Breaking News
Home / ರಾಜಕೀಯ / 5 ವರ್ಷ ಸಮಯ ಕೊಟ್ಟೆ ಆದರೂ ಪ್ರತಿಪಕ್ಷಗಳೂ ಸಿದ್ಧತೆ ನಡೆಸಿಲ್ಲ: ಪ್ರಧಾನಿ ಮೋದಿ ವಾಗ್ದಾಳಿ

5 ವರ್ಷ ಸಮಯ ಕೊಟ್ಟೆ ಆದರೂ ಪ್ರತಿಪಕ್ಷಗಳೂ ಸಿದ್ಧತೆ ನಡೆಸಿಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Spread the love

ನವದೆಹಲಿ: ಮಣಿಪುರ ಹಿಂಸಾಚಾರ ವಿಷಯವಾಗಿ ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿಲುವಳಿಗೆ ಗುರುವಾರ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಂಸತ್ತಿಗೆ ಬರುವಾಗ ವಿಶೇಷವಾಗಿ ಅವಿಶ್ವಾಸ ನಿರ್ಣಯವನ್ನು ತಂದಾಗಲೂ ಪ್ರತಿಪಕ್ಷಗಳು ಪೂರ್ವತಯಾರಿ ನಡೆಸಿ ಬರುವುದಿಲ್ಲ ಎಂದು ಕುಟುಕಿದರು.

”2018ರಲ್ಲಿ ಪ್ರತಿಪಕ್ಷಗಳಿಗೆ ಸ್ವಲ್ಪ ತಯಾರಾಗಿ ಬನ್ನಿ ಎಂದು ಹೇಳಿದ್ದೆ. 2023ರಲ್ಲಿ ಬಂದರೂ ಪ್ರತಿಪಕ್ಷಗಳು ತಯಾರಿ ಮಾಡಿಕೊಂಡಿಲ್ಲ. ಕಳೆದ ಐದು ವರ್ಷಗಳ ಸಮಯ ಸಿಕ್ಕರೂ ಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ಅವರ ನಾಯಕರಿಗೆ ದೇಶದ ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲ. ತಮ್ಮ ಪಕ್ಷಗಳ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ. 2028ರಲ್ಲಿ ಮತ್ತೆ ಇದೇ ಅವಿಶ್ವಾಸ ನಿರ್ಣಯದೊಂದಿಗೆ ಬನ್ನಿ. ಆದರೆ, ತಯಾರಿ ಮಾಡಿಕೊಂಡು ಬನ್ನಿ” ಎಂದು ಪ್ರಧಾನಿ ಮೋದಿ ಟೀಕಾಪ್ರಹಾರ ಮಾಡಿದರು.

ಪ್ರತಿಪಕ್ಷದವರು ಯಾರನ್ನು ಶಪಿಸುತ್ತಾರೋ ಅವರು ಜೀವನದಲ್ಲಿ ಏಳ್ಗೆ ಹೊಂದುತ್ತಾರೆ ಎಂದ ಮೋದಿ, “ಪ್ರತಿಪಕ್ಷಗಳಿಗೆ ರಹಸ್ಯ ಶಕ್ತಿ ಇದೆ. ಅದು ಯಾರಿಗೆ ಕೆಟ್ಟದ್ದನ್ನು ಬಯಸುತ್ತವೆಯೋ, ಅದೇ ಆಶೀರ್ವಾದವಾಗಿ ಬದಲಾಗುತ್ತದೆ. ಇದಕ್ಕೆ ನಾನೇ ಜೀವಂತ ಉದಾಹರಣೆ. ಕಳೆದ 20 ವರ್ಷಗಳಿಂದ ನನ್ನನ್ನು ಅವರು ಶಪಿಸುತ್ತಿದ್ದಾರೆ. ಆದರೆ, ನಾನು ಸುಧಾರಿಸುತ್ತಲೇ ಬರುತ್ತಿದ್ದೇನೆ” ಎಂದು ತಿರುಗೇಟು ಕೊಟ್ಟರು.

ನಿಂದನೆಗಳೇ ನನಗೆ ಟಾನಿಕ್ – ಮೋದಿ: “ಮೋದಿ ತೇರಿ ಕಬರ್ ಖುದೇಗಿ (ನಿಮ್ಮ ಸಮಾಧಿ ತೋಡುತ್ತೇವೆ) ಎಂಬುದು ಪ್ರತಿಪಕ್ಷಗಳ ನೆಚ್ಚಿನ ಘೋಷವಾಕ್ಯ. ಕಳೆದ ಮೂರು ದಿನಗಳಲ್ಲಿ ಅವರು ನನ್ನ ವಿರುದ್ಧ ಡಿಕ್ಷನರಿಯಿಂದ ಪದಗಳನ್ನು ಹುಡುಕಿ ತೆಗೆದು ನಿಂದಿಸುತ್ತಿದ್ದಾರೆ. ಆದರೆ, ನಾನು ನಿಮಗೆ ಒಂದು ರಹಸ್ಯ ಹೇಳುತ್ತೇನೆ. ಆ ನಿಂದನೆಗಳನ್ನೇ ನಾನು ಟಾನಿಕ್ ಮಾಡಿಕೊಂಡಿದ್ದೇನೆ” ಎಂದರು.

ಮುಂದುವರೆದು, “ಸರ್ಕಾರದ ಏರೋಸ್ಪೇಸ್ ಸಂಸ್ಥೆ ಎಚ್‌ಎಎಲ್ ಬಗ್ಗೆಯೂ ಕೆಟ್ಟ ಮಾತುಗಳನ್ನೇ ಪ್ರತಿಪಕ್ಷಗಳು ಆಡಿದ್ದವು. ಆದರೆ, ಇಂದು ಹೆಚ್​ಎಎಲ್​​ ಯಶಸ್ಸಿನ ಹೊಸ ಎತ್ತರ ತಲುಪಿದೆ. ಎಲ್‌ಐಸಿ ಕುರಿತೂ ವಂದತಿಗಳನ್ನು ಹರಡಿದರು. ಆದರೆ, ವಿಮಾ ಸಂಸ್ಥೆಯೂ ಹೊಸ ಏಳ್ಗೆಯನ್ನೇ ಕಾಣುತ್ತಿದೆ” ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.

”ಪ್ರತಿಪಕ್ಷಗಳ ನಿಂದನೆಯು ದೇಶದ ಅಭಿವೃದ್ಧಿಯಲ್ಲಿ ‘ಕಾಲ ಟೀಕಾ’ ಇದ್ದಂತೆ’ ಎಂದ ಮೋದಿ, ಜವಾಬ್ದಾರಿಯುತ ಪ್ರತಿಪಕ್ಷಗಳು ನಮ್ಮ ಯೋಜನೆಗಳ ಬಗ್ಗೆ ಕೇಳುತ್ತಿದ್ದವು. ನಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದವು. ಆದರೆ, ಈಗಿನ ಪ್ರತಿಪಕ್ಷಗಳು ಅದು ಹೇಗೆ ಸಂಭವಿಸುತ್ತದೆ ಎಂದು ಪ್ರಶ್ನೆ ಮಾಡುತ್ತವೆ. ಅದನ್ನೂ ನಾವೇ ಪ್ರತಿಪಕ್ಷಗಳಿಗೆ ಹೇಳಬೇಕಾಗಿದೆ. ನಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಕೆಲವು ದಿನಗಳ ಹಿಂದೆ ನಾನು ಹೇಳಿದ್ದೆ. ಈಗಲೂ ಹೇಳುತ್ತೇನೆ. ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜಗತ್ತಿನ ಅಗ್ರ ಮೂರನೇ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಭಾರತವನ್ನು ಮಾಡುತ್ತೇನೆ” ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಡ್ರೈವಿಂಗ್‌ ಲೈಸೆನ್ಸ್‌; ಜೂನ್‌ 1ರಿಂದ ಹೊಸ ರೂಲ್ಸ್‌!

Spread the love ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಬೇಕಿಲ್ಲ. ಬದಲಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ