪ್ರಕಾರ, ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ, ಕಳೆದ ಐದು ವರ್ಷದಿಂದ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ಯಾಯವಾಗಿದ್ದರೆ, ಇದು ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ. ಹೀಗಾಗಿ ನೂತನ ಮಾರ್ಗಸೂಚಿ ದರ ಜಾರಿಯಾಗಲಿದೆ ಎಂದು ತಿಳಿಸಿದರು.

ಮಾರ್ಗಸೂಚಿ ದರ ಯಾವ ಯಾವ ಪ್ರದೇಶಗಳಲ್ಲಿ ಎಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕರಣೆಗೆ ಯಾವ ನಿಯಮಗಳನ್ನು ಅನ್ವಯಿಸಲಾಗಿದೆ ಎಂಬ ಮಾಹಿತಿ ನೀಡಿದ ಸಚಿವರು, “ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ.10 ರಷ್ಟು ಏರಿಕೆ ಮಾಡಲಾಗಿದೆ. ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ. 20 ರಿಂದ ಶೇ.25 ರಷ್ಟು ಹೆಚ್ಚಿಸಲಾಗಿದೆ. ಇನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ಇದ್ದರೆ, ಮಾರುಕಟ್ಟೆ ದರ 10 ಕೋಟಿಗೂ ಅಧಿಕವಿದೆ. ಇಂತಹ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿ ದರವನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ ಎಂದರು.

ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಾಗಿದ್ದರೆ, ಅಂತಹ ಭಾಗದಲ್ಲಿ ಮಾರ್ಗಸೂಚಿ ದರವನ್ನು ಮತ್ತಷ್ಟು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರ್ಗಸೂಚಿ ದರ ಶೇ.0 ಯಿಂದ ಶೇ.50ರ ವರೆಗೆ ಪ್ರತಿಯೊಂದು ಪ್ರದೇಶಕ್ಕೂ ಸಂಬಂಧಿಸಿದಂತೆ ಪ್ರಕರಣದಿಂದ ಪ್ರಕರಣಕ್ಕೆ ಹೆಚ್ಚಾಗಲಿದೆ. ಅಕ್ಟೋಬರ್ 1 ರಂದು ಮೊದಲ ಹಂತವಾಗಿ ಬೆಂಗಳೂರಿನ ಪರಿಷ್ಕೃತ ದರ ಜಾರಿಯಾಗಲಿದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಅಲ್ಲಿನ “ಉಪ ಸಮಿತಿ” ಜೊತೆ ಚರ್ಚಿಸಿ ನೂತನ ಮಾರ್ಗಸೂಚಿ ದರವನ್ನು ಹಂತಹಂತವಾಗಿ ಜಾರಿಗೊಳಿಸಲಿದೆ. ಒಟ್ಟಾರೆಯಾಗಿ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25 ರಿಂದ ಶೇ.30 ರಷ್ಟು ಹೆಚ್ಚಾಗಲಿದೆ” ಎಂದು ಸಚಿವರು ಮಾಹಿತಿ ನೀಡಿದರು.

ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರಬಾರದು ಎಂಬ ಕಾನೂನಿದೆ. ಹೀಗಾಗಿ ಈ ಅಲ್ಪ ನ್ಯೂನ್ಯತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆ ನಿಟ್ಟಿನಲ್ಲಿ ಈ ಕ್ರಮವನ್ನು ಮಾರ್ಗಸೂಚಿ ದರ ಪರಿಷ್ಕರಣೆ ಎಂಬುದಕ್ಕಿಂತ ನ್ಯೂನ್ಯತೆಯನ್ನು ಸರಿಪಡಿಸಲಾಗಿದೆ ಎಂಬುದು ಸೂಕ್ತ ಎಂದು ಸಚಿವರು ಅಭಿಪ್ರಾಯಪಟ್ಟರು. ಮಾರ್ಗಸೂಚಿ ದರ ಪರಿಷ್ಕರಣೆಯಲ್ಲಿ ಯಾರಿಗಾದರೂ ತಕರಾರು ಇದ್ದರೆ, ಅದನ್ನೂ ಸಲ್ಲಿಸಬಹುದು. ಅಧಿಕಾರಿಗಳು ತಕರಾರುಗಳನ್ನೂ ಗಮನಿಸಿ ಹೊಸ ಮಾರ್ಗಸೂಚಿ ದರವನ್ನು ಜಾರಿಗೊಳಿಸುವರು ಎಂದು ತಿಳಿಸಿದರು.

ಕಾವೇರಿ-2 ತಂತ್ರಾಂಶದ ಬಳಕೆಯ ನಂತರ ಆಸ್ತಿ ನೋಂದಣಿಗಳ ಸಂಖ್ಯೆ ಹೆಚ್ಚಳ : ಕಾವೇರಿ-2 ತಂತ್ರಾಂಶ ಜಾರಿಯಾದ ಸಂದರ್ಭದಲ್ಲಿ ಸಣ್ಣಪುಟ್ಟ ನ್ಯೂನ್ಯತೆಗಳು ಇದ್ದದ್ದು ನಿಜ. ಆದರೆ, ಪ್ರಸ್ತುತ ಬಹುತೇಕ ನ್ಯೂನ್ಯತೆಗಳನ್ನೂ ಸರಿಪಡಿಸಲಾಗಿದೆ. ಪರಿಣಾಮ ರಾಜ್ಯದಲ್ಲಿ ಪ್ರತಿದಿನ ಅಂದಾಜು 10 ರಿಂದ 13 ಸಾವಿರ ಆಸ್ತಿ ನೋಂದಣಿಗಳಾಗುತ್ತಿವೆ. ಕೆಲ ದಿನಗಳಲ್ಲಿ ಒಂದೇ ಕಚೇರಿಯಲ್ಲಿ 140ಕ್ಕೂ ಅಧಿಕ ರಿಜಿಸ್ಟ್ರೇಷನ್ ಆಗಿದ್ದೂ ಇದೆ. ಕಳೆದ ವರ್ಷಕ್ಕಿಂತ ಈ ಸೆಪ್ಟೆಂಬರ್ ನಲ್ಲಿ ಈಗಾಗಲೇ 800 ಕೋಟಿ ರೂ. ಗೂ ಅಧಿಕ ಆದಾಯ ಸರ್ಕಾರಕ್ಕೆ ಬಂದಿದೆ. ಇನ್ನೂ ಜನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನವಿಡೀ ಕಾಯುವ ಬದಲು ಕೇವಲ 20 ನಿಮಿಷದಲ್ಲಿ ತಮ್ಮ ಕೆಲಸ ಮುಗಿಸುತ್ತಿದ್ದಾರೆ ಎಂದು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ