Breaking News
Home / Uncategorized / ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

Spread the love

ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.


Spread the love

About Laxminews 24x7

Check Also

ರೇವಣ್ಣಗೆ ನ್ಯಾಯಾಂಗ ಬಂಧನ, ಸೆಂಟ್ರಲ್ ಜೈಲಿಗೆ ಶಿಫ್ಟ್

Spread the loveಬೆಂಗಳೂರು: ಶಾಸಕ ಹೆಚ್ ಡಿ ರೇವಣ್ಣನ (HD Revanna) ಸ್ಥಿತಿಯನ್ನು ಹೇಗೆ ವ್ಯಾಖ್ಯಾನಿಸಬೇಕೆಂದು ಅರ್ಥವಾಗುತ್ತಿಲ್ಲ. ಕೇವಲ ಹೊಳೆನರಸೀಪುರ (Holenarasipur) ಮಾತ್ರವಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ