Breaking News
Home / Uncategorized / ಮನೋಸಂಕಲ್ಪ ಈಡೇರಿಸುವ ಮಾರುತಿ: ಇಂದು ಹನುಮ ಜಯಂತಿ

ಮನೋಸಂಕಲ್ಪ ಈಡೇರಿಸುವ ಮಾರುತಿ: ಇಂದು ಹನುಮ ಜಯಂತಿ

Spread the love

ವಾಯುವಿಗೆ ಎಲ್ಲವನ್ನೂ ಮೀರಿಹೋಗುವ ಶಕ್ತಿಯಿದೆ. ಇದನ್ನು ಮೀರಿಹೋಗುವ ಶಕ್ತಿ ಮನಸ್ಸಿಗಿದೆ. ಇದನ್ನೇ ಮನೋವೇಗ ಎನ್ನುವರು. ಮನೋವೇಗ ವುಳ್ಳವನೇ ಆಂಜನೇಯ. ಆದ್ದರಿಂದ ಇವನನ್ನು ಋಷಿಮುನಿ ಗಳು ‘ಮನೋವೇಗರ ಗಮನ’ ಎಂದಿರುವರು.

ನಮ್ಮ ಮನಸ್ಸಿನಲ್ಲಿರುವ ಸಂಕಲ್ಪವನ್ನು ತಿಳಿದು ಅದಕ್ಕೆ ಸ್ಪಂದಿಸುವ ಹಾಗೂ ಭವಸಾಗರವನ್ನು ದಾಟಿಸುವ ಶಕ್ತಿಯೂ ಆಂಜನೇಯನಿಗಿದೆ.

ಕೇಸರಿ ಎಂಬ ಕಪಿಶ್ರೇಷ್ಠನ ಪತ್ನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೇಸರಿಯು ಮತಂಗ ಮುನಿಗಳ ಬಳಿ ತನ್ನ ನೋವನ್ನು ಹೇಳಿಕೊಂಡನು. ಅದಕ್ಕೆ ಅವರು ‘ಪಂಪಾ ಸರೋವರಕ್ಕೆ ಪೂರ್ವದಲ್ಲಿರುವ ಆಕಾಶಗಂಗೆ ಎಂಬ ತೀರ್ಥದಲ್ಲಿ ಸ್ನಾನಮಾಡಿ ಭಕ್ತಿಯಿಂದ ಶಿವನನ್ನು ಹಾಗೂ ಶ್ಯಾಮಲಾದೇವಿಯನ್ನು ಕುರಿತು ತಪಸ್ಸು ಮಾಡು. ನಿನ್ನ ಇಚ್ಛೆ ನೆರವೇರುತ್ತದೆ’ ಎಂದರು. ಕೇಸರಿಯು ಮುನಿಗಳ ಆಜ್ಞೆಯಂತೆ ಸತತ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿ ಶಿವ ಹಾಗೂ ಶ್ಯಾಮಲಾದೇವಿಯರನ್ನು ಮೆಚ್ಚಿಸಿದನು. ಅವನ ಭಕ್ತಿಗೆ ಮೆಚ್ಚಿ ಶಿವನು ನಿತ್ಯವೂ ಒಂದೊಂದು ಹಣ್ಣನ್ನು ವಾಯುದೇವರ ಮೂಲಕ ಕಳುಹಿಸುತ್ತಿದ್ದನು. ವಾಯು ಶಿವನ ಅಪ್ಪಣೆಯಂತೆ ಆ ಹಣ್ಣನ್ನು ಗಾಳಿಯ ಮೂಲಕ ಆ ಭಕ್ತೆಗೆ ಕೊಡುತ್ತಿದ್ದನು. ವಾಯುವಿನ ಅನುಗ್ರಹ ಮತ್ತು ವರಪ್ರಸಾದದಿಂದ ಆ ಭಕ್ತೆಯು ಗರ್ಭಿಣಿಯಾಗಿ ಆದರ್ಶಪುತ್ರನನ್ನು ಪಡೆದಳು. ಅವನೇ ‘ಆಂಜನೇಯ’.

ಆಂಜನೇಯ ಬ್ರಹ್ಮಚಾರಿಯಾಗಲು ಕಾರಣ: ಆಂಜನೇಯನು ಸೂರ್ಯನಿಂದ ಎಲ್ಲ ವಿದ್ಯೆಯನ್ನು ಕಲಿತು ಜ್ಞಾನವಂತನಾದನು. ‘ಹೇ ದೇವ ಈ ವಿದ್ಯೆಗಳು ನನ್ನಲ್ಲಿಯೇ ಉಳಿಯಬೇಕಾದರೆ ಏನು ಮಾಡಬೇಕು’ ಎಂದು ಕೇಳಿದನು. ಆಗ ಸೂರ್ಯನು ‘ನೀನು ಸಂಸಾರ, ವಿವಾಹ ಬಂಧನಗಳಿಂದ ದೂರ ಇರಬೇಕು. ಬ್ರಹ್ಮಚಾರಿಯಾಗಿಯೇ ಉಳಿದರೆ ಕಲಿತ ವಿದ್ಯೆ ನಿನ್ನಲ್ಲಿಯೇ ಉಳಿದು, ಜಗತ್​ವಿಖ್ಯಾತನಾಗಿ ಮೆರೆಯುವೆ’ ಎಂದನು. ಆಂಜನೇಯನು ಎಲ್ಲ ಬಂಧನಗಳನ್ನು ತ್ಯಜಿಸಿ ಕೊನೆಯವರೆಗೂ ಬ್ರಹ್ಮಚಾರಿಯಾಗಿರುವನು.

ಸೀತಾಮಾತೆಯ ಆಶೀರ್ವಾದ: ಆಂಜನೇಯನು ಸೀತೆಯನ್ನು ಶ್ರೀರಾಮನ ಬಳಿ ಸೇರಿಸಿದನು. ನಂತರ ಶ್ರೀರಾಮ ಪಟ್ಟಾಭಿಷೇಕವನ್ನು ಕಣ್ತುಂಬಿ ನೋಡಿ ಆನಂದಿಸಿದನು. ಆಗ ಸೀತಾಮಾತೆಯು ‘ನೀನು ನನ್ನನ್ನು ಪತಿಯ ಹತ್ತಿರ ಸೇರಿಸಿದೆ, ಅದರ ಫಲವಾಗಿ ಶ್ರೀರಾಮನ ಕೀರ್ತಿ ಎಲ್ಲಿಯವರೆಗೆ ಇರುತ್ತದೆಯೋ, ಸೂರ್ಯಚಂದ್ರರು ಎಲ್ಲಿಯವರೆಗೆ ಇರುವರೋ ಅಲ್ಲಿಯವರೆಗೂ ನೀನು ಚಿರಂಜೀವಿ’ ಎಂದು ಆಶೀರ್ವಾದ ಮಾಡಿದಳು.

ಬ್ರಹ್ಮದೇವನ ಶಾಪ: ಆಂಜನೇಯನಿಗೆ ಬಾಲ್ಯದಲ್ಲಿಯೇ ಬ್ರಹ್ಮದೇವನು ‘ನಿನಗೆ ಬ್ರಹ್ಮಾಸ್ತ್ರದಿಂದ ತೊಂದರೆ ಆಗದಿರಲಿ’ ಎಂದು ವರ ನೀಡಿದನು. ಮಾರುತಿ ಮಹಾವೀರ, ಅಸ್ತ್ರ ದಿವ್ಯಾಸ್ತ್ರ, ಪರಮಾಸ್ತ್ರಗಳನ್ನು ಬಲ್ಲವನಾದನು ಹಾಗೂ ಭೂಮಿ ಹಾಗೂ ಆಕಾಶ ಸೇರಿಸುವ ರೀತಿ ಬೆಳೆದು ನಿಲ್ಲಬಲ್ಲ ಶಕ್ತಿ ಇರುವುದು. ಆದರೆ ಬ್ರಹ್ಮದೇವನೇ ಇವನಿಗೆ ಬ್ರಾಹ್ಮಿಕ ಶಾಪ ನೀಡಿರುವನು. ‘ಆಂಜನೇಯನಿಗೆ ಇರುವ ಅಪರಿಮಿತ ಶಕ್ತಿ ಮರೆತುಹೋಗಲಿ, ಸೂಕ್ತ ಸನ್ನಿವೇಶಗಳಲ್ಲಿ ಯಾರಾದರೂ ನೆನಪು ಮಾಡಿದರೆ ಮಾತ್ರ ಆ ಎಲ್ಲ ಶಕ್ತಿ ಪ್ರಜ್ವಲಿಸಲಿ’ ಎಂದಿರುವನು.

ಸಂಗೀತಪ್ರಿಯ ಆಂಜನೇಯ: ಆಂಜನೇಯನಿಗೆ ಸಂಗೀತದ ಜ್ಞಾನ ಅಪಾರವಾಗಿತ್ತು. ರಾಮನಾಮವನ್ನು ಸಂಗೀತದ ಲಯಬದ್ಧತೆಗೆ ಸೇರಿಸಿ ಹಾಡುತ್ತಿದ್ದನು. ಒಮ್ಮೆ ನಾರದ ಮತ್ತು ತುಂಬುರರಲ್ಲಿ ಸಂಗೀತದ ವಿಷಯದಲ್ಲಿ ಯಾರು ಶ್ರೇಷ್ಠ ಎಂದು ತೀರ್ಮಾನ ಮಾಡುವ ಜವಾಬ್ದಾರಿಯನ್ನು ಮಾರುತಿಗೆ ವಹಿಸಲಾಗಿತ್ತು.

ಪ್ರತಿ ವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ಬರುವುದು ಹನುಮ ಜಯಂತಿ. ಮಾರ್ಗಶಿರ ಮಾಸದ ಶುಕ್ಲಪಕ್ಷದ ತ್ರಯೋದಶಿ ದಿನ ‘ಹನುಮಂತನ ವ್ರತ’ ಆಚರಿಸುವ ರೂಢಿ ಇದೆ. ಆಂಜನೇಯನ ವ್ರತ ಮಾಡುವವರು 24 ದಿನ ಅಥವಾ 48 ದಿನಗಳ ಕಾಲ ನೇಮ, ನಿಷ್ಠೆ, ಬ್ರಹ್ಮಚರ್ಯುಯಿಂದ ಇದ್ದು ಪ್ರತಿದಿನ ಆಂಜನೇಯನ ದೇವಾಲಯಕ್ಕೆ ಹೋಗಬೇಕು ಹಾಗೂ ಸಸ್ಯಾಹಾರವನ್ನೇ ಸೇವಿಸಬೇಕು. ಕೊನೆಯ ದಿನ ಅಂದರೆ ಹನುಮಂತನ ವ್ರತದ ದಿನ ವಿಶೇಷ ಪೂಜೆ ಸಲ್ಲಿಸಿ ಅನ್ನದಾನ ಹಾಗೂ ವಸ್ತ್ರದಾನ ಮಾಡಬೇಕು.

ರಾಮನಾಮದ ರಕ್ಷಾಕವಚ: ಆಂಜನೇಯನಿಗೆ ರಾಮನಾಮದ ರಕ್ಷಾಕವಚ ಇರುವುದ ರಿಂದ ಯಾವ ದುಷ್ಟಶಕ್ತಿಯೂ ಆತನ ಬಳಿ ಬರುವುದಿಲ್ಲ. ನಿರಂತರ ರಾಮಧ್ಯಾನ ಮಾಡುತ್ತಿದ್ದುದರಿಂದ ಶನಿ ಅವನನ್ನು ಪೀಡಿಸಲು ಆಗಲಿಲ್ಲ. ಆದ್ದರಿಂದ ಶನಿದೋಷ, ಸಾಡೇಸಾತ್ ಶನಿ, ಪಂಚಮಶನಿ, ಅಷ್ಟಮಶನಿ ದೋಷ ಇದ್ದವರು ಆಂಜನೇಯನನ್ನು ನಿರಂತರವಾಗಿ ಆರಾಧಿಸುತ್ತಿದ್ದರೆ ದೋಷಗಳಿಂದ ಮುಕ್ತಿ ಹೊಂದಬಹುದು. ಶ್ರೀ ಶಂಕರಾಚಾರ್ಯರು ಸಹ ಆಂಜನೇಯನನ್ನು ಪೂಜಿಸಿರುವರು. ಶ್ರೀ ಮಧ್ವಾಚಾರ್ಯರು ಮಾರುತಿಯ ಅವತಾರ ಎನ್ನಲಾಗು ತ್ತದೆ. ‘ಶ್ರೀರಾಮ ಜಯರಾಮ ಜಯಜಯರಾಮ’ ಮಂತ್ರವನ್ನು ಪ್ರತಿದಿನ 108 ಬಾರಿ ಅಥವಾ 1008 ಬಾರಿ ಪಠಿಸಿದರೆ ದುಃಖಗಳಿಂದ ಪಾರಾಗಬಹುದು


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ