Breaking News
Home / ರಾಜಕೀಯ / ಮುಸ್ಲಿಂ ಕೋಟಾ ಬಗ್ಗೆ ರಾಜಕೀಯ ಹೇಳಿಕೆ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ

ಮುಸ್ಲಿಂ ಕೋಟಾ ಬಗ್ಗೆ ರಾಜಕೀಯ ಹೇಳಿಕೆ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ

Spread the love

ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4 ಮೀಸಲಾತಿ ಕೋಟಾ ರದ್ದುಪಡಿಸಿರುವ ವಿಷಯ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಕೆಲವರು ಈ ವಿಚಾರದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿರುವ ವಿಚಾರವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಕರ್ನಾಟಕದಲ್ಲಿ ಶೇಕಡಾ ನಾಲ್ಕರಷ್ಟು ಮುಸ್ಲಿಂ ಕೋಟಾವನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಒಂದು ವಿಷಯದಲ್ಲಿ ನ್ಯಾಯಾಲಯದ ಆದೇಶವಿದ್ದಾಗ ಅದರ ಬಗ್ಗೆ ಒಂದಿಷ್ಟು ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದು ಕೋರ್ಟ್ ಚಾಟಿ ಬೀಸಿತು.

ಕರ್ನಾಟಕ ಮುಸ್ಲಿಂ ಕೋಟಾ ವಿಷಯದ ವಿಚಾರಣೆಯನ್ನು ಇಂದು ಮುಂದೂಡಿದ ಸುಪ್ರೀಂ ಕೋರ್ಟ್, ಮುಂದಿನ ಆದೇಶದವರೆಗೆ ಕೋಟಾ ರದ್ದುಗೊಳಿಸುವ ಆದೇಶವನ್ನು ಜಾರಿಗೊಳಿಸದೇ ಇರುವ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಪ್ರವೇಶಾತಿ ಅಥವಾ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಭರವಸೆ ನೀಡಿದೆ.

ಕರ್ನಾಟಕ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಾವು ಸಾಂವಿಧಾನಿಕ ಪೀಠದ ಮುಂದೆ ಹಾಜರಾಗಬೇಕಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯವನ್ನು ಕೋರಿದ ನಂತರ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪೀಠವು ವಿಚಾರಣೆ ಮುಂದೂಡಿ ಆದೇಶ ನೀಡಿದೆ. ಇದೀಗ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ.

ಸಾಲಿಸಿಟರ್ ಜನರಲ್ ಮೆಹ್ತಾ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ ಸಂದರ್ಭದಲ್ಲಿ, ಮೀಸಲಾತಿ ರದ್ದುಗೊಳಿಸುವಿಕೆಯನ್ನು ಪ್ರಶ್ನಿಸಿದ ಅರ್ಜಿದಾರರು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ವಿಚಾರಣೆಯು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಿ, ಮುಸ್ಲಿಮರಿಗೆ ನೀಡಲಾಗಿದ್ದ ಶೇಕಡಾ 4 ರಷ್ಟು ಮೀಸಲಾತಿ ಅಸಂವಿಧಾನಿಕ ಎಂದು ಹೇಳಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಾಲಿಸಿಟರ್ ಜನರಲ್ ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ನ್ಯಾಯಾಲಯವು ರಾಜಕೀಯ ಹೋರಾಟದ ವೇದಿಕೆಯಲ್ಲ ಎಂದು ಹೇಳಿದರು. ಗೃಹ ಸಚಿವರ ಹೇಳಿಕೆಗೆ ಸುಪ್ರೀಂ ಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿದರೂ ಅದನ್ನು ತನ್ನ ಆದೇಶದಲ್ಲಿ ಲಿಖಿತವಾಗಿ ದಾಖಲಿಸಲಿಲ್ಲ ಹಾಗೂ ಜುಲೈ 25ಕ್ಕೆ ಪ್ರಕರಣವನ್ನು ಮುಂದೂಡಿತು. ಈಗ ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರು ಜೂನ್​ನಲ್ಲಿ ನಿವೃತ್ತರಾಗಲಿರುವುದರಿಂದ ಜುಲೈನಲ್ಲಿ ಪ್ರಕರಣದ ವಿಚಾರಣೆಗೆ ಹೊಸ ಪೀಠವನ್ನು ರಚಿಸಬೇಕಾಗಿದೆ.

ಓ. ಚಿನ್ನಪ್ಪ ರೆಡ್ಡಿ ಆಯೋಗ ಸೇರಿದಂತೆ ಹಲವು ರಾಜ್ಯ ಆಯೋಗಗಳು ಮುಸ್ಲಿಮರನ್ನು ಸಾಮಾಜಿಕವಾಗಿ ಹಿಂದುಳಿದವರು ಎಂದು ವರ್ಗೀಕರಿಸಿದ ನಂತರ 1994 ರಲ್ಲಿ ಎಚ್‌ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು (ಇತರೆ ಹಿಂದುಳಿದ ವರ್ಗ) ನೀಡಲಾಯಿತು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ಇದೇ ವರ್ಷದಲ್ಲಿ ರಾಜ್ಯ ಸರ್ಕಾರವು 2B ಹಿಂದುಳಿದ ವರ್ಗಗಳ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿತು. ನಂತರ ಮಾರ್ಚ್ 27 ರಂದು ಹೊರಡಿಸಿದ ಸರ್ಕಾರಿ ಆದೇಶದ ಮೂಲಕ ಅವರನ್ನು EWS ಕೋಟಾದ ಅಡಿಯಲ್ಲಿ ಸೇರಿಸಿತು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ