Breaking News
Home / ರಾಜಕೀಯ / ಬಣ್ಣದ ಲೋಕದ ತಾರೆಯರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಖಾಡದಲ್ಲಿ

ಬಣ್ಣದ ಲೋಕದ ತಾರೆಯರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಖಾಡದಲ್ಲಿ

Spread the love

ಬೆಂಗಳೂರು: ಬಣ್ಣದ ಲೋಕದ ತಾರೆಯರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಖಾಡದಲ್ಲಿ ಕಾಣಸಿಗುವುದು ಮಾಮೂಲು. ಅಪಾರ ಅಭಿಮಾನಿಗಳನ್ನು ಹೊಂದಿರುವವರನ್ನು ಕರೆತಂದು ತಮ್ಮ ಪರವಾಗಿ ಸ್ಟಾರ್‌ ಪ್ರಚಾರಕರನ್ನಾಗಿ ಮುಂದೆ ನಿಲ್ಲಿಸಿ, ವಿವಿಧ ಪಕ್ಷಗಳು ಮತ್ತು ಕೆಲ ನಾಯಕರು ಮತಗಳನ್ನು ಸೆಳೆಯುವ ತಂತ್ರ ಅನುಸರಿಸುವುದು ಕೂಡ ಸಾಮಾನ್ಯವೇ.

 

ಹಾಗೆ ನೋಡಿದರೆ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಸಿನೆ ತಾರೆಯರ ದಂಡು ಕಡಿಮೆಯೇ. ಆದರೂ ಈ ಚುನಾವಣೆಯಲ್ಲಿ ಕೆಲವು ಸಿನೆ ತಾರೆಯರು ಸ್ವತಃ ಆಕಾಂಕ್ಷಿಗ ಳಾಗಿದ್ದರೆ, ಇನ್ನು ಹಲವರು ರಾಜಕೀಯ ಪಕ್ಷವನ್ನೇ ಸ್ಥಾಪಿಸಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉತ್ಸಾಹದಲ್ಲಿದ್ದಾರೆ. ಇದರಿಂದ ಚುನಾವಣೆ ಮತ್ತಷ್ಟು ರಂಗೇರುತ್ತಿದೆ.

ಆಕಾಂಕ್ಷಿಗಳಲ್ಲಿ ಬಹುತೇಕ ನಟ- ನಟಿಯರು ಈ ಮೊದಲೇ ಆಯಾ ಪಕ್ಷಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವ ಹಿಸುತ್ತಿದ್ದವರಾಗಿದ್ದಾರೆ. ಇವರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದವರು, ಪೋಷಕ ಪಾತ್ರದಲ್ಲಿ ಮಿಂಚಿದವರು, ತೆರೆಯ ಹಿಂದೆ ಕೆಲಸ ಮಾಡಿದವರೂ ಇದ್ದಾರೆ. ಒಂದು ಕಾಲದಲ್ಲಿ ಸಿನೆಮಾದಲ್ಲಿ ಮಿಂಚಿ ಈಗ ಸಂಪೂರ್ಣವಾಗಿ ರಾಜಕೀಯದಲ್ಲಿ ಸಕ್ರಿಯವಾದವರೂ ಇದ್ದಾರೆ. ಅವರೆಲ್ಲ ಈಗ ಒಂದೊಂದು ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ.
ಈ ಪೈಕಿ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದಾರೆ. 2018ರಲ್ಲಿ ಅಸ್ತಿತ್ವಕ್ಕೆ ಬಂದ ಈ ಪಕ್ಷವು 2019ರ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿತ್ತು. ಆದರೆ ಉಪೇಂದ್ರ ಅವರು ಸ್ಪರ್ಧೆ ಮಾಡಿರಲಿಲ್ಲ.

ಶೀಘ್ರದಲ್ಲಿಯೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉತ್ಸಾಹದಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಂಸ್ಥಾಪಕರು ಕ್ರಿಯಾಶೀಲವಾಗಿ ಆಗಾಗ್ಗೆ ಪೋಸ್ಟ್‌ಗಳನ್ನು ಹಾಕಿ ಗಮನಸೆಳೆಯುವುದನ್ನು ಕಾಣಬಹುದು.

ಮಂಡ್ಯ ಸಂಸದೆ ಮತ್ತು ನಟಿ ಸುಮಲತಾ ಈಚೆಗೆ ಅಧಿಕೃತವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದು ವಿಧಾನಸಭಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅವರ ಮಗ ಮತ್ತು ನಟ ಅಭಿಷೇಕ್‌ ಅಂಬರೀಷ್‌ ಅವರೂ ರಾಜಕೀಯ ಪ್ರವೇಶಿಸುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಇದನ್ನು ಸ್ಪಷ್ಟವಾಗಿ ಸುಮಲತಾ ತಳ್ಳಿಹಾಕಿದ್ದಾರೆ. ಇನ್ನು ಅದೇ ಹಳೆಯ ಮೈಸೂರು ಅಖಾಡದಲ್ಲಿ ಜೆಡಿಎಸ್‌ ಯುವ ನಾಯಕ ಮತ್ತು ನಟ ನಿಖೀಲ್‌ ಕುಮಾರ ಸ್ವಾಮಿ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ. 2019ರಲ್ಲಿ ನಿಖೀಲ್‌ ಮಂಡ್ಯದಿಂದ ಸುಮಲತಾ ವಿರುದ್ಧ ಕಣಕ್ಕಿಳಿದಿದ್ದರು. ತೀವ್ರ ಪೈಪೋಟಿಯೊಡ್ಡಿ ಸೋಲನುಭವಿಸಿದ್ದರು.

ಶಶಿಕುಮಾರ್‌ ರಿ ಎಂಟ್ರಿ: ಮತ್ತೊಂದೆಡೆ ಕೋಟೆನಾಡಿನಿಂದ ನಟ ಮತ್ತು ಮಾಜಿ ಸಂಸದ ಶಶಿಕುಮಾರ್‌ ರಿ-ಎಂಟ್ರಿ ಯಾಗುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಅಥವಾ ಚಳ್ಳಕೆರೆಯಿಂದ ಬಿಜೆಪಿಯಿಂದ ಕಣಕ್ಕಿಳಿಯಲು ಪ್ರಯತ್ನ ನಡೆಸಿದ್ದಾರೆ. ಶಶಿಕುಮಾರ್‌ 1999ರಲ್ಲಿ ಚಿತ್ರದುರ್ಗದ ಸಂಸದರಾಗಿದ್ದರು. 2008ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ತಿಪ್ಪೇಸ್ವಾಮಿ ವಿರುದ್ಧ ಸೋಲನುಭವಿಸಿದ್ದರು.
ಅದೇ ರೀತಿ ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ ತೇರದಾಳದಿಂದ ಕಾಂಗ್ರೆಸ್‌ನಿಂದ ಆಕಾಂಕ್ಷಿಯಾಗಿದ್ದು, ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. 2013ರ ಚುನಾವಣೆಯಲ್ಲಿ ತೇರದಾಳದಿಂದ ಗೆದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು. 2018ರಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ತಾರಾ ಅನುರಾಧ ಬಿಜೆಪಿಯಿಂದ ಜಯನಗರದಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಇದಕ್ಕಾಗಿ ಟಿಕೆಟ್‌ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆರಂಭದಿಂದಲೂ ಬಿಜೆಪಿಯಲ್ಲಿ ಗುರುತಿಸಿ ಕೊಂಡಿರುವ ಅವರು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದ 2018ರ ಅವಧಿಯಲ್ಲಿ ಮೇಲ್ಮನೆ ಸದಸ್ಯೆಯೂ ಆಗಿದ್ದರು.

ಇನ್ನು ನಟಿ ಭಾವನಾ ಯಶವಂತಪುರ ಕ್ಷೇತ್ರದ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ಅವರು ಆ ಪಕ್ಷದ ಸ್ಟಾರ್‌ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಪತ್ನಿ ಶಿಲ್ಪಾ ಗಣೇಶ್‌ ಮತ್ತು ನಟಿ ರೂಪಾ ಅಯ್ಯರ್‌, ಜಯನಗರ ಅಥವಾ ಬಸವನಗುಡಿಯಿಂದ ಬಿಜೆಪಿಯಿಂದ ಕಣಕ್ಕಿಳಿಯುವ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಆಮ್‌ ಆದ್ಮಿ ಪಕ್ಷದಿಂದ ಪೋಷಕ ನಟ “ಮುಖ್ಯಮಂತ್ರಿ’ ಚಂದ್ರು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಆದರೆ ಕ್ಷೇತ್ರ ಇನ್ನೂ ಅಂತಿಮವಾಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅವರು, ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಆಪ್‌ಗೆ ಜಿಗಿದಿದ್ದಾರೆ.

ಹಾಸ್ಯನಟ ಸಾಧು ಕೋಕಿಲಾ ಅಧಿಕೃತವಾಗಿ ಈಚೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಅವರನ್ನು ನೇಮಕ ಮಾಡಲಾಗಿದೆ. ನಟಿ ಶೃತಿ ಕೂಡ ಬಿಜೆಪಿಯಲ್ಲಿದ್ದಾರೆ. ನಟಿ ಮಾಳವಿಕಾ ಅವಿನಾಶ್‌ ಬಿಜೆಪಿ ರಾಜ್ಯ ವಕ್ತಾರೆಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ರುವ ಸುನೀಲ್‌ ಪುರಾಣಿಕ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ನಟ ಮತ್ತು ರಾಜ್ಯಸಭೆ ಸದಸ್ಯ ಜಗ್ಗೇಶ್‌ ಸುಮಾರು ಎರಡು ದಶಕಗಳಿಂದ ರಾಜಕೀಯದಲ್ಲಿದ್ದಾರೆ. ರಮ್ಯಾ ಈ ಹಿಂದೆ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಈ ಹಿಂದೆ ಯಶವಂತಪುರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇನ್ನು ಶಾಸಕ ಕುಮಾರ ಬಂಗಾರಪ್ಪ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ, ಮಧು ಬಂಗಾರಪ್ಪ ಮತ್ತಿತರರು ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದು, ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ