Breaking News
Home / Uncategorized / ಜಾರಕಿಹೊಳಿ ಕುಟುಂಬದ ಮುಂದೆ ಮಂಡಿಯೂರಿದ ರಾಷ್ಟ್ರೀಯ ಪಕ್ಷಗಳು

ಜಾರಕಿಹೊಳಿ ಕುಟುಂಬದ ಮುಂದೆ ಮಂಡಿಯೂರಿದ ರಾಷ್ಟ್ರೀಯ ಪಕ್ಷಗಳು

Spread the love

ಬೆಳಗಾವಿ: ಅಣ್ಣ ಕಾಂಗ್ರೆಸ್‌ನಿಂದ ಸ್ಪರ್ಧೆ. ತಮ್ಮ ಬಿಜೆಪಿಯಿಂದ ಸಹೋದರನ ವಿರುದ್ಧವೇ ಸ್ಪರ್ಧೆ. ಅನಂತರ ಕಾಲ ಬದಲು. ಅಣ್ಣ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧೆ. ಈ ಕಡೆ ಮತ್ತೊಬ್ಬ ಸಹೋದರ ಕಾಂಗ್ರೆಸ್‌ನಿಂದ ಅಣ್ಣನಿಗೆ ಪೈಪೋಟಿ…

ಒಂದೇ ಕ್ಷೇತ್ರದಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಟಿಕೆಟ್‌ಗಳು ಒಂದೇ ಕುಟುಂಬದ ಇಬ್ಬರು ಸಹೋದರರ ನಡುವೆ ಹಂಚಿಕೆಯಾದ ಉದಾಹರಣೆ ಬಹುಶಃ ಬೇರೆ ಎಲ್ಲೂ ಇರಲಿಕ್ಕಿಲ್ಲ. ಆದರೆ ಅಂತಹ ಅಪರೂಪದ ಉದಾಹರಣೆ ಗಡಿ ಜಿಲ್ಲೆ ಬೆಳಗಾವಿಯಲ್ಲಿದೆ.

ಗಡಿ ಜಿಲ್ಲೆ ಬೆಳಗಾವಿಯ ರಾಜಕಾರಣ ಎಂದರೆ ಥಟ್ಟನೆ ನೆನಪಾಗುವುದು ಜಾರಕಿಹೊಳಿ ಸಹೋದರರ ಕುಟುಂಬ ರಾಜಕೀಯ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಹೋದರರ ಮುಖಾಮುಖೀ. ರಾಜಕೀಯದಲ್ಲಿ ಬಹಳ ಗಟ್ಟಿಯಾಗಿ ಬೇರು ಬಿಟ್ಟಿರುವ ಈ ಕುಟುಂಬದ ಸದಸ್ಯರು ಪ್ರಮುಖ ಪಕ್ಷಗಳನ್ನೇ ತಮ್ಮ ಮುಷ್ಟಿ ಯಲ್ಲಿ ಇಟ್ಟುಕೊಂಡ, ಸರಕಾರದ ಪತನ ಮತ್ತು ರಚನೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಉದಾಹರಣೆ ರಾಜ್ಯದ ಜನರ ಮುಂದಿವೆ.

ಗೋಕಾಕದಲ್ಲಿ ಇವರದ್ದೇ ಸಾಮ್ರಾಜ್ಯ: 1999ರಿಂದ ಗೋಕಾಕ ಕ್ಷೇತ್ರವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಜಾರಕಿಹೊಳಿ ಕುಟುಂಬ ಬೇರೆ ಯಾವ ವ್ಯಕ್ತಿಗೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸದಂತೆ ಮಾಡಿದ್ದಾರೆ.

ಅಷ್ಟೇ ಏಕೆ ಪ್ರಮುಖ ಪಕ್ಷಗಳ ನಾಯಕರು ಗೋಕಾಕ ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಮೊದಲು ತಮ್ಮ ಮಾತು ಕೇಳಲೇಬೇಕು ಎಂಬ ವಾತಾವರಣ ನಿರ್ಮಾಣ ಮಾಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಒಂದು ಉಪಚುನಾವಣೆ ಸಹಿತ ಆರು ಬಾರಿ ಗೋಕಾಕ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿರುವ ರಮೇಶ್‌ ಜಾರಕಿಹೊಳಿ ಮೂರು ಬಾರಿ ತಮ್ಮ ಸ್ವಂತ ಸಹೋದರರಿಂದ ಸ್ಪರ್ಧೆ ಎದುರಿಸಿದ್ದಾರೆ. ಇದೂ ಸಹ ಒಂದು ದಾಖಲೆಯೇ ಸರಿ.

2008ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಭೀಮಸಿ ಜಾರಕಿಹೊಳಿ ಸಹೋದರ ರಮೇಶ್‌ಅವರಿಗೆ ಪೈಪೋಟಿ ಒಡ್ಡಿದ್ದರು. ಆಗ ಭೀಮಸಿ ಜಾರಕಿಹೊಳಿ ಕಾಂಗ್ರೆಸ್‌ನ ರಮೇಶ್‌ ಅವರ ಡಮ್ಮಿ ಕ್ಯಾಂಡಿಡೇಟ್‌ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಒಂದೇ ಮನೆಯಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳು ಎಂಬುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಆಗ ಭೀಮಸಿ ಜಾರಕಿಹೊಳಿ ಬಿಜೆಪಿ ಪರವಾಗಿದ್ದ ಮತಗಳನ್ನು ಕಬಳಿಸುವ ಮೂಲಕ ರಮೇಶ್‌ ಜಾರಕಿಹೊಳಿ ಅವರನ್ನು ಸೋಲಿನಿಂದ ಪಾರು ಮಾಡಿದ್ದರು ಎಂಬುದು ಅಚ್ಚರಿ ಎನಿಸಿದರೂ ಸತ್ಯ.

ಟಕ್ಕರ್‌ ಕೊಟ್ಟಿದ್ದ ಅಶೋಕ ಪೂಜಾರಿ: 2008ರ ಚುನಾವಣೆಯಲ್ಲಿ ರಮೇಶ್‌ ಜಾರಕಿಹೊಳಿ ಅವರ ಬದ್ಧ ರಾಜಕೀಯ ವೈರಿ ಅಶೋಕ ಪೂಜಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಆಗ ಜಯದ ಮಾತು ಕಷ್ಟ ಎಂಬುದನ್ನು ಅರಿತಿದ್ದ ರಮೇಶ್‌ಜಾರಕಿಹೊಳಿ ತಮ್ಮ ಮತ್ತೂಬ್ಬ ಸಹೋದರ ಬಾಲಚಂದ್ರ ಅವರ ಜತೆಗೆ ದಿಲ್ಲಿ ಮಟ್ಟದಲ್ಲಿ ತೀವ್ರ ಪ್ರಯತ್ನ ನಡೆಸಿ ತಮ್ಮ ಸಹೋದರ ಭೀಮಸಿ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದರು.

ಈ ಚುನಾವಣೆಯಲ್ಲಿ ರಮೇಶ್‌ ಜಾರಕಿಹೊಳಿ 44989 ಮತಗಳನ್ನು ಪಡೆದಿದ್ದರೆ ಜೆಡಿಎಸ್‌ನ ಅಶೋಕ ಪೂಜಾರಿ 37229 ಮತಗಳನ್ನು ಪಡೆದು ಕೊಂಡಿದ್ದರು. ಪೂಜಾರಿ ಅವರ ಗೆಲುವಿಗೆ ಮುಳು ವಾದ ಭೀಮಸಿ ಜಾರಕಿಹೊಳಿ 34958 ಮತಗಳನ್ನು ಪಡೆದುಕೊಂಡಿ ದ್ದರು. ಬಿಜೆಪಿ ಪರವಾಗಿದ್ದ ಲಿಂಗಾಯತ ಸಮುದಾ ಯದ ಮತಗಳು ಭೀಮಸಿ ಪಾಲಾಗಿದ್ದವು. ಅಶೋಕ ಪೂಜಾರಿ ತಮ್ಮ ಸಮುದಾಯದ ಮತಗಳಿಂದ ವಂಚಿತರಾಗಿ ಏಳು ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಮುಂದೆ 2013ರ ಚುನಾವಣೆಯಲ್ಲಿ ಭೀಮಸಿ ಮತ್ತೆ ರಮೇಶ್‌ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಆಗ ಅವರು ಪಡೆದ ಮತ ಗಳು 2000 ದಾಟಿರಲಿಲ್ಲ. ಇಲ್ಲಿಯೂ ಜಾರಕಿಹೊಳಿ ಅವರ ಪರವಾಗಿದ್ದಂತೆ ಕಂಡುಬಂದ ವಾಸುದೇವ ಸವತಿಕಾಯಿ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿತ್ತು. ಬಿಜೆಪಿ ಅಭ್ಯರ್ಥಿಗೆ ಕೇವಲ 4,293 ಮತಗಳು ಬಿದ್ದಿದ್ದವು ಎಂಬುದು ಗಮನಿಸ ಬೇಕಾದ ಸಂಗತಿ. ರಮೇಶ್‌ ಜಾರಕಿಹೊಳಿ 79,175 ಮತಗಳನ್ನು ಪಡೆದರೆ ಜೆಡಿಎಸ್‌ನ ಅಶೋಕ ಪೂಜಾರಿ 51,170 ಮತಗಳನ್ನು ಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯ ಠೇವಣಿ ಜಪ್ತಿಯಾಗಿತ್ತು.

ಡಮ್ಮಿ ಅಭ್ಯರ್ಥಿ ಆಟ: 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಅನಂತರ ರಾಜೀನಾಮೆ ನೀಡಿ ಬಿಜೆಪಿಯಿಂದ ಉಪಚುನಾವಣೆ ಎದುರಿಸಿದ ರಮೇಶ್‌ ಜಾರಕಿ ಹೊಳಿ ಅವರಿಗೆ ಮತ್ತೂಬ್ಬ ಸಹೋದರ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನಿಂದ ಸ್ಪರ್ಧೆ ಒಡ್ಡಿದ್ದರು. ಇಲ್ಲಿಯೂ ಸಹ ಲಖನ್‌ ಡಮ್ಮಿ ಅಭ್ಯರ್ಥಿ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತೀ ಚುನಾವಣೆ ಯಲ್ಲಿ ಕಾಂಗ್ರೆಸ್‌ನಿಂದ ರಮೇಶ್‌ ಜಾರಕಿಹೊಳಿಗೆ ಬೀಳುತ್ತಿದ್ದ ಮತಗಳು ಲಖನ್‌ ಪರವಾದವು. ರಮೇಶ್‌ ಜಾರಕಿಹೊಳಿ ತಮ್ಮ ಖಚಿತ ಮತಗಳ ಜತೆಗೆ ಬಿಜೆಪಿ ಮತಗಳನ್ನು ಬಾಚಿಕೊಂಡರು.

ಈ ಉಪಚುನಾವಣೆಯಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ತಮ್ಮ ಮೈತ್ರಿ ಸರಕಾರದ ಪತನಕ್ಕೆ ರಮೇಶ್‌ ಜಾರಕಿಹೊಳಿ ಪ್ರಮುಖ ಸೂತ್ರದಾರ ಎಂದು ಗೊತ್ತಿದ್ದರೂ ಕಾಂಗ್ರೆಸ್‌ ನಾಯಕರು ಅದೇ ಕುಟುಂಬದ ಲಖನ್‌ ಜಾರಕಿಹೊಳಿ ಅವರಿಗೆ ಟಿಕೆಟ್‌ ಕೊಟ್ಟಿದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಕಾಂಗ್ರೆಸ್‌ನ ಕೆಲವು ನಾಯಕರ ನೈತಿಕತೆಯನ್ನು ಪ್ರಶ್ನೆ ಮಾಡಲಾಗಿತ್ತು. ಸತೀಶ್‌ ಜಾರಕಿಹೊಳಿ ಅವರು ಸಹೋದರ ಲಖನ್‌ ಪರ ಪ್ರಚಾರ ಮಾಡಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ಕೊನೆಗೆ ಮತ್ತೆ ಇಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರೇ ಶಾಸಕರಾಗಿ ಗೆದ್ದು ಬಂದರು.

ನಾಲ್ವರು ಸೋದರರು ಶಾಸಕರು
ದಶಕದ ಹಿಂದೆ ಗೋಕಾಕದಲ್ಲಿ ಆರಂಭವಾದ ಜಾರಕಿಹೊಳಿ ಕುಟುಂಬದ ರಾಜಕಾರಣ ವರ್ಷಗಳು ಕಳೆದಂತೆ ಮತ್ತಷ್ಟು ಪ್ರಬಲವಾಗಿದೆ. ಐವರು ಸಹೋದರರ ಪೈಕಿ ನಾಲ್ವರು ಶಾಸಕರಾಗಿರುವುದೇ ಇದಕ್ಕೆ ಸಾಕ್ಷಿ. ಮೂವರು ವಿಧಾನಸಭೆಯಲ್ಲಿದ್ದರೆ, ಒಬ್ಬರು ವಿಧಾನ ಪರಿಷತ್‌ನಲ್ಲಿದ್ದಾರೆ.

CREDITS TO ಕೇಶವ ಆದಿ

 


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ