Breaking News
Home / Uncategorized / ಮತದಾನ ಮುಗೀತು, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ

ಮತದಾನ ಮುಗೀತು, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ

Spread the love

ಬೆಂಗಳೂರು,ನ.4- ಜಿದ್ದಾಜಿದ್ದಿನ ಕಣವಾಗಿದ್ದ ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗೇನೋ ಮುಗಿದಿದೆ. ಚಳಿ, ಮಳೆ, ಬಿಸಿಲನ್ನೂ ಲೆಕ್ಕಿಸದೇ ಮತ ಬೇಟೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಈಗ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದೀಗ ಅಭ್ಯರ್ಥಿಗಳ ಪರ ಬಾಜಿದಾರರು ಸೋಲು-ಗೆಲುವಿನ ಲೆಕ್ಕಾಹಾಕುತ್ತಿದ್ದು, ಬೆಟ್ಟಿಂಗ್ ಸಮರ ಜೋರಾಗಿ ಸದ್ದು ಮಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದರಿಂದ ತಮಗೆ ಲಾಭವಾಗಬಹುದು ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.ಮತದಾನ ನಡೆದಿರುವ ಮತಗಟ್ಟೆ ಕೇಂದ್ರಗಳ ಪಟ್ಟಿ ಹಿಡಿದಿರುವ ಮುಖಂಡರು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಯಾವ ಬೂತ್‍ನಲ್ಲಿ ಯಾವ ಜಾತಿಯವರಿದ್ದಾರೆ? ಜಾತಿ ಬೆಂಬಲ ಯಾವ ಪಕ್ಷಕ್ಕಿದೆ? ಬೂತ್ ಮಟ್ಟದಲ್ಲಿ ಮತದಾರರ ಸಂಖ್ಯೆ ಎಷ್ಟಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತಿದ್ದಾರೆ.

ಇದಕ್ಕೆ ಪಕ್ಷದ ಮುಖಂಡರು ಸಾಥ್ ನೀಡುತ್ತಿದ್ದು, ಎಳೆ ಎಳೆಯಾಗಿ ಮತದಾನ ವಿವರ ಬಿಚ್ಚಿಡುತ್ತಿದ್ದಾರೆ. ನಾನಾ ಸುದ್ದಿ ವಾಹಿನಿಗಳು ತಿಳಿಸುತ್ತಿರುವ ಚುನಾವಣಾ ಸಮೀಕ್ಷೆಗಳ ವರದಿಯನ್ನು ನೋಡಿ ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಖಚಿತ ಎಂದು ಬೀಗುತ್ತಿದ್ದಾರೆ. ಶಿರಾದಲ್ಲಿ ದಲಿತರು, ಪರಿಶಿಷ್ಟರು, ಅಲ್ಪಸಂಖ್ಯಾತರು, ಕುರುಬರು ಮತ್ತು ಸಣ್ಣ ಸಮುದಾಯಗಳು ಗೆಲುವಿನ ದಡ ಸೇರಿಸಲಿವೆ ಎಂಬ ಅಂದಾಜು ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಮತಗಳು ಮೂವರಿಗೂ ಹಂಚಿಹೋಗಿರುವ ಕಾರಣ, ಒಕ್ಕಲಿಗರು, ಗೊಲ್ಲರು, ಸಣ್ಣ ಸಣ್ಣ ಸಮುದಾಯದ ಜೊತೆಗೆ ಮೇಲ್ವರ್ಗದ ಮತಗಳ ಜತೆಗೆ ಜೆಡಿಎಸ್ ಮತಗಳು ಮತ್ತು ಹೊಸ ಮತದಾರರ ಮತಗಳು ಈ ಬಾರಿ ಬಿಜೆಪಿಗೇ ಬಿದ್ದು, ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರ ಕೋಟೆಯಲ್ಲಿ ಕಮಲದ ಖಾತೆ ತೆರೆಯಲು ನೆರವಾಗಲಿವೆ ಎಂಬ ಸಮೀಕರಣಗಳು ಹರಿದಾಡುತ್ತಿವೆ.

ಆಯಾ ಗ್ರಾಮದ ಪಕ್ಷದ ಕಾರ್ಯಕರ್ತರು ಹಾಗೂ ಆಯಾ ಬೂತ್‍ನಲ್ಲಿದ್ದ ಕಾರ್ಯಕರ್ತರು ಗ್ರಾಮಗಳಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಖರ್ಚು ಮಾಡಿದ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದಾರೆ.

#ಬೆಟ್ಟಿಂಗ್ ದಂಧೆಯೂ ಜೋರು:
ಉಪಚುನಾವಣೆಯಲ್ಲಿ ಜಿಲ್ಲಾಜಿದ್ದಿನ ಕಣವಾಗಿದ್ದ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹಳ್ಳಿಗಳಲ್ಲೂ ರಾಜಕೀಯ ಬೆಳವಣಿಗೆ ಕುರಿತು ಬೆಟ್ಟಿಂಗ್ ಕಟ್ಟುವುದು ಶುರುವಾಗಿದೆ.  ಸದ್ಯ ಕೃಷಿ ಚಟುವಟಿಕೆಗೆ ಬಿಡುವು ಇರುವ ಕಾರಣ ರೈತರು ಕೂಡ ಚುನಾವಣೆ ಬೆಟ್ಟಿಂಗ್‍ನಲ್ಲಿ ಮುಳುಗಿದ್ದಾರೆ. ಇಷ್ಟು ದಿನ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸದ್ದು ಮಾತ್ರ ಕೇಳುತ್ತಿತ್ತು. ಈಗ ಮತದಾನ ಮುಗಿಯುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ.

ಕೆಲವರು ತಮ್ಮ ಬೆಂಬಲಿತ ಅಭ್ಯರ್ಥಿ ಪರ ಕುರಿ, ಮೇಕೆ, ಜೋಡೆತ್ತು, ಮೊಬೈಲ್, ಬೈಕ್ ಇನ್ನಿತರ ವಸ್ತುಗಳ ಮೇಲೆ ಬೆಟ್ಟಿಂಗ್ ಕಟ್ಟಿದರೆ, ಕೆಲವರು ನೇರವಾಗಿ ಹಣವನ್ನು ಬಾಜಿ ಕಟ್ಟುತ್ತಿದ್ದಾರೆ. ಇನ್ನು ಬೆಟ್ಟಿಂಗ್ ಕಟ್ಟುವುದು ಬಹಿರಂಗವಾದರೆ ಪೊಲೀಸ್ ಕೇಸ್ ಆಗಬಹುದು ಎಂಬ ಕಾರಣಕ್ಕೆ ಬಹುತೇಕರು ತೆರೆಮರೆಯಲ್ಲೇ ಬೆಟ್ಟಿಂಗ್ ಕುದುರಿಸುತ್ತಿದ್ದಾರೆ.

ಇದರ ಮಿತಿಯು ನೂರು, ಸಾವಿರ ರೂ.ಗಳಿಂದ ಹಿಡಿದು ಲಕ್ಷಾಂತರ ರೂ. ತನಕ ವ್ಯಾಪಿಸಿದೆ ಎನ್ನಲಾಗಿದೆ. ಚುನಾವಣೆಗೂ ಮುನ್ನ ಪೇಸ್ಬುಕ್, ವಾಟ್ಸಾಪ್, ಟ್ವಿಟರ್‍ನಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು ಈಗ ಬೆಟ್ಟಿಂಗ್ ಹೆಸರಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆಗಿಳಿದಿದ್ದಾರೆ.
ಟೀ ಶಾಪ್, ಹೋಟೆಲ್, ಬಾರ್ ಆಂಡ್ ರೆಸ್ಟೂರೆಂಟ್, ಬಸ್ ನಿಲ್ದಾಣ, ಹೋಮ್ ಸ್ಟೇ, ಬಾಡಿಗೆ ಕಟ್ಟಡಗಳಲ್ಲಿ ಬೆಟ್ಟಿಂಗ್ ದಂಧೆ ಶುರು ಮಾಡಿಕೊಂಡಿದ್ದಾರೆ.

2:3ರ ಅನುಪಾತದಲ್ಲಿ ಬೆಟ್ಟಿಂಗ್ ತಾರಕಕ್ಕೇರಿದೆ. 2 ಲಕ್ಷಕ್ಕೆ 3 ಲಕ್ಷ ರೂ. ಪಣಕ್ಕಿಡಲಾಗುತ್ತಿದೆ. ಕೆಲವೊಂದು ಕಾರ್ಯಕರ್ತರು ಪ್ರತಿಪಕ್ಷಗಳ ಕಾರ್ಯಕರ್ತರ ನಡುವೆ ನೇರವಾಗಿಯೇ ಬಾಜಿ ಕಟ್ಟುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ.

ಕ್ರಿಕೆಟ್, ರಾಜಕೀಯ ಅಭ್ಯರ್ಥಿಗಳ ಮೇಲೂ ಸೇರಿದಂತೆ ಯಾವ ರೀತಿಯ ಬೆಟ್ಟಿಂಗ್ ನಡೆಸಿದರೂ ಅದು ಕಾನೂನು ಬಾಹಿರ. ನಮಗೆ ಇದುವರೆಗೂ ಯಾವುದೇ ರೀತಿಯ ಬೆಟ್ಟಿಂಗ್ ಮಾಹಿತಿ ಬಂದಿಲ್ಲ. ಗೊತ್ತಾದರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುತ್ತೇನೆ. ಈ ಬಗ್ಗೆ ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಲಾಗಿದೆ. ಬೆಟ್ಟಿಂಗ್ ದಂಧೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ15 ಮಂದಿ ಕಣದಲ್ಲಿದ್ದು, ಈ ಪೈಕಿ ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರಾ ನೇರಾ ಪೈಪೊಟಿ ಎದುರಾಗಿದೆ. ಈ ಮೂರು ಪಕ್ಷಗಳಿಂದ ಸ್ಪರ್ಧಿಸಿರುವ ಡಾ.ರಾಜೇಶ್ ಗೌಡ. (ಬಿಜೆಪಿ),ಟಿ.ಬಿ ಜಯಚಂದ್ರ (ಕಾಂಗ್ರೆಸ್) ಅಮ್ಮಾಜಮ್ಮ,( ಜೆಡಿಎಸ್ ) ಇವರಲ್ಲಿ ಯಾರು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ? ಕಾಂಗ್ರೆಸ್ -ಜೆಡಿಎಸ್ ಪೈಪೊಟಿಯಲ್ಲಿ ಬಿಜೆಪಿ ಲಾಭ ಪಡೆಯಲಿದೆಯೇ? ಎಂಬುದರ ಲೆಕ್ಕಾಚಾರ ನಡೆದಿದೆ.

ಈ ಬಾರಿ ತ್ರಿಕೋನ ಸ್ಪರ್ಧೆಯಿಂದಾಗಿ ತಿರುವು ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವೆ ನೇರಾ ಹಣಾಹಣಿ ಇದ್ದ ಕಾರಣ 1:2 ಮತ್ತು 2:3ರ ಅನುಪಾತದಲ್ಲಿ ಬಾಜಿ ನಡೆದಿದೆ.

ಕಳೆದ 20 ದಿನಗಳಿಂದ ಬಿಸಿಲಿನಲ್ಲಿ ಸುತ್ತಿ ಸುಸ್ತಾದ ಅಭ್ಯರ್ಥಿಗಳು ಗೆಲುವು ಸಾಧಿಸಲು ತಂತ್ರ, ಪ್ರತಿತಂತ್ರ ರೂಪಿಸಿದ್ದರು. ಸಾಲದೆಂಬಂತೆ ಆಯಾ ಜÁತಿಯ ಮುಖಂಡರನ್ನು ಕರೆಸಿ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದರು. ಎಲ್ಲ ಪ್ರಕ್ರಿಯೆಗಳಿಗೂ ತೆರೆಬಿದ್ದಿದ್ದು, ಇದೀಗ ಎಲ್ಲರ ಚಿತ್ತ ನವೆಂಬರ್ 10ರಂದು ಪ್ರಕಟವಾಗು ಫಲಿತಾಂಶದತ್ತ ನೆಟ್ಟಿದೆ.


Spread the love

About Laxminews 24x7

Check Also

ಪುನಃ ನಾನೂರು ರೂಪಾಯಿ ದಾಟಿದೆ ಟೊಮ್ಯಾಟೊ ಬೆಲೆ ..!

Spread the loveಚಿಕ್ಕಬಳ್ಳಾಪುರ‌: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ