Home / ರಾಜಕೀಯ / ಚಂದ್ರಯಾನ-3: ಕೆಲಸ ಮುಗಿಸಿ ‘ಸ್ಲೀಪ್​ ಮೋಡ್​’ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ

ಚಂದ್ರಯಾನ-3: ಕೆಲಸ ಮುಗಿಸಿ ‘ಸ್ಲೀಪ್​ ಮೋಡ್​’ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ

Spread the love

ನವದೆಹಲಿ: ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್‌ ಮೊದಲು ಸ್ಪರ್ಶಿಸಿದ ಸ್ಥಳವಾದ ‘ಶಿವಶಕ್ತಿ ಪಾಯಿಂಟ್‌’ನಿಂದ ಸುಮಾರು 100 ಮೀಟರ್ ಚಲಿಸಿದ ಬಳಿಕ ಪ್ರಗ್ಯಾನ್ ರೋವರ್ ಅನ್ನು ಸುರಕ್ಷಿತವಾಗಿ ಸ್ಲೀಪ್​ ಮೋಡ್​ನಲ್ಲಿ ಇರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿನ್ನೆ (ಶನಿವಾರ) ತಿಳಿಸಿದೆ.

 

ಈ ಕುರಿತು ‘ಎಕ್ಸ್’ ಆಯಪ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದೀಗ ಸುರಕ್ಷಿತವಾಗಿ ಅದನ್ನು ನಿಲುಗಡೆ ಮಾಡಲಾಗಿದ್ದು, ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಲ್ಯಾಂಡರ್ ಮೂಲಕ ಈ ಪೇಲೋಡ್‌ಗಳಿಂದ ದತ್ತಾಂಶ ಪಡೆಯಲಾಗಿದೆ. ಪ್ರಸ್ತುತ, ಪ್ರಗ್ಯಾನ್ ರೋವರ್ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಿದೆ” ಎಂದು ಮಾಹಿತಿ ನೀಡಿದೆ.

 

 

ಚಂದ್ರನಲ್ಲಿ ಮುಂದಿನ ಸೂರ್ಯೋದಯ ಯಾವಾಗ?: ಚಂದ್ರನಲ್ಲಿ ಸದ್ಯ ಕತ್ತಲು ಅವರಿಸಿದ್ದು, ಸೆಪ್ಟೆಂಬರ್ 22ರಂದು ಸೂರ್ಯನ ಬೆಳಕು ಬೀಳಲಿದೆ. ಈ ವೇಳೆ ಸೌರ ಫಲಕಗಳ ಮೇಲೂ ಸೂರ್ಯನ ಬೆಳಕು ಬೀಳುವ ರೀತಿಯಲ್ಲಿ ರೋವರ್ ನಿಲ್ಲಿಸಲಾಗಿದೆ. ಇದರ ರಿಸೀವರ್ ಆನ್ ಆಗಿದೆ. ಸೆಪ್ಟೆಂಬರ್ 22ರಂದು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಆದಿತ್ಯ ಎಲ್1 ಉಡಾವಣೆ ಯಶಸ್ವಿಯಾದ ಬಳಿಕ ಚಂದ್ರಯಾನ-3 ಬಗ್ಗೆ ಮಾತನಾಡಿದ್ದ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್, “ಚಂದ್ರನ ಮೇಲೆ ರಾತ್ರಿ ಆರಂಭವಾಗಲಿದೆ. ಹೀಗಾಗಿ, ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿರುವ ವಿಕ್ರಮ್​ ಲ್ಯಾಂಡರ್ ಹಾಗೂ ಪ್ರಜ್ಞಾನ್​ ರೋವರ್​ ನಿದ್ರೆಗೆ ಜಾರಲಿವೆ. ರೋವರ್ ಲ್ಯಾಂಡರ್‌ನಿಂದ ಸುಮಾರು 100 ಮೀಟರ್‌ಗಳಷ್ಟು ದೂರ ಚಲಿಸಿದೆ. ಈ ಸಂಬಂಧ ನಮ್ಮ ತಂಡವು ಈಗ ಸಾಕಷ್ಟು ಕೆಲಸ ಮಾಡುತ್ತಿದೆ” ಎಂದು ತಿಳಿಸಿದ್ದರು.

ಚಂದ್ರಯಾನ-3 ಯೋಜನೆಯು 14 ದಿನಗಳ ಮಿಷನ್ ಆಗಿತ್ತು. ಚಂದ್ರನ ಮೇಲಿನ 1 ದಿನ ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ. ರೋವರ್ ಮತ್ತು ಲ್ಯಾಂಡರ್ ಅನ್ನು ಸೂರ್ಯನಿಂದ ಪಡೆಯುವ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ಚಂದ್ರನ ಮೇಲೆ ರಾತ್ರಿಯಾದಾಗ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಸ್ಲೀಪ್ ಮೋಡ್​ನಲ್ಲಿ ಇಡಲಾಗುತ್ತದೆ. ಆದರೆ, ಅಲ್ಲಿನ ತೀವ್ರ ಚಳಿಯಿಂದಾಗಿ ಸೆಪ್ಟೆಂಬರ್ 22ರವರೆಗೆ ಉಪಕರಣ ಸುರಕ್ಷಿತವಾಗಿದ್ದರೆ ಮತ್ತೆ ಸೌರಶಕ್ತಿಯಿಂದ ಕೆಲಸ ಆರಂಭಿಸಬಹುದು ಎಂದು ಇಸ್ರೋ ಭರವಸೆ ವ್ಯಕ್ತಪಡಿಸಿದೆ.

ಕಳೆದ ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ಗಗನನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದ್ದರು. ಇದಾದ 41 ದಿನಗಳ ಬಳಿಕ (ಆಗಸ್ಟ್​ ​23ರಂದು) ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ, ಈ ಧ್ರುವದ ಮೇಲೆ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸಿದ ಹೆಗ್ಗಳಿಕೆ ಭಾರತೀಯ ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಚಂದ್ರನ ಮೇಲೈನಲ್ಲಿ ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಜ್ಞಾನ್​ ರೋವರ್​ ತಮ್ಮಲ್ಲಿರುವ ಅತ್ಯಾಧುನಿಕ ಉಪಕರಣಗಳ ಮೂಲಕ ಹೊಸ ವಿಷಯಗಳನ್ನು ಅಧ್ಯಯನ ಮಾಡಿದ್ದವು. ದಕ್ಷಿಣ ಧ್ರುವದಲ್ಲಿ ಸಲ್ಫರ್​, ಆಮ್ಲಜನಕ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್ ಹಾಗೂ ಸಿಲಿಕಾನ್​ ಧಾತುಗಳಿರುವ ಬಗ್ಗೆ ರೋವರ್​ ಖಚಿತಪಡಿಸಿತ್ತು. ಅಲ್ಲದೇ, ಮೊದಲ ಬಾರಿಗೆ ಪ್ಲಾಸ್ಮಾ ವಾತಾವರಣದ ಬಗ್ಗೆ ಲ್ಯಾಂಡರ್​ನ ‘ರಂಭಾ ಎಲ್​ಪಿ’ ಪೇಲೋಡ್​ ಅಧ್ಯಯನ ಮಾಡಿತ್ತು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ