Breaking News
Home / ರಾಜಕೀಯ / ಮಾ.24 ರಿಂದ ಸಾರಿಗೆ ನೌಕರರ ಮುಷ್ಕರ ಗ್ಯಾರೆಂಟಿ

ಮಾ.24 ರಿಂದ ಸಾರಿಗೆ ನೌಕರರ ಮುಷ್ಕರ ಗ್ಯಾರೆಂಟಿ

Spread the love

ಬೆಂಗಳೂರು: ಸರ್ಕಾರ ಈಗಾಗಲೇ ನೀಡಿರುವ ವೇತನ ಪರಿಷ್ಕರಣೆಗೆ ಸಹಮತ ವ್ಯಕ್ತಪಡಿಸದ ಸಾರಿಗೆ ನೌಕರರ ಮತ್ತೊಂದು ಸಂಘಟನೆ, ‘ಈಗಾಗಲೇ ನಿರ್ಧರಿಸಿದಂತೆ ಮಾ.24ರಿಂದ ಸಾರಿಗೆ ನೌಕರರ ಮುಷ್ಕರ ಅಬಾಧಿತ’ ಎಂದು ಘೋಷಿಸಿದೆ.

 

ಸಾರಿಗೆ ನೌಕರರ ವೇತನ ಶೇ.15ರಷ್ಟು ಪರಿಷ್ಕರಣೆ ಮಾಡಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಸಮ್ಮತಿ ಸೂಚಿಸಿ, 21ರಿಂದ ನಡೆಸಲುದ್ದೇಶಿಸಿದ್ದ ಮುಷ್ಕರವನ್ನು ಹಿಂಪಡೆದಿದೆ. ಆದರೆ, ಇದನ್ನು ಒಪ್ಪದ ಕೆಎಸ್‌ಆರ್‌ಟಿಸಿ ನೌಕರರ ಕೂಟವು ಹೋರಾಟ ಮುಂದುವರಿಸಲು ನಿರ್ಧರಿಸಿದೆ.

ಅದರಂತೆ ‘ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಕರೆ ನೀಡಿರುವ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ನಿರ್ಧರಿಸಿದಂತೆ 24ರಂದು ಕರ್ತವ್ಯಕ್ಕೆ ಗೈರುಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಇದು ಮಾಡು ಇಲ್ಲವೇ ಮಡಿ ಹೋರಾಟ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ (ಚಂದ್ರು) ಸ್ಪಷ್ಟಪಡಿಸಿದ್ದಾರೆ.

ಹೋರಾಟ ಹತ್ತಿಕ್ಕುವ ತಂತ್ರ; ‘ಮುಷ್ಕರ ವಾಪಸ್‌ ಪಡೆದ ಸಂಘಟನೆಯು ಸರ್ಕಾರದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಇದೇ ಕಾರಣಕ್ಕೆ ನಾವು ಮುಷ್ಕರಕ್ಕೆ ಕರೆ ನೀಡುತ್ತಿದ್ದಂತೆ, ಅದಕ್ಕೆ ಮುಂಚಿತವಾಗಿ ಮುಷ್ಕರದ ದಿನಾಂಕ ಪ್ರಕಟಿಸಲಾಯಿತು. ನಂತರ ಶೇ. 25ರಷ್ಟು ಪರಿಷ್ಕರಣೆ ಕೇಳಿದಂತೆ ಮಾಡಿ, ನಂತರ ಶೇ. 15ಕ್ಕೆ ಒಪ್ಪಿ ಮುಷ್ಕರ ಕೈಬಿಡುವುದಾಗಿ ಘೋಷಿಸಲಾಯಿತು. ಇದು ನಮ್ಮ ಹೋರಾಟವನ್ನು ಕುಂದಿಸುವ ತಂತ್ರವಷ್ಟೇ. ಆದರೆ, ಇಂತಹ ತಂತ್ರಗಳಿಗೆ ಸಾರಿಗೆ ನೌಕರರು ಮಾರುಹೋಗುವುದಿಲ್ಲ. ಮುಷ್ಕರ ಶತಸಿದ್ಧ’ ಎಂದು ಪುನರುತ್ಛರಿಸಿದ್ದಾರೆ.

‘ಅನಂತ’ ಅಭಿನಂದನೆ: ಈ ಎಲ್ಲ ಬೆಳವಣಿಗೆಗಳ ನಡುವೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ವಕ್ತಾರ ಎಚ್‌.ವಿ. ಅನಂತಸುಬ್ಬರಾವ್‌, ಭಾನುವಾರ ಸಿಎಂ ಬೊಮ್ಮಯಿ ಅವರನ್ನು ಭೇಟಿಯಾಗಿ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ವೇತನ ಪರಿಷ್ಕರಣೆ ಬೇಡಿಕೆಗೆ ತಕ್ಷಣಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಹೂಗುತ್ಛ ನೀಡಿ ಅಭಿನಂದನೆ ಕೋರಿದ ಅನಂತಸುಬ್ಬರಾವ್‌, ‘ಉಳಿದ ಬೇಡಿಕೆಗಳನ್ನೂ ಹಂತ ಹಂತವಾಗಿ ಆದಷ್ಟು ಬೇಗ ಈಡೇರಿಸುವಂತೆ’ ಮನವಿ ಮಾಡಿದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ