Breaking News
Home / ಜಿಲ್ಲೆ / ಬೆಳಗಾವಿ / ಚುನಾವಣಾ ಅಕ್ರಮ ತಡೆಗೆ 24X7 ಹದ್ದಿನ ಕಣ್ಣು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಚುನಾವಣಾ ಅಕ್ರಮ ತಡೆಗೆ 24X7 ಹದ್ದಿನ ಕಣ್ಣು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Spread the love

ಬೆಳಗಾವಿ: ‘ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಕಣ್ಣಿಡಲು ಹಾಗೂ ಅಕ್ರಮ ಚಟುವಟಿಕೆ ತಡೆಯಲು ತಂಡಗಳು 24X7 ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ ಪಾಳಿಯಲ್ಲಿ ಕೆಲಸ ಮಾಡು ಮೂರು ತಂಡ ರಚನೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

 

ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಮತ್ತು ವಿವಿಧ ತಂಡಗಳ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಯಾವುದೇ ರೀತಿಯ ಅಕ್ರಮ ಅಥವಾ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಾಗ ಫ್ಲೈಯಿಂಗ್ ಸ್ಕ್ವಾಡ್ ಟೀಮ್ (ಎಫ್.ಎಸ್.ಟಿ), ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್ (ಎಸ್.ಎಸ್.ಟಿ), ವಿಡಿಯೊ ವೀವಿಂಗ್ ಟೀಮ್ (ವಿ.ಎಸ್.ಟಿ) ಸೇರಿದಂತೆ ಎಲ್ಲ ತಂಡಗಳು ಕೂಡಲೇ ಸ್ಪಂದಿಸಬೇಕು. ಬೆಳಗಾವಿಯು ಗಡಿ‌ ಜಿಲ್ಲೆಯಾದ್ದರಿಂದ ನಗದು, ಮದ್ಯ ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ಅಕ್ರಮವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೂ ಸಾಗಿಸುವ ಸಾಧ್ಯತೆ ಇರುತ್ತವೆ. ಆದ್ದರಿಂದ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಚುನಾವಣಾ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪದೋಷ ಆಗದಂತೆ, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಎಲ್ಲ ನೋಡಲ್ ಅಧಿಕಾರಿಗಳು ಮತ್ತು ತಂಡಗಳು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

‘ಘಟನೆ ಮತ್ತು ಪ್ರಕರಣದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಬೇಕು. ವಿಡಿಯೊ ಚಿತ್ರೀಕರಣ ಮಾಡಿಕೊಂಡು ಖಚಿತ ದಾಖಲೆಗಳೊಂದಿಗೆ ಪ್ರಕರಣ ದಾಖಲಿಸಬೇಕು. ಈ ತಂಡಗಳಿಗೆ ಅಗತ್ಯ ಅಧಿಕಾರ ಮತ್ತು ಪರಿಕರಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದರು.

ಕಠಿಣ ಕ್ರಮ: ‘ಯಾವುದೇ ವ್ಯಕ್ತಿ ಅಥವಾ ಪಕ್ಷಗಳ ಜತೆ ಗುರುತಿಸಿಕೊಳ್ಳದೇ ನಿಷ್ಪಕ್ಷಪಾತದಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಲೋಪವೆಸಗಿದರೆ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಅಲ್ಲದೇ ಯಾವುದೇ ಚುನಾವಣಾಧಿಕಾರಿಯ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಮಾಹಿತಿ ಬಂದರೆ ತಂಡಗಳು ಸಮಯ ವ್ಯರ್ಥ ಮಾಡದೇ ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು. ಏನೇ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದುವರಿಯಬೇಕು’ ಎಂದು ಪೊಲೀಸ್ ಆಯುಕ್ತರಾದ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.

‘ಮತದಾರರನ್ನು ಓಲೈಸಲು ಉಡುಗೊರೆ, ಸೀರೆ, ಗೃಹಬಳಕೆಯ ವಸ್ತುಗಳನ್ನು ಹಂಚುವುದು ಅಥವಾ ಯಾವುದೇ ರೀತಿಯ ಆಸೆ -ಆಮಿಷ ಒಡ್ಡುವುದು ಕಂಡುಬಂದರೆ ಎಫ್.ಎಸ್.ಟಿ. ತಂಡದವರು, ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಬೇಕು’ ಎಂದರು.

‘ಚುನಾವಣಾಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ಪ್ರಚಾರ ಮತ್ತಿತರ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ, ಒಂದೇ ಸಮಯದಲ್ಲಿ ಎರಡು ಪಕ್ಷಗಳಿಗೆ ನೀಡುವ ಬದಲು ಸಮಯ ಹೊಂದಾಣಿಕೆ ಮಾಡಿ ಅನುಮತಿಯನ್ನು ನೀಡಬಹುದು’ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ ಮತ್ತಿತರರು ಇದ್ದರು.

23 ಸಾವಿರಕ್ಕೂ ಅಧಿಕ ಸಿಬ್ಬಂದಿ
ಜಿಲ್ಲೆಯ 18 ಮತಕ್ಷೇತ್ರಗಳಲ್ಲಿ ಒಟ್ಟಾರೆ 23 ಸಾವಿರಕ್ಕಿಂತ ಅಧಿಕ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಹಾಗೂ ವಿವಿಧ ತಂಡಗಳ ಸದಸ್ಯರೂ ಸೇರಿದಂತೆ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿ ತಿಳಿಸಿಕೊಡುವ ಉದ್ಧೇಶದಿಂದ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ