Breaking News
Home / ರಾಜಕೀಯ / ಕುಡಚಿ: ಇನ್ನೂ ಕಾಡುತ್ತಿದೆ ಮೂಲಸೌಕರ್ಯ ಕೊರತೆ

ಕುಡಚಿ: ಇನ್ನೂ ಕಾಡುತ್ತಿದೆ ಮೂಲಸೌಕರ್ಯ ಕೊರತೆ

Spread the love

ಕುಡಚಿ: ಪರಿಶಿಷ್ಟ ಜಾತಿಗೆ ಮೀಸಲಾದ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕುಡಚಿ ಕೂಡ ಒಂದು. ಹಿಂದುಳಿದ, ಪರಿಶಿಷ್ಟ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಜನ ಇಲ್ಲಿ ಹೆಚ್ಚಾಗಿದ್ದಾರೆ. ನೂತನ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಈ ಎಲ್ಲ ಸಮುದಾಯಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ ಮತ್ತು ಅವರ ಬೇಡಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಅವರ ಯಶಸ್ಸು ನಿಂತಿದೆ.

 

ಕುಡಚಿಯು ಬೆಳಗಾವಿ ಜಿಲ್ಲಾ ಕೇಂದ್ರದಿಂದ 104 ಕಿ.ಮೀ ದೂರವಿದೆ. ಕ್ಷೇತ್ರದ ಜನ ಯಾವುದೇ ಕೆಲಸಕ್ಕೂ ಜಿಲ್ಲಾ ಕೇಂದ್ರಕ್ಕೆ ಬರಬೇಕೆಂದರೆ ಒಂದಿಡೀ ದಿನ ಮೀಸಲಿಡಬೇಕು. ಹೀಗಾಗಿ, ಜಿಲ್ಲಾ ಕೇಂದ್ರಕ್ಕೆ ವಾಹನ ಸೌಕರ್ಯ ಹಾಗೂ ಸುಸಜ್ಜಿತ ರಸ್ತೆ ಮಾಡುವುದು ಅಗತ್ಯವಾಗಿದೆ.

ಪ್ರತಿ ವರ್ಷವೂ ಕೃಷ್ಣಾ ನದಿಯಿಂದ ಕುಡಚಿ, ಖೇಮಲಾಪುರ, ಸಿದ್ದಾಪುರ, ಪರಮಾನಂದವಾಡಿ, ಅಲ್ಪಾರಟ್ಟಿ, ಯಬರಟ್ಟಿ, ಕೋಳಿಗುಡ್ಡ ಸೇರಿದಂತೆ 14 ಗ್ರಾಮಗಳು ಪ್ರವಾಹಕ್ಕೆ ಒಳಗಾಗುತ್ತವೆ. ಸಣ್ಣ ಗ್ರಾಮಗಳನ್ನು ಸ್ಥಳಾಂತರಿಸಿ ಜನರಿಗೆ ಶಾಶ್ವತ ನೆಲೆ ಕಲ್ಪಿಸುವ ದೊಡ್ಡ ಸವಾಲು ಹೊಸ ಶಾಸಕರ ಮುಂದಿದೆ. ಅಲ್ಲದೇ, ಬಸ್ತವಾಡ, ಕಂಕಣವಾಡಿ, ಸವಸುದ್ದಿ, ಹಿಟ್ನಾಳ್‌ ‌ಗ್ರಾಮಗಳೂ ಸೇರಿದಂತೆ ಹಲವು ಕಡೆ ಇನ್ನೂ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ತುರ್ತು ಅಗತ್ಯ.

ಈ ಕ್ಷೇತ್ರದ ಕೆಲವು ಭಾಗಕ್ಕೆ ಹಿಡಕಲ್‌ ಜಲಾಶಯದ ನೀರು ಹರಿಯುತ್ತದೆ. ಮತ್ತೆ ಕೆಲವು ಕಡೆ ಕೃಷ್ಣಾ ನದಿ ಹರಿಯುತ್ತದೆ. ಹೀಗಾಗಿ, ಹಲವು ರೈತರು ಈಗಾಗಲೇ ಕೃಷಿಗೆ ನೀರಾವರಿ ಕಲ್ಪಿಸಿಕೊಂಡಿದ್ದಾರೆ. ಆದರೆ, ಇದು ಸಣ್ಣ ಹಿಡುವಳಿದಾರರಿಗೂ ಅನ್ವಯ ಆಗಬೇಕು. ಕೆರೆಗಳನ್ನು ಕಟ್ಟುವ ಮೂಲಕ ನೀರಾವರಿಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆ ಬಹಳ ದಿನಗಳ ಹಿಂದಿನಿಂದ ಇದೆ.

ಈ ಹಿಂದೆ ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದಿದ್ದರೂ ಅದನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಜನರಿಂದ ಕೇಳಿಬಂದಿದೆ. ಹೊಸ ಶಾಸಕರು ಅದನ್ನು ತನಿಖೆಗೆ ಒಳಪಡಿಸಿ, ಮತ್ತೆ ಕೆರೆ ನಿರ್ಮಾಣ ಹಾಗೂ ಹಳೆಯ ಕೆರೆಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡಬೇಕಿದೆ.

ನಿಲ್ಲಬೇಕಿದೆ ವಲಸೆ: ಶಿಕ್ಷಣ, ಉದ್ಯೋಗ ವಲಸೆ ಕುಡಚಿ ಕ್ಷೇತ್ರವನ್ನು ಹೆಚ್ಚಾಗಿ ಕಾಡುತ್ತಿದೆ. ಉದ್ಯೋಗ ಅರಸಿ ಜನ ಈಗಲೂ ಚಿಕ್ಕೋಡಿ, ಬೆಳಗಾವಿ, ಮೀರಜ್‌, ಗೋವಾ ಕಡೆಗೆ ವಲಸೆ ಹೋಗಬೇಕಾಗಿದೆ. ಅದರಲ್ಲೂ ಪದವಿ ಹಂತದ ಶಿಕ್ಷಣದ ಕೊರತೆ ಎದ್ದುಕಾಣುತ್ತದೆ. ಹೀಗಾಗಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಲು ಶಾಸಕರು ಆದ್ಯತೆ ನೀಡುತ್ತಾರೆ ಎಂಬುದು ಯುವಜನರ ನಿರೀಕ್ಷೆ.

‘ಹಿಂದಿನ ಶಾಸಕರು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಅವರು ತಾಂಡಾಗಳಿಗೇ ಹೆಚ್ಚಿನ ಆದ್ಯತೆ ನೀಡಿದರು. ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯ ಪೂರೈಕೆ ಸರಿಯಾಗಿ ಆಗಲಿಲ್ಲ. ಹೀಗಾಗಿ, ಜನ ಬದಲಾವಣೆ ಬಯಸಿದರು. ಹೊಸ ಶಾಸಕರು ತಮ್ಮ ಅವಧಿಯಲ್ಲಾದರೂ ಕ್ಷೇತ್ರದಲ್ಲೇ ಇದ್ದು ಜನರ ನಂಬಿಕೆ ಉಳಿಸಿಕೊಳ್ಳುತ್ತಾರೆಯೇ, ಹಳೆಯ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತಾರೆಯೇ ನೋಡಬೇಕು’ ಎನ್ನುತ್ತಾರೆ ಖೇಮಲಾಪುರದ ಸಿದ್ದರಾಜ್‌, ಬಸವಣ್ಣ, ಮಹೇಶ.

 ಕುಡಚಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಪರಮಾನಂದವಾಡಿ ಗ್ರಾಮಕ್ಕೆ ನುಗ್ಗಿದ ಪ್ರವಾಹದ ನೀರು (ಸಂಗ್ರಹ ಚಿತ್ರ)‘ಮೂಲಸೌಕರ್ಯಕ್ಕೆ ಆದ್ಯತೆ’

ಮೂಲ ಸೌಕರ್ಯಗಳಿಲ್ಲದೆ ಕುಡಚಿ ಕ್ಷೇತ್ರದ ಜನ ಇನ್ನೂ ಪರದಾಡುತ್ತಿದ್ದಾರೆ. ಹಾಗಾಗಿ ಅದೇ ನನ್ನ ಮೊದಲ ಆದ್ಯತೆ. ಕುಡಿಯುವ ನೀರು ಗ್ರಾಮೀಣ ರಸ್ತೆ ನಿರ್ಮಾಣ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಧಾರಣೆ ಶಿಕ್ಷಣ ಇವುಗಳಿಗೆ ನನ್ನ ಆದ್ಯತೆ ಇರುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದಲ್ಲಿ ಸಾಕಷ್ಟು ಅವಕಾಶಗಳಿವೆ. ಅದನ್ನು ಬಳಸಿಕೊಳ್ಳುತ್ತೇನೆ. -ಮಹೇಂದ್ರ ತಮ್ಮಣ್ಣವರ ಶಾಸಕ ಕುಚಡಿ


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ