Breaking News
Home / ರಾಜಕೀಯ / ಸರಕಾರಕ್ಕೆ ಕೇಳಿಸದಾಯಿತೇ ಸಂತ್ರಸ್ತ ಕುಸ್ತಿಪಟುಗಳ ಆರ್ತನಾದ?

ಸರಕಾರಕ್ಕೆ ಕೇಳಿಸದಾಯಿತೇ ಸಂತ್ರಸ್ತ ಕುಸ್ತಿಪಟುಗಳ ಆರ್ತನಾದ?

Spread the love

ಕ್ರೀಡಾ ಕ್ಷೇತ್ರ ರಾಜಕೀಯದಿಂದ ಹೊರತಾಗಿರಬೇಕು ಎಂಬ ಮಾತು ಸಾರ್ವತ್ರಿಕವಾಗಿದ್ದರೂ ದೇಶದಲ್ಲಿ ಅದು ಅಕ್ಷರಶಃ ಕಾರ್ಯರೂಪಕ್ಕೆ ಬಂದಿಲ್ಲ. ಪ್ರತಿಯೊಂದೂ ಕ್ರೀಡೆಯಲ್ಲೂ ರಾಜಕೀಯದ್ದೇ ಕೈ ಮೇಲಾಗುತ್ತಿದ್ದು ಇದರ ನೇರ ಪರಿಣಾಮ ದೇಶದ ಕ್ರೀಡಾಪಟುಗಳು ಮತ್ತು ಕ್ರೀಡಾ ಕ್ಷೇತ್ರದ ಮೇಲಾಗುತ್ತಿದೆ.

ದಶಕಗಳಿಂದಲೂ ದೇಶದ ಕ್ರೀಡಾರಂಗ ಇಂಥದ್ದೇ ಬೆಳವಣಿಗೆಗೆ ಸಾಕ್ಷಿಯಾಗುತ್ತಾ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದ ಕ್ರೀಡಾರಂಗ ಸಂಪೂರ್ಣವಾಗಿ ಅಲ್ಲದಿದ್ದರೂ ಒಂದಿಷ್ಟು ರಾಜಕೀಯರಹಿತವಾಗಿ ಮುನ್ನಡೆಯುತ್ತ ಬಂದಿದ್ದರ ಪರಿಣಾಮ ದೇಶದ ಕ್ರೀಡಾಳುಗಳು ಹಲವಾರು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತದ ಹೆಸರು ಪದಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಂತಾಗಿತ್ತು. ಭಾರತದ ಈ ಸಾಧನೆಯಲ್ಲಿ ಕುಸ್ತಿ ಕ್ರೀಡಾಪಟುಗಳ ಸಾಧನೆ ಉಲ್ಲೇಖಾರ್ಹವಾದುದಾಗಿದೆ.

ದುರಂತ ಎಂಬಂತೆ ಭಾರತೀಯ ಕುಸ್ತಿ ಸಂಸ್ಥೆ ಈ ವರ್ಷದ ಆರಂಭದಿಂದ ವಿವಾದದ ಕೇಂದ್ರಬಿಂದುವಾಗಿದೆ. ಕುಸ್ತಿ ಸಂಸ್ಥೆಯ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್‌ ಸಿಂಗ್‌ ಅವರ ವಿರುದ್ಧ ದೇಶದ ಹೆಸರಾಂತ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಜನವರಿ ಮಧ್ಯಭಾಗದಲ್ಲಿ ಕುಸ್ತಿಪಟುಗಳು ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಕೇಂದ್ರ ಕ್ರೀಡಾ ಸಚಿವರ ಸಮಕ್ಷಮದಲ್ಲಿ ಹಲವಾರು ಸುತ್ತಿನ ಮಾತುಕತೆಗಳು ನಡೆದು ಕೊನೆಯಲ್ಲಿ ಬ್ರಿಜ್‌ ಭೂಷಣ್‌ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಸಮಿತಿಯೊಂದನ್ನು ರಚಿಸುವ ನಿರ್ಧಾರವನ್ನು ಸಚಿವರು ಪ್ರಕಟಸಿದ ಬಳಿಕ ಕುಸ್ತಿಪಟುಗಳು ಪ್ರತಿಭಟನೆಯನ್ನು ಹಿಂಪಡೆದಿದ್ದರು.ಅದರಂತೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಖ್ಯಾತ ಬಾಕ್ಸರ್‌ ಮೇರಿ ಕೋಮ್‌ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತಲ್ಲದೆ ವರದಿ ಸಲ್ಲಿಕೆಗೆ ತಿಂಗಳ ಗಡುವು ನೀಡಿತ್ತು. ಕೊನೆಗೂ ಎಪ್ರಿಲ್‌ 5ರಂದು ಸಮಿತಿ ತನ್ನ ವರದಿಯನ್ನು ಸಲ್ಲಿಸಿತ್ತು. ಆದರೆ ವರದಿಯನ್ನು ಬಹಿರಂಗಗೊಳಿಸಲಾಗಿರಲಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ತನಿಖಾ ಸಮಿತಿ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಬ್ರಿಜ್‌ಭೂಷಣ್‌ ಅವರಿಗೆ ಕ್ಲೀನ್‌ಚಿಟ್‌ ನೀಡಿದೆ ಎಂಬ ವದಂತಿ ಹರಡುತ್ತಿದ್ದಂತೆಯೇ ಆಕ್ರೋಶಗೊಂಡ ಏಳು ಮಂದಿ ಮಹಿಳಾ ಕುಸ್ತಿಪಟುಗಳು ಬ್ರಿಜ್‌ಭೂಷಣ್‌ ಅವರ ವಿರುದ್ಧ ಏ. 21ರಂದು ಹೊಸದಿಲ್ಲಿಯ ಕಾನ್ನಾಟ್‌ಪ್ಲೇಸ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರಾದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿರಲಿಲ್ಲ. ಇದರಿಂದ ಕ್ರುದ್ಧರಾದ ಕುಸ್ತಿಪಟುಗಳು ಭಾನುವಾರದಿಂದ ಜಂತರ್‌ಮಂತರ್‌ನಲ್ಲಿ ಮತ್ತೆ ಪ್ರತಿಭಟನೆಗಿಳಿದಿದ್ದಾರೆ.

ಪ್ರತಿಭಟನೆಯ ಹೊರತಾಗಿಯೂ ಪೊಲೀಸರಿಂದಾಗಲಿ, ಸರಕಾರದಿಂದಾಗಲಿ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿ, ರಾಜಕೀಯ ಪಕ್ಷಗಳು, ರೈತಪರ ಸಂಘಟನೆಗಳಾದಿಯಾಗಿ ಎಲ್ಲರ ಬೆಂಬಲಯಾಚಿಸಿದ್ದು ಅದರಂತೆ ಮಂಗಳವಾರದಂದು ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿ ಕುಸ್ತಿಪಟುಗಳ ಬೆನ್ನಿಗೆ ನಿಂತಿದ್ದಾರೆ. ಏತನ್ಮಧ್ಯೆ ಪ್ರಕರಣದ ಸಂಬಂಧ ಪ್ರತಿಭಟನನಿರತ ಕುಸ್ತಿಪಟುಗಳು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದು ಇವೆರಡೂ ದಿಲ್ಲಿ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ, ವಿವರಣೆ ಕೇಳಿವೆ.

ಒಟ್ಟಾರೆ ಪ್ರಕರಣವನ್ನು ಕೇಂದ್ರ ಸರಕಾರ ನಿಭಾಯಿಸಿದ ರೀತಿಯೇ ಅನುಮಾನಾಸ್ಪದವಾಗಿದೆ. ಕುಸ್ತಿ ಸಂಸ್ಥೆಯ ಅಧ್ಯಕ್ಷರು ಆಡಳಿತ ಪಕ್ಷದ ಸಂಸದರಾಗಿರುವುದರಿಂದ ಸರಕಾರ ಅವರ ರಕ್ಷಣೆಗೆ ಪ್ರಯತ್ನಿಸುತ್ತಿದೆ ಎಂಬ ಸಂಶಯ ಕುಸ್ತಿಪಟುಗಳನ್ನು ಬಲವಾಗಿ ಕಾಡತೊಡಗಿದೆ. ಕುಸ್ತಿಪಟುಗಳು ಬ್ರಿಜ್‌ಭೂಷಣ್‌ ವಿರುದ್ಧ ಆರೋಪ ಮಾಡಿದ ಸಂದರ್ಭದಲ್ಲಿಯೇ ಅದನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿದ್ದರೆ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಹಾಡಿದಂತಾಗುತ್ತಿತ್ತು. ಆದರೆ ಇಡೀ ಪ್ರಕರಣವನ್ನು ಗೊಂದಲಮಯವಾಗಿಸಿ ತನಿಖೆಯ ಹೆಸರಲ್ಲಿ ವೃಥಾ ಕಾಲಹರಣ ಮಾಡಿದುದು, ತನಿಖಾ ಸಮಿತಿಯಿಂದ ವಿಳಂಬವಾಗಿ ಸಲ್ಲಿಸಲ್ಪಟ್ಟ ವರದಿಯನ್ನೂ ಬಹಿರಂಗಗೊಳಿಸದಿರುವುದು, ದೂರು ನೀಡಿದರೂ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಳ್ಳದಿರುವುದು… ಇವೆಲ್ಲವೂ ಸಹಜವಾಗಿಯೇ ಸಂದೇಹಗಳನ್ನು ಮೂಡಿಸುವಂತೆ ಮಾಡಿವೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ